ಸಹಕಾರಿ ಸಂಘ ಸಂಸ್ಥೆಗಳು ಗಟ್ಟಿಯಾಗಿ ಬೆಳೆಯಬೇಕು: ಶಾಸಕ ಬಾಲಚಂದ್ರ ಜಾರಕಿಹೊಳಿ

ಸಹಕಾರಿ ಸಂಘ ಸಂಸ್ಥೆಗಳು ಗಟ್ಟಿಯಾಗಿ ಬೆಳೆಯಬೇಕು: ಶಾಸಕ ಬಾಲಚಂದ್ರ ಜಾರಕಿಹೊಳಿ   Cooperative societies and institutions must grow strong: MLA Balachandra Jarkiholi

ಲೋಕದರ್ಶನ ವರದಿ 

ಬೆಟಗೇರಿ 05: ಸಹಕಾರಿ ಸಂಘ, ಸಂಸ್ಥೆಗಳು ಬೆಳೆದಷ್ಟು ಸ್ಥಳೀಯರಿಗೆ, ರೈತರಿಗೆ ಅನುಕೂಲವಾಗುತ್ತದೆ. ಸಹಕಾರಿ ಸಂಘ ಸಂಸ್ಥೆಗಳು ಗಟ್ಟಿಯಾಗಿ ಬೆಳೆಯಬೇಕು ಎಂದು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಅವರು, ಶನಿವಾರ ಸೆ.5ರಂದು ನಡೆದ ನಾಗನೂರು ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಗೋಕಾಕ ತಾಲೂಕಿನ ಬೆಟಗೇರಿ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ಮಾತನಾಡಿ, ಸ್ಥಳೀಯರು, ರೈತರು ಸಹಕಾರಿ ಸಂಘದಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಬೇಕು. ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಇನ್ನೂ ಹಲವಾರು ನೂತನ ಶಾಖೆಗಳನ್ನು ಹೊಂದಿ ಬೆಳೆಯಲಿ.

ಇನ್ನೂ ಸುಮಾರು ಹತ್ತು ದಿನಗಳ ಕಾಲ ಕಾಲುವೆ ಮೂಲಕ ನೀರು ಹರಿಬಿಡಿಸಲು ಮನವಿ ಮಾಡಿಕೊಂಡಿದ್ದೇನೆ. ಕಾಲುವೆ ನೀರಿನ ಉಪಯೋಗ ಸರಿಯಾಗಿ ಈ ಭಾಗದ ರೈತರು ಮಾಡಿಕೊಳ್ಳಬೇಕು ಎಂದರು.  ಗೋಕಾಕ ಶೂನ್ಯ ಸಂಪಾದನಾ ಮಠದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಜಿ, ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಮುಂಜಾನೆ 9ಗಂಟೆಗೆ ನೂತನ ಕಟ್ಟಡದಲ್ಲಿ ಶ್ರೀಲಕ್ಷ್ಮೀ ಮತ್ತು ಸರಸ್ವತಿ ದೇವಿ ಮಹಾಪೂಜೆಯೊಂದಿಗೆ ನಡೆಯಿತು. ಸಹಕಾರಿ ವತಿಯಿಂದ ಶ್ರೀಗಳು, ಗಣ್ಯರನ್ನು ಸತ್ಕರಿಸಿದರು. 

ಗೋಕಾಕ ಸನ್ನದು ಲೆಕ್ಕ ಪರಿಶೋಧಕ ಹಾಗೂ ತೆರಿಗೆ ಸಲಹೆಗಾರ ಸೈದಪ್ಪ ಗದಾಡಿ, ಮಾಜಿ ಸಚಿವ ಆರ್‌.ಎಮ್‌.ಪಾಟೀಲ ಮುಖ್ಯ ಅತಿಥಿಗಳಾಗಿ ಜ್ಯೋತಿಬೆಳಗಿಸಿ ಸಹಕಾರಿ ಸಂಘ, ಸಂಸ್ಥೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿದರು. ನಾಗನೂರು ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ತಡಸನವರ ಅಧ್ಯಕ್ಷತೆ ವಹಿಸಿ, ಸಹಕಾರಿ ಸಂಘ, ಸಂಸ್ಥೆಗಳ ಬೆಳವಣಿಗೆ, ತಮ್ಮ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸ್ಥಾಪನೆ, ಶಾಖೆಗಳ ಆರಂಭ ಹಾಗೂ ಪ್ರಗತಿ ಕುರಿತು ಈ ವೇಳೆ ತಿಳಿಸಿದರು. ಗೋಕಾಕ ಬ್ರಹ್ಮಾನಂದ ಸ್ವಾಮೀಜಿ, ಬಸವಂತ ಕೋಣಿ,

ಅರ್ಜುನ ಹೊಂಗಲ, ಅಶೋಕ ಖಂಡ್ರಟ್ಟಿ, ಸಿಪಿಐ ಶ್ರೀಶೈಲ ಬ್ಯಾಕೂಡ ಸ್ಥಳೀಯ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಮಲ್ಲಪ್ಪ ಕಂಬಿ, ಈರಯ್ಯ ಹಿರೇಮಠ, ಪ್ರಧಾನ ಕಛೇರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಅಂಗಡಿ, ಶಿವಲಿಂಗಪ್ಪ ಗೋಟೂರ, ರಮೇಶ ಕಂಬಿ, ಪ್ರಧಾನ ಕಛೇರಿ ಆಡಳಿತಮಂಡಳಿ ಸದಸ್ಯರು, ಸ್ಥಳೀಯ ಮತ್ತು ವಿವಿಧ ಗ್ರಾಮ, ಪಟ್ಟಣ, ನಗರದ ಶಾಖೆಗಳ ಸಲಹಾ ಸಮಿತಿ ಅಧ್ಯಕ್ಷರು, ಶಾಖಾ ವ್ಯವಸ್ಥಾಪಕರು, ಸದಸ್ಯರು, ಸಿಬ್ಬಂದಿ, ಸಹಕಾರಿ ಧುರೀಣರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಮತ್ತೀತರರು ಇದ್ದರು.