ಭಕ್ತಿಭಾವದಿಂದ ಧಾರ್ಮಿಕ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ನೆಮ್ಮದಿ

 ಭಕ್ತಿಭಾವದಿಂದ ಧಾರ್ಮಿಕ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ನೆಮ್ಮದಿ Cultivating a religious mindset through devotion brings peace to life

ಲೋಕದರ್ಶನ ವರದಿ 

ಯರಗಟ್ಟಿ ಸೆ.5: ಪ್ರತಿಯೊಬ್ಬರೂ ಭಕ್ತಿಭಾವದಿಂದ ಧಾರ್ಮಿಕ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಪಡೆಯಲು ಸಾಧ್ಯ ಎಂದು ಹೊಸಕೋಟಿ ರೇವಯ್ಯ ಸ್ವಾಮೀಜಿ ಹೇಳಿದರು.  

ಸಮೀಪದ ಜಾಲಿಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಒಮ್ಮೆಯಾದರೂ ಪಾದಯಾತ್ರೆ ಕೈಗೊಂಡು ದೇವರ ದರ್ಶನ ಪಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.  

ಸವದತ್ತಿ ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಸವದತ್ತಿ ಎಲ್ಲಮ್ಮ ಕ್ಷೇತ್ರದ ಜನತೆ ಹಾಗೂ ನಾಡಿನ ಅನ್ನದಾತರ ಸಂಕಷ್ಟಗಳು ದೂರವಾಗಿ, ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕು. ಮಳೆ-ಬೆಳೆ ಸಕಾಲಕ್ಕೆ ಆಗಿ ರೈತರ ಸಂಕಷ್ಟಗಳು ನಿವಾರಣೆಯಾಗಬೇಕು ಎಂದು ಆಶಿಸಿದರು.  

ಇದಕ್ಕೂ ಮುನ್ನ ಸವದತ್ತಿಯಿಂದ ನೂರಾರು ಭಕ್ತರು ಪಾದಯಾತ್ರೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಮಹಾಪ್ರಸಾದ ಸ್ವೀಕರಿಸಿದರು. ಗ್ರಾಮಸ್ಥರು ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ, ಡಿ.ಐ. ಅಧಿಕಾರಿ ಮಲ್ಲಿಕಾರ್ಜುನ ಮಾಮನಿ ಹಾಗೂ ಚಿನ್ಮಯ ಮಾಮನಿ ಅವರನ್ನು ಸನ್ಮಾನಿಸಿದರು.