ಕಾರ ಹುಣ್ಣಿಮೆ ದಿನದಂದು ಎತ್ತುಗಳಿಗೆ ಬಣ್ಣ ಬಣ್ಣದ ಸಿಂಗಾರ
ಲೋಕದರ್ಶನ ವರದಿ
ಕಂಪ್ಲಿ 29 : ಕಾರ ಹುಣ್ಣಿಮೆ ಪ್ರಯುಕ್ತ ಕರಿ ಹರಿಯುವ ಜೋಡೆತ್ತುಗಳಿಗೆ ಬಣ್ಣಗಳಿಂದ ಸಿಂಗರಿಸುತ್ತಿರುವುದು ಸೋಮವಾರ ಕಂಡು ಬಂತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎತ್ತುಗಳ ಕೋಡುಗಳಿಗೆ ವಿವಿಧ ತರನಾದ ಬಣ್ಣಗಳನ್ನು ಹಚ್ಚಲಾಯಿತು. ಇಲ್ಲಿನ ಹೊಸ ಬಸ್ ನಿಲ್ದಾಣ ಬಳಿಯಲ್ಲಿರುವ ರೈತರ ಜಮೀನಿನಲ್ಲಿ ಕಲಾವಿದ ಪಕ್ಕೀರ್ಪ ಎಂಬುವರು ರೈತರ ಎತ್ತುಗಳಿಗೆ ಬಣ್ಣ ಹಚ್ಚುವ ಮೂಲಕ ಸಿಂಗರಿಸಿದರು. ಪ್ರತಿ ಜೋಡೆತ್ತುಗಳಿಗೆ ಒಂದು ನೂರು ಕೊಟ್ಟು ರೈತರು ಬಣ್ಣ ಬಣ್ಣದಿಂದ ಶೃಂಗಾರಗೊಳಿಸಿದರು. ನಂತರ ಕಲಾವಿದ ಪಕ್ಕೀರ್ಪ ಮಾತನಾಡಿ, ನಾಡಿನಲ್ಲಿ ಸಮೃದ್ಧ ಮಳೆ, ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರಾಚೀನ ಕಾಲದಿಂದಲೂ ಕಾರ ಹುಣ್ಣಿಮೆ ದಿನದಂದು ಎತ್ತುಗಳ ಕರಿ ಹರಿಸುವುದು ವಾಡಿಕೆಯಾಗಿದೆ.
ಈ ಬಾರಿ ಬರೀ 6-7 ಜೋಡಿ ಎತ್ತುಗಳಿಗೆ ಮಾತ್ರ ಬಣ್ಣ ಹಚ್ಚಲಾಯಿತು. ಆದರೆ, ಇತ್ತೀಚಿನ ದಿನಮಾನದಲ್ಲಿ ತಂತಜ್ಞಾನದ ಯುಗವಾಗಿರುವುದರಿಂದ ತಂತಜ್ಞಾನ ಮತ್ತು ಪರಿಕರಗಳಿಂದ ಎತ್ತುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿರುವುದು ವಿಪರ್ಯಾಸವಾಗಿದೆ. ರೈತರು ಬದುಕು ಹಸನವಾಗಲು ಎತ್ತುಗಳ ಪಾತ್ರ ಅತಿಮುಖ್ಯವಾಗಿರುವ ಜೊತೆಗೆ ಪ್ರತಿ ಹಂತದಲ್ಲಿಯೂ ಬಸವಣ್ಣನ ಕೊಡುಗೆ ಅಪಾರವಾಗಿದೆ.
ಇಂದಿನ ದಿನ " ಎತ್ತುಗಳು ಮರೆಮಾಚುತ್ತಿರುವುದು ದುರ್ದೈವಾಗಿದೆ. ಇದರಿಂದ ಕಾಲಕಾಲಕ್ಕೂ ಮಳೆ, ಬೆಳೆಯಾಗುತ್ತಿಲ್ಲ. ಆದ್ದರಿಂದ ರೈತರು ಸೇರಿದಂತೆ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ಎತ್ತುಗಳನ್ನು ಮನೆಗಳಲ್ಲಿ ಕಟ್ಟಿಕೊಂಡರೇ, ಅವರ ಬದುಕು ಉತ್ತಮವಾಗಿರಲು ಸಾಧ್ಯ ಎಂದರು. ಇಲ್ಲಿನ ಕಂಪ್ಲಿ-ಕೋಟೆ, ಸಣಾಪುರ ರಸ್ತೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಎತ್ತುಗಳಿಗೆ ಬಣ್ಣ ಬಡಿಯಲಾಯಿತು. ನಂತರ ಗುಡ್ಡಕಲ್ಲು ಬಳಿಯಲ್ಲಿ ಎತ್ತುಗಳ ಓಟ(ಕರಿ) ಹರಿಸಲಾಯಿತು.