ಮತದಾನ ಪ್ರಕ್ರಿಯೆ ವಿಕ್ಷೀಸಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ

85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಮತದಾನಕ್ಕೆ ಚಾಲನೆ 

ಹಾವೇರಿ 27:  ಲೋಕಸಭಾ ಸಾರ್ವತ್ರಿಕ ಚುನಾಚಣೆ ಅಂಗವಾಗಿ 85 ವರ್ಷ   ಮೇಲ್ಪಟ್ಟ ಹಿರಿಯ ಮತದಾರರು ಹಾಗೂ ವಿಶೇಷ ಚೇತನ ಮತದಾರರಿಗೆ ಭಾರತ ಚುನಾವಣಾ ಆಯೋಗ ಮಾರ್ಗಸೂಚಿಯಂತೆ ಮನೆಯಲ್ಲೇ ಮತದಾನ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಹಾವೇರಿ ನಗರದ ವಿದ್ಯಾನಗರ ಬಡಾವಣೆಯೊಂದರೆ ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಮನೆ ಮನೆ ಮತದಾನಕ್ಕೆ ಚಾಲನೆ ನೀಡಿದರು. 

ಹಾವೇರಿ ಶಹರದ ವಿದ್ಯಾನಗರದ ಸಿ ಬ್ಲಾಕ್ (ಆನೆಪಾರ್ಕ್‌ ಹತ್ತಿರ) ನಿವಾಸಿ 87 ವರ್ಷದ ಶ್ರೀಮತಿ ಯಮುನಾಬಾಯಿ ಪವಾರ ಅವರು ಮನೆಯಲ್ಲೇ ಮತದಾನ ಮಾಡಿದರು.  ಸಹಾಯಕ ಚುನಾವಣಾಧಿಕಾರಿ  

ಮತಗಟ್ಟೆ ಅಧಿಕಾರಿಗಳು  ತೆರಳಿ ಮತದಾನಕ್ಕೆ ವ್ಯವಸ್ಥೆ ಮಾಡಿದ್ದರು.  ಹಾವೇರಿ ಉಪವಿಭಾಗಾಧಿಕಾರಿ ಹಾಗೂ ಕ್ಷೇತ್ರ ಚುನಾವಣಾಧಿಕಾರಿ ಚೆನ್ನಪ್ಪ ಹಾಗೂ ತಹಶೀಲ್ದಾರ ನಾಗರಾಜ ಅವರ ಮಾರ್ಗದರ್ಶನದಲ್ಲಿ  ಮತಗಟ್ಟೆ ಅಧಿಕಾರಿ ಬಿ.ಎನ್‌.ಯಲಿಗಾರ ಹಾಗೂ ರಾಜು ಅವರು ಮತದಾನ ಪ್ರಕ್ರಿಯೆ ವ್ಯವಸ್ಥೆ ಮಾಡಿದ್ದರು.  

ಸೆಕ್ಟರ್ ಅಧಿಕಾರಿ, ಮೈಕ್ರೋ ಅಬ್ಜರ್ವರ್, ಬಿಎಲ್‌ಒ ಹಾಗೂ ಪೊಲೀಸ್  ಸಿಬ್ಬಂದಿ ಒಳಗೊಂಡ ತಂಡ ವೋಟಿಂಗ್ ಕಂಪಾಂರ್ಟ್‌ಮೆಂಟ್ ವ್ಯವಸ್ಥೆ, ಮತಪೆಟ್ಟಿಗೆ ವ್ಯವಸ್ಥೆ ಮಾಡಿ ಮತದಾನದ ಗೌಪ್ಯತೆಯ ಅನುಸಾರ ಮತದಾನ ಪ್ರಕ್ರಿಯೆ ಕೈಗೊಳ್ಳಲಾಯಿತು.  ಬ್ಯಾಲೆಟ್ ಮೂಲಕ ಶ್ರೀಮತಿ ಯಮುನಾಬಾಯಿ ಪವಾರ ಮತ ಚಲಾಯಿಸಿದರು. ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣಗೊಳಿಸಲಾಯಿತು. ನಂತರ  ವಿದ್ಯಾನಗರದ ಪೂರ್ವ 1ನೇ ಕ್ರಾಸ್ ನಿವಾಸಿ ಇಂದಿರಾ ಪಾಟೀಲ ಅವರ ಮನೆಗೆ ತೆರಳಿ ಮತದಾನ ಪ್ರಕ್ರಿಯೆ ಮುಂದುವರಿಸಲಾಯಿತು. 

ಮನೆಯಲ್ಲೇ ಮತದಾನ ಮಾಡಿದ ಹಿರಿಯ ನಾಗರಿಕರು ಸಂತಸ ವ್ಯಕ್ತಪಡಿಸಿದರು. ಚುನಾವಣಾ ಆಯೋಗ ವಿಕಲಚೇತನರಿಗೆ, ವಯೋವೃದ್ಧರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಖುಷಿಯಾಯಿತು. ಜೊತೆಗೆ ನಮ್ಮ ಮತದಾನ ಹಕ್ಕು ರಕ್ಷಣೆ ಮಾಡಿದ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ತಂಡ ನಮ್ಮ ಮನೆಗೆ ಆಗಮಿಸಿ, ಮತದಾನ ಪ್ರಕ್ರಿಯೆ ವಿಕ್ಷೀಸಿದ್ದು ಸಂತೋಷವಾಗಿದ್ದು,  ನೇರವಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದಷ್ಟು ಅನುಭವವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. 

“ನನಗೆ 87 ವರ್ಷ ವಯಸ್ಸಾಗಿದೆ. ನಡೆಯಲು ಸಾಧ್ಯವಿಲ್ಲ, ಮತಗಟ್ಟೆಗೆ ತೆರಳು ಕಷ್ಟವಾಗುತ್ತಿತ್ತು, ಮತ ಚಲಾಯಿಸಬೇಕು ಎಂಬ ನನ್ನ ಇಚ್ಛೆಗೆ ಜಿಲ್ಲಾಡಳಿತ ನೆರವು ನೀಡಿದೆ. ಮನೆಯಲ್ಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರಿಗೂ ಹಾಗೂ ಚುನಾವಣಾ ಆಯೋಗಕ್ಕೂ ಧನ್ಯವಾದಗಳನ್ನು ತಿಳಿಸುತ್ತೇನೆ. ಎಲ್ಲರಿಗಿಂತ ಮುಂಚಿತವಾಗಿ ಮನೆಯಲ್ಲೇ ಮತದಾನ ಮಾಡಿದ್ದು ನನಗೆ ಸಂತಸ ತಂದಿದೆ” 

 - ಯಮುನಾಬಾಯಿ ಹನುಮಂತರಾವ್ ಪವಾರ, 

 87 ವರ್ಷದ ಹಿರಿಯ ಮತದಾರರು, ವಿದ್ಯಾನಗರ ಸಿ ಬ್ಲಾಕ್, ಆನೆ ಪಾರ್ಕ್‌ ಹತ್ತಿರ, ಹಾವೇರಿ.