ಗೋ-ಮಾತೆ ಸಕಲ ಸಂಕಷ್ಟಗಳಿಗೆ ಪರಿಹಾರದಾತೆ: ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
ವಿಜಯಪುರ 04: ಮಕ್ಕಳು ಮನೆಯಲ್ಲಿ ತಂದೆ-ತಾಯಿಗಳ ಮಾತು ಕೇಳದೇ, ಮನಬಂದಂತೆ ನಡೆದುಕೊಳ್ಳುವುದು, ಪಾಲಕರಿಗೆ ಎದುರು ಉತ್ತರ ನೀಡುವುದು, ಗುರು-ಹಿರಿಯರಲ್ಲಿ ಭಕ್ತಿ-ಭಾವಗಳಿಲ್ಲದೇ, ಅಸಹಾಯಕರನ್ನು ಕಂಡರೆ ಸಹಾಯ ಮಾಡದೇ ನೋಡಿಯೂ ನೋಡದಂತೆ ಹೋಗುವುದು ಮತ್ತು ಸಂಬಂಧಗಳನ್ನು ಗೌರವಿಸದೇ ಇರುವುದು ಕಂಡುಬರುತ್ತಿದೆ ಎಂದು ಕೋಲ್ಹಾಪೂರ-ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಅವರು ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ದಿ.2ರಂದು ಜರುಗಿದ ಸಿದ್ದಾರೂಢ ಸ್ವಾಮಿ ದೇವಸ್ಥಾನದ ಕಳಸಾರೋಹಣ ನೆರವೇರಿಸಿ ತಮ್ಮ ಆರ್ಶೀವಚನದಲ್ಲಿ ಮಾತನಾಡುತ್ತಿದ್ದರು.
ವಿಜ್ಞಾನ-ತಂತ್ರಜ್ಞಾನ, ಡಿಜಿಟಲ್ ಯುಗದಲ್ಲಿ ತಂದೆ-ತಾಯಿ, ಗುರು-ಹಿರಿಯರು, ಹಿರಿಯರು-ಕಿರಿಯರು ಎಂಬ ಪಾರಂಪರಿಕ ಸಂಬಂಧಗಳು ಮತ್ತು ಸಂಸ್ಕೃತಿ ನಶಿಸಿ ಹೋಗುತ್ತಿವೆ. ಮನುಷ್ಯ ಜೀವನದಲ್ಲಿ ಮಾನವೀಯ ಮತ್ತು ನೈತಿಕ ಮೌಲ್ಯಗಳಿಲ್ಲದಿದ್ದರೆ ಜೀವನ ಬರೀ ಶೂನ್ಯ. “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎಂಬ ಸಂಸ್ಕೃತಿಯ ನಾಡು ನಮ್ಮದು. ಆದರೆ ಆಧುನಿಕತೆಯ ಸೋಗಿನಲ್ಲಿ ಮತ್ತು ಶೋಕಿ ಜಗತ್ತಿನಲ್ಲಿ ಕೇವಲ ಮೋಬೈಲ್, ಕಂಪ್ಯೂಟರ್, ವ್ಯಾಟ್ಸ್‌ಆಪ್, ಫೇಸ್‌ಬುಕ್, ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆ ಹಾಗೂ ಪಾಶ್ಚಾತ್ಯ ಸಂಸ್ಕೃತಿಗೆ ಬೆನ್ನು ಹತ್ತಿರುವ ನಮ್ಮ ಯುವ ಜನಾಂಗ ನಮ್ಮ ದೇಶೀಯ ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಇದರಿಂದ ಮೌಲ್ಯಗಳಿಗೆ ಬೆಲೆಯೇ ಇಲ್ಲದಂತಾಗಿರುವುದು ನಿಜಕ್ಕೂ ವಿಷಾದಕರ ಸಂಗತಿ. ಸಂಸ್ಕೃತಿ-ಸಂಸ್ಕಾರ, ನೈತಿಕತೆ, ಆಚಾರ-ವಿಚಾರ, ಜೀವನ ಮೌಲ್ಯಗಳ ಬಗ್ಗೆ ಕುಟುಂಬದಲ್ಲಿಯೇ ತಂದೆ-ತಾಯಿಯರು ಮಕ್ಕಳಿಗೆ ತಿಳಿಸಿಕೊಟ್ಟು ಆ ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದು ಕರೆ ನೀಡಿದರು.
