ಕೃಷ್ಣಮೂರ್ತಿಗೆ ಸಚಿವ ಸ್ಥಾನ ನೀಡಲು ಡಿಎಸ್‌ಎಸ್ ಭೀಮಮಾರ್ಗ ಆಗ್ರಹ : ದಲಿತ ಸಮುದಾಯದ ಪರವಾಗಿ ಮುಖ್ಯಮಂತ್ರಿ ಹಾಗೂ ಡಿಸಿಎಂಗೆ ಮನವಿ

ಕೃಷ್ಣಮೂರ್ತಿಗೆ ಸಚಿವ ಸ್ಥಾನ ನೀಡಲು ಡಿಎಸ್‌ಎಸ್ ಭೀಮಮಾರ್ಗ ಆಗ್ರಹ : ದಲಿತ ಸಮುದಾಯದ ಪರವಾಗಿ ಮುಖ್ಯಮಂತ್ರಿ ಹಾಗೂ ಡಿಸಿಎಂಗೆ ಮನವಿ DSS Bhimamarga demands to give Krishnamurthy a ministerial position: Appeal to Chief Minister and DC

ಬಳ್ಳಾರಿ 29 :  ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಆರ್ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಭೀಮಮಾರ್ಗ) ಬಳ್ಳಾರಿ ಜಿಲ್ಲಾ ಸಂಚಾಲಕರು ಸಿ. ಗಾದಿಲಿಂಗಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ಈ ಕುರಿತು ಮಾತನಾಡಿ, ಸಿ. ಗಾದಿಲಿಂಗಪ್ಪ ರವರು ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಹೆಸರು ಮಾಡಿರುವ ದಿವಂಗತ ಬಿ. ರಾಚಯ್ಯ ಅವರ ಸಾಧನೆ ಮತ್ತು ಸೇವೆ ಅಪಾರವಾಗಿದೆ ಎಂದು ಸ್ಮರಿಸಿದರು.

1952ರಿಂದ ಶಾಸಕರಾಗಿ ಜನಸೇವೆ ಆರಂಭಿಸಿದ್ದ ಬಿ. ರಾಚಯ್ಯ ಅವರು ವಿವಿಧ ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದು, 1962ರಲ್ಲಿ ನಿಜಲಿಂಗಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ 1972ರಲ್ಲಿ ವೀರೇಂದ್ರ ಪಾಟೀಲ್ ಸಚಿವ ಸಂಪುಟದಲ್ಲಿಯೂ ಸಚಿವರಾಗಿ ಕಾರ್ಯನಿರ್ವಹಿಸಿ ಜನಪರ ಆಡಳಿತ ನೀಡಿದ್ದರು ಎಂದು ವಿವರಿಸಿದರು.ಮುಂದೆ ದೇವರಾಜ ಅರಸು ಅವರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ಹಾಗೂ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಬಿ. ರಾಚಯ್ಯ ಅವರು, ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಕೇಂದ್ರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಬಳಿಕ ಮಾಜಿ ಪ್ರಧಾನಿ ವಿ.ಪಿ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ, ಚಂದ್ರಶೇಖರ್ ಅವರ ಸರ್ಕಾರದಲ್ಲಿ ಕೇರಳ ರಾಜ್ಯದ ರಾಜ್ಯಪಾಲರಾಗಿ ಹಾಗೂ ಪಿ.ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ಹೆಚ್ಚುವರಿಯಾಗಿ ಗೋವಾ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆದಿದ್ದರು ಎಂದು ತಿಳಿಸಿದರು.ಇಂತಹ ಮಹಾನ್ ರಾಜಕೀಯ ನಾಯಕನಾದ ಬಿ. ರಾಚಯ್ಯ ಅವರ ಸುಪುತ್ರರಾದ ಎ.ಆರ್ ಕೃಷ್ಣಮೂರ್ತಿ ಅವರು 1994 ಹಾಗೂ 1999ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸಿದ್ದರು.

2004ರಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ (ಇಗಿಒ) ಮತ ಎಣಿಕೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಸೋಲು ಅನುಭವಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಗೊಂಡು ಪಕ್ಷದ ಸಂಘಟನೆ ಬಲಪಡಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.19 ವರ್ಷಗಳ ಬಳಿಕ ಮತ್ತೆ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿರುವ ಎ.ಆರ್ ಕೃಷ್ಣಮೂರ್ತಿ ಅವರು 1,08,363 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಮೀಸಲು ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ 59,519 ಮತಗಳ ಅಂತರದಿಂದ ಜಯಗಳಿಸಿ ದಾಖಲೆ ನಿರ್ಮಿಸಿರುವುದು ಗಮನಾರ್ಹ ಸಾಧನೆಯಾಗಿದೆ ಎಂದು ಗಾದಿಲಿಂಗಪ್ಪ ಅಭಿಪ್ರಾಯಪಟ್ಟರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ. ರಾಚಯ್ಯ ಅವರ ಚಿಂತನೆ ಹಾಗೂ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ತಮ್ಮ ಮೊದಲ ಮುಖ್ಯಮಂತ್ರಿ ಅವಧಿಯಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಘೋಷಿಸಿದ್ದರು. ನಂತರ ಎರಡನೇ ಅವಧಿಯಲ್ಲಿ ಸ್ವತಃ ಸ್ಮಾರಕ ಉದ್ಘಾಟನೆ ಮಾಡುವ ಮೂಲಕ ಅವರ ಸೇವೆಯನ್ನು ಜನಮನದಲ್ಲಿ ಶಾಶ್ವತಗೊಳಿಸಿದ್ದಾರೆ ಎಂದು ಹೇಳಿದರು.