ಮುಂಡಗೋಡದಲ್ಲಿ ರಂಗು ರಂಗಿನ ಹೋಳಿ ಹಬ್ಬದ ಸಂಭ್ರಮ

ಮುಂಡಗೋಡ 30: ಪಟ್ಟಣದಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಮತ್ತು ಯುವಕರು ಒಬ್ಬರಿಗೊಬ್ಬರು ಬಣ್ಣ ಹಚ್ಚುತ್ತ ಹೋಳಿ ಹಬ್ಬದ ಶುಭಾಶಯ ಕೋರಿದರು. ಕೆಲವು ಯುವಕರು ಬೈಕ್ ಮೇಲೆ ವಿವಿಧ ಪ್ರಾಣಿಗಳ ಹಾಗೂ ಬೊಂಬೆಗಳ ಮುಖವಾಡ ಧರಿಸಿ ಪಿಪಿ ಊದುತ್ತಾ ಪಟ್ಟಣದ ತುಂಬೆಲ್ಲಾ ಸುತ್ತಾಡುತ್ತಿರುವುದು ಕಂಡು ಬಂತು. ಪಟ್ಟಣ ನಗರಗಳಲ್ಲಿ ಹುಣ್ಣಿಮೆ ದಿನದಂದು ರತಿ-ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಆಯಾ ಪಟ್ಟಣ ನಗರಗಳಲ್ಲಿ ರತಿ-ಮನ್ಮಥರ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನಾನಾ ತರದ ಬಣ್ಣಗಳನ್ನು ಯುವಕರು ಮುಖಕ್ಕೆ ಹಚ್ಚುತ್ತಾ, ತಮಟೆ ಬಾರಿಸುತ್ತಾ, ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಸಾಗಿದರು. ಕೊನೆಗೆ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಿದ ಜಾಗದಲ್ಲಿ ಕಾಮದಹನ ಮಾಡಲಾಯಿತು. ಪಟ್ಟಣದಲ್ಲಿ ಹೋಳಿ ಹಬ್ಬದ ಸಲುವಾಗಿ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು.