ಗುಲಾಬಿ ತಗೊಳ್ಳಿ ಮೇ. 10ಕ್ಕೆ ಕಡ್ಡಾಯವಾಗಿ ಮತ ಹಾಕಿ : ಬಸ್ ನಿಲ್ದಾಣದಲ್ಲಿ ರೆಡ್ ರೋಸ್ ಕೈಗಿಟ್ಟು ವಿನೂತನವಾಗಿ ಮತದಾನ ಜಾಗೃತಿ


ನರಗುಂದ : ಸಾರ್ವಜನಿಕರು, ಪ್ರಯಾಣಿಕರು ಮತ್ತು ಸಾರಿಗೆ ನೌಕರ ಸಿಬ್ಬಂದಿಗಳು ಮೇ. 10 ರಂದು ಕಡ್ಡಾಯವಾಗಿ ತಪ್ಪದೇ ಮತ ಚಲಾಯಿಸಿ ರಾಜ್ಯದಲ್ಲಿ ಸುಸ್ಥಿರ ಮತ್ತು ಸುಭದ್ರ ಆಡಳಿತ ರಚನೆಗೆ ತಮ್ಮ ಕೊಡುಗೆ ನೀಡಿ ಎಂದು ನರಗುಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ  ಮಂಜುಳಾ ಹಕಾರಿ ಕಂಟ್ರೋಲ್ ರೂಂ ನಲ್ಲಿ ಅನೌನ್ಸ್‌ ಮಾಡುವ ಮೂಲಕ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಕಡ್ಡಾಯ ಮತದಾನ ಕುರಿತು ಜಾಗೃತಿ ಸಂದೇಶ ನೀಡಿದರು. 

   ತಾಲೂಕಿನ 30ಕ್ಕೂ ಅಧಿಕ ಗ್ರಾಮಗಳಿಂದ ತರಹೇವಾರಿ ಕೆಲಸಕ್ಕೆ ನರಗುಂದ ಪಟ್ಟಣಕ್ಕೆ ಬಂದಿದ್ದ ಪ್ರಯಾಣಿಕರಿಗೆ ಮತ್ತು ನರಗುಂದ ಮಾರ್ಗವಾಗಿ ದೂರದ ಊರುಗಳಿಗೆ ಬಸ್ ಮೂಲಕ ತೆರಳುತ್ತಿದ್ದ ಪ್ರಯಾಣಿಕರಿಗೆಲ್ಲ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ನೇತೃತ್ವದಲ್ಲಿ ತಾಲೂಕು ಪಂಚಾಯತ ಸಿಬ್ಬಂದಿ ಮತ್ತು ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಸಿಬ್ಬಂದಿಗಳು ನಿಲ್ದಾಣದಲ್ಲಿ, ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆಲ್ಲ ಕೈಗೆ ಗುಲಾಬಿ ಹೂವು ಕೊಟ್ಟು ಮೇ. 10ಕ್ಕೆ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಿದರು.  

    ಬಸ್ ನಿಲ್ದಾಣ ಸುತ್ತಲೂ ಸಂಚರಿಸಿದ ತಾಲೂಕು ಪಂಚಾಯತ ಸಿಬ್ಬಂದಿಗಳು ನಿಲ್ದಾಣದ ಆಟೋ ಚಾಲಕರಿಗೆ, ಬಸ್ ನಿರ್ವಾಹಕರಿಗೆ, ಬಸ್ ಚಾಲಕರಿಗೆ, ನಿಲ್ದಾಣದ ವ್ಯಾಪಾರಿಗಳನ್ನು ಭೇಟಿಯಾಗಿ ಮಕ್ಕಳ ಭವಿಷ್ಯದ ದೃಷ್ಟಿಕೋನದಿಂದ ಹಾಗೂ ದೇಶದ ಅಭಿವೃದ್ಧಿಗಾಗಿ ತಪ್ಪದೇ ಮೇ. 10ಕ್ಕೆ ಮತ ಚಲಾಯಿಸಿ ತಮ್ಮ ಹಕ್ಕು ಮರೆಯದಂತೆ ಜಾಗೃತಿವಹಿಸಿ ಅಂತ ತಿಳುವಳಿಕೆ ಮೂಡಿಸಿದರು. ಮತದಾನ ಜಾಗೃತಿ ಅಭಿಯಾನದಲ್ಲಿ  ಕೃಷ್ಣಮ್ಮ ಹಾದಿಮನಿ, ಸಹಾಯಕ ನಿರ್ದೇಶಕ (ಪಂಚಾಯತ್ ರಾಜ್), ತಾಲೂಕಿನ ನರೇಗಾ ಸಿಬ್ಬಂದಿ ವರ್ಗ, ತಾಲೂಕಿನ ಎಲ್ಲ ಗ್ರಾಮ ಪಂಚಾಯತ ಸಿಬ್ಬಂದಿ ಭಾಗವಹಿಸಿದ್ದರು.