ಬಹುಕೋಟಿ ಛಾಪಾಕಾಗದ ಹಗರಣದ ಕರೀಂಲಾಲಾ ಪುತ್ರಿಯಿಂದ ನ್ಯಾಯವಾದಿ ವಿರುದ್ಧ ಬಾರ್ ಕೌನ್ಸಿಲ್ ಗೆ ದೂರು

ಬೆಳಗಾವಿ/ ಖಾನಾಪುರ : ಪಟ್ಟಣದ ಹಿರಿಯ ವಕೀಲ ಎಸ್.ಕೆ ನಂದಗಡಿ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಬಾರ್ ಕೌನ್ಸಿಲ್ ನಿಂದ ಅನರ್ಹಗೊಳಿಸುವಂತೆ ಕೋರಿ ಕರ್ನಾಟಕ ಬಾರ್ ಕೌನ್ಸಿಲ್ ನಲ್ಲಿ ಕಳೆದ ವಾರ ಲಿಖಿತ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಬಹುಕೋಟಿ ಛಾಪಾ ಕಾಗದ ಹಗರಣದ ಆರೋಪಿ ಕರೀಂಲಾಲಾ ತೇಲಗಿ ಅವರ ಪುತ್ರಿ ಸನಾ ತಾಳಿಕೋಟಿ ಹೇಳಿದರು.

  ಖಾನಾಪೂರ ಪಟ್ಟಣದ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದ ಅವರು, ತಮ್ಮ ತಂದೆ ಕರೀಂಲಾಲಾ ಜೀವಂತವಾಗಿದ್ದಾಗ ತಮ್ಮ ಸಹೋದರ ಅಬ್ದುಲ್ ಅಜೀಂ ಅವರ ಹೆಸರಿನಲ್ಲಿ ಪಟ್ಟಣದ ಹೊರವಲಯದಲ್ಲಿ 6 ಎಕರೆ ಕೃಷಿ ಜಮೀನು ಖರೀದಿಸಿದ್ದರು. ಕರೀಂಲಾಲಾ ಛಾಪಾ ಕಾಗದ ಹಗರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದ ಬಳಿಕ ಅವರ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿದ್ದ ಎಲ್ಲ ಆಸ್ತಿಯ ಮಾಹಿತಿಯನ್ನು ಎಸ್.ಕೆ ನಂದಗಡಿ ಹೊಂದಿದ್ದರು. 

   ತಮ್ಮ ತಂದೆ ಖರೀದಿಸಿದ ಅಬ್ದುಲ್ ಅಜೀಂ ಅವರ ಹೆಸರಿನಲ್ಲಿದ್ದ ಜಮೀನನ್ನು ತಮಗೆ ಮರಳಿಸದೇ ಅಬ್ದುಲ್ ಅಜೀಂ ಅವರ ಕುಟುಂಬದ ಸದಸ್ಯರಿಗೆ ಮರಳಿಸುವ ಮೂಲಕ ಎಸ್.ಕೆ ನಂದಗಡಿಯವರು ತಮ್ಮ ಕುಟುಂಬಕ್ಕೆ ವಂಚನೆ ಮಾಡುತ್ತಿದ್ದಾರೆ. ತಮ್ಮ ತಂದೆಯ ವಿರುದ್ಧದ ವಿವಿಧ ಪ್ರಕರಣಗಳಲ್ಲಿ ಎಸ್.ಕೆ ನಂದಗಡಿಯವರು ತಮ್ಮ ಕುಟುಂಬದ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು. 

    ಈಗ ತಮ್ಮ ತಂದೆಯ ಸಹೋದರರ ಪರ ವಕಾಲತ್ತು ವಹಿಸಿ ತಮಗೆ ದ್ರೋಹ ಮಾಡುತ್ತಿದ್ದಾರೆ. ಎಸ್.ಕೆ ನಂದಗಡಿಯವರು ತಮ್ಮ ಕುಟುಂಬವನ್ನು ವಂಚಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 555 ಪುಟಗಳ ದಾಖಲೆಗಳನ್ನು ಬಾರ್ ಕೌನ್ಸಿಲ್ ಗೆ ಒದಗಿಸಿದ್ದು, ಅಲ್ಲಿಂದ ತಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ನ್ಯಾಯವಾದಿ ನಂದಗಡಿ ಸ್ಪಷ್ಟನೆ : 

ಕರೀಂಲಾಲಾ ಪುತ್ರಿ ಸನಾ ತಮ್ಮ ವಿರುದ್ಧ ಕರ್ನಾಟಕ ಬಾರ್ ಕೌನ್ಸಿಲ್ ಎದುರು ದೂರು ಸಲ್ಲಿಸಿರುವ ಕುರಿತು ತಮಗೆ ಬಾರ್ ಕೌನ್ಸಿಲ್ ನಿಂದ ನೋಟೀಸ್ ತಲುಪಿದೆ. ತಮ್ಮ ವಿರುದ್ಧ ಸನಾ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. 

  ಸನಾ ಅವರು ದೂರಿನಲ್ಲಿ ನೀಡಿರುವ ಎಲ್ಲ ಅಂಶಗಳಿಗೆ ಸಮರ್ಪಕ ಉತ್ತರ ನೀಡಲಾಗಿದೆ. ಸನಾ ಅವರು ದೂರಿನಲ್ಲಿ ಹೇಳಿರುವಂತೆ ಅವರ ಕುಟುಂಬಕ್ಕೆ ತಮ್ಮಿಂದ ಯಾವುದೇ ದ್ರೋಹ ಅಥವಾ ಮೋಸ ಉಂಟಾಗಿಲ್ಲ ಎಂದು ಹಿರಿಯ ವಕೀಲ ಎಸ್.ಕೆ ನಂದಗಡಿ ಪ್ರತಿಕ್ರಿಯಿಸಿದರು.