ಕಣ್ಣು ಮುಚ್ಚಿಸುವುದು ದೇವಾಲಯ, ಕಣ್ಣು ತೆರೆಸುವುದು ಗ್ರಂಥಾಲಯ

ರಾಣೇಬೆನ್ನೂರು 17:  ಡಾ. ಅಂಬೇಡ್ಕರ್ ಹೇಳುವಂತೆ, ನಮ್ಮ ಜನರು ದೇವಸ್ಥಾನಗಳಿಗೆ ಸಾಲುಗಟ್ಟಿ ನಿಲ್ಲುವಂತೆ ಗ್ರಂಥಾಲಯಗಳಿಗೆ ಸಾಲುಗಟ್ಟಿ ಯಾವಾಗ ನಿಲ್ಲುತ್ತಾರೋ ಅಂದು ನಮ್ಮ ದೇಶ ಜಗತ್ತಿಗೆ ಗುರುವಾಗಲಿದೆ, ದೇವಾಲಯಕ್ಕೆ ಹೋದರೆ ಕಣ್ಣುಮುಚ್ಚಿ ಬೇಡಬೇಕು, ಗ್ರಂಥಾಲಯಕ್ಕೆ ಹೋದರೆ ಕಣ್ಣು ತೆರೆದು ಓದಬೇಕು, ಕಣ್ಣು ಮುಚ್ಚಿಸುವುದು ದೇವಾಲಯ, ಕಣ್ಣು ತೆರೆಸುವುದು ಗ್ರಂಥಾಲಯ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು. ಹಾವೇರಿ ಜಿಲ್ಲೆಯ ತಾಲೂಕಿನ ಅಗಡಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪುಸ್ತಕ ಸಂಸ್ಕೃತಿ ಗೋಷ್ಠಿಯ ಥಟ್ ಅಂತ ಹೇಳಿ ಉಚಿತ ಪುಸ್ತಕ ಪಡೆಯಿರಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು   

ನಮ್ಮ ಜ್ಞಾನಾರ್ಜನೆಗೆ ಸಾಮಾನ್ಯ ಜ್ಞಾನಕ್ಕೆ ಪ್ರೀತಿಗೆ ಪಾತ್ರವಾದ ಪುಸ್ತಕಗಳು ಹಾಗೂ ಪತ್ರಿಕೆಗಳು ಇಂದು ಸಂಕಟವನ್ನು ಎದುರಿಸುತ್ತಿವೆ, ಟಿ,ವಿ, ಮೊಬೈಲ್, ಸಿನಿಮಾಗಳು ಓದುಗರ ಅಭಿರುಚಿಯನ್ನು ಕೆಡಿಸಿವೆ, ಕೊಂಡು ಓದುವ ಪ್ರವೃತ್ತಿ ಬೆಳೆಯಬೇಕು, ಮನೆ ಮನೆಗಳಲ್ಲಿ ಗ್ರಂಥಾಲಯಗಳಾಗಲಿ, ಮಕ್ಕಳಲ್ಲಿ ವಾಚನಾಭಿರುಚಿ, ಪುಸ್ತಕ ಸಂಸ್ಕೃತಿಯನ್ನು ಬೆಳೆಸಿರಿ ಎಂದೂ ಹನುಮಂತಗೌಡ ಪಾಲಕರಲ್ಲಿ ವಿನಂತಿಸಿದರು   

2500 ರೂಗಳಿಗೂ ಅಧಿಕ ಪುಸ್ತಕಗಳ ಪ್ರಾಯೋಜಕರಾದ ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಅತಿಥಿಯಾಗಿ ಮಾತನಾಡಿ ಗುಡಿಗೊಂದು ಗ್ರಂಥಾಲಯ, ಮನೆಗೊಂದು ಶೌಚಾಲಯ ನಮ್ಮ ಆದ್ಯತೆ, ನಾವು ಪುಸ್ತಕಗಳನ್ನು ರೂಪಿಸುವದಕಿಂತ ಪುಸ್ತಕಗಳು ನಮ್ಮನ್ನು ರೂಪಿಸುತ್ತವೆ, ಪುಸ್ತಕಗಳು ಮಾನವ ಜನಾಂಗದ ದಾರೀದೀಪ, ಅವು ಆಯಾ ಕಾಲದ ಸಂಸ್ಕ್ರತಿಯ ಪ್ರತೀಕ ಎಂದು ತಿಳಿಸಿ ಅವರೂ ಕೆಲವು ಪ್ರಶ್ನೆಗಳನ್ನು ಕೇಳಿದರು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಪುಸ್ತಕ ಸಂಸ್ಕೃತಿ ಗೋಷ್ಠಿಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು   

ಒಗಟು, ಒಗಟುಗಳು, ಗಾದೆಗಳು, ಸಾಮಾನ್ಯ ಜ್ಞಾನ ಮುಂತಾದ ಕೌತುಕ ಪ್ರಶ್ನೆಗಳಿಗೆ ಮಹಿಳೆಯರೂ ಸೇರಿದಂತೆ ರೈತರು, ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತರಿಸಿ ಉಚಿತ ಪುಸ್ತಕಗಳನ್ನು ಪಡೆದರು,ರೈತ ಶಿವಯೋಗಿಸ್ವಾಮಿ ಯೋಗಿಮಠ, ಗಂಗಮ್ಮ ಇಚಂಗಿ ಹಾಗೂ ವಿದ್ಯಾರ್ಥಿ ವೀರೇಶ ಮರಗೂರ ಉತ್ತರಿಸಿ ಹೆಚ್ಚು ಪುಸ್ತಕಗಳನ್ನು ಪಡೆದರು   

ಸಮಿತಿ ಅಧ್ಯಕ್ಷ ಬಸಪ್ಪ ಬಳಲಕೊಪ್ಪದ ಅಧ್ಯಕ್ಷತೆ ವಹಿಸಿದ್ದರು, ಮಲ್ಲೇಶ ಬಾರ್ಕಿ, ರಾಘವೇಂದ್ರ ಈಳಗೇರ,ನಿಂಗರಾಜ ಕರಡೆಮ್ಮನವರ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ನ್ಯಾಯವಾದಿ ಮಹಾಂತೇಶ ಮೂಲಿಮನಿ ಸ್ವಾಗತಿಸಿದರು, ನಾಗರಾಜ ಬಸೇಗಣ್ಣಿ ನಿರೂಪಿಸಿ ವಂದಿಸಿದರು.