ಮೊದಲು ಮನೆಯಲ್ಲಿರುವ ಹಿರಿಯರಾದ ನಾವೆಲ್ಲರೂ ಪರಂಪರೆ, ಸಂಪ್ರದಾಯ, ಆದರ್ಶ-ಮೌಲ್ಯಗಳ ಪರಿಪಾಲಕರಾಗಿ, ನೋಡಿ-ಮಾಡಿ ಮತ್ತು ಅನುಕರಣೆಯಿಂದಲೇ ನಮ್ಮ ಕಲಿಯುತ್ತಿರುವ ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರವನ್ನು ಒಡಮೂಡಿಸಬೇಕು. ಮಕ್ಕಳನ್ನು ಕೇವಲ ಪದವೀಧರ-ಶಿಕ್ಷಣವಂತರನ್ನಾಗಿ ಉತ್ಪಾದಿಸದೇ ಅವರು ಜೀವನದಲ್ಲಿ ನೈತಿಕ, ಮೌಲ್ವಿಕ, ತಾತ್ವಿಕ, ಸಂಸ್ಕೃತಿ-ಸಂಸ್ಕಾರಗಳನ್ನು ಬಿಂಬಿಸುವಂತಹ ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಪ್ರಾಮಾಣಿಕತೆ, ದೇಶಭಕ್ತಿ, ಸಾಮಾಜಿಕ ಬದ್ಧತೆ, ಕಾರ್ಯಶ್ರದ್ಧೆ, ತತ್ವನಿಷ್ಠೆ, ಆದರ್ಶ-ಮೌಲ್ಯಗಳ ಬಗ್ಗೆ ಅರಿವು ಮೂಡಿಸುವತ್ತ ತಾಯಂದಿರು ಕಾರ್ಯಪ್ರವೃತ್ತರಾಗಬೇಕು. ಗೋವು ಅಥವಾ ಗೋ-ಮಾತೆಯು ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾಗಿದ್ದು, ನಾವೆಲ್ಲರೂ ಅದರ ಪಾಲನೆ-ಪೋಷಣೆ, ರಕ್ಷಣೆ ಮತ್ತು ಆರೈಕೆ ಮಾಡಿದರೆ ಸಕಲ ಸಂಕಷ್ಟಗಳು ದೂರಾಗುತ್ತವೆ. ಇಂತಹ ಜಾತ್ತೆ, ಉತ್ಸವ ಮತ್ತು ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಸಮಾಜದಲ್ಲಿ ಶಾಂತಿ, ಸಾಮರಸ್ಯತೆ, ಸೌಹಾರ್ಧತೆ ಮತ್ತು ಸಮಷ್ಠಿ ಭಾವ ಬೆಳೆಸಿ ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಕಂಕಣಬದ್ಧರಾಗಬೇಕೆಂದು ಆರ್ಶೀವಚನದಲ್ಲಿ ಉಪದೇಶಿಸಿದರು.
ಪ್ರಣವಾನಂದ ಮಹಾಸ್ವಾಮಿಗಳು, ಲಕ್ಷ್ಮೀದೇವಿತಾಯಿ ಪೂರ್ಣಪ್ರಜ್ಞಾಯೋಗಾಶ್ರಮ, ಚನ್ಮಯಾನಂದ ಮಹಾಸ್ವಾಮಿಗಳು, ಮಹಲಿಂಗೇಶ್ವರ ಮಹಾಸ್ವಾಮಿಗಳು, ಸಿದ್ಧಾರೂಢ ಭಾರತಿ ಮಹಾಸ್ವಾಮಿಗಳು ಯಳಸಂಗಿ, ಮತೋಶ್ರೀ ಯೋಗೇಶ್ವರಿ ಮಾತಾಜೀ, ಬುರಣಾಪುರ, ಅಜೀತ ಗುರೂಜೀ ಹಾಗೂ ಮಲ್ಲಿಕಾರ್ಜುನ ಶಾಸ್ತ್ರೀಗಳು ಇನ್ನಿತರರು ಸಹ ಉಪಸ್ಥಿತರಿದ್ದರು.
ಕಳಸಾರೋಹಣ ಕಾರ್ಯಕ್ರಮದ ಪೂರ್ವದಲ್ಲಿ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜೀ ಹಾಗೂ ಸಿದ್ಧಾರೂಢ ಸ್ವಾಮೀಜಿ ಇವರ ಭಾವಚಿತ್ರವನ್ನು 501 ಸುಮಂಗಲೆಯರಿಂದ ಕುಂಭಮೇಳ, ಪಂಢರಪುರ ವಾರಕರಿ ಸಂಪ್ರದಾಯದಂತೆ ಭಜನೆ ಮತ್ತು ದೇವರ ನಾಮಸ್ಮರಣೆಯೊಂದಿಗೆ ಗ್ರಾಮದ ಎಲ್ಲ ಬೀದಿಗಳಲ್ಲಿ ಸಂಚರಿಸಿ ನಂತರ ಸಿದ್ದಾರೂಢ ಮಠ ಬಂದು ತಲುಪಿತು. ಸುತ್ತಮುತ್ತಲಿನ ಗ್ರಾಮಗಳ ಹಿರಿಯರು,, ಮಹಿಳೆಯರು, ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.