ನಾಮಸ್ಮರಣೆಯಿಂದ ಶಕ್ತಿ ವೃದ್ಧಿ: ನಾರನಗೌಡ ಉತ್ತಂಗಿ
ಮಹಾಲಿಂಗಪುರ 11 : ಭಾರತದಲ್ಲಿ ಮಹಿಳೆಯನ್ನು ದುರ್ಗೆ, ಕಾಳಿ, ಆದಿಶಕ್ತಿ, ಅನ್ನಪೂರ್ಣೆಯ ಅವತಾರವೆಂದು ಗೌರವಿಸಲಾಗುತ್ತದೆ, ಮಾತೆಯರಿಂದ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಹಾಗಾಗಿ ಪ್ರತಿ ಮಹಿಳೆಯರು ನಿತ್ಯವೂ ಭಗವಂತನ ನಾಮಸ್ಮರಣೆ ಮಾಡಿ ತಮ್ಮ ದೈವ ಶಕ್ತಿ ವೃದ್ಧಿಸಿಕೊಂಡು, ಮಕ್ಕಳಲ್ಲಿಯೂ ಅಂಥ ಸಂಸ್ಕಾರ ಬೆಳೆಸಿದಾಗ ಉತ್ತಮ ಸಮಾಜ ನಿರ್ಮಾಣ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ರಾಷ್ಟ್ರೋತ್ಥಾನ ಪರಿಷತ್ ಸಂಪನ್ಮೂಲ ವ್ಯಕ್ತಿ ನಾರನಗೌಡ ಉತ್ತಂಗಿ ಹೇಳಿದರು.
ತಾಯಂದಿರ ದಿನಾಚರಣೆ ಪ್ರಯುಕ್ತ ಸ್ಥಳೀಯ ಕುಬಸದ ಗಲ್ಲಿಯಲ್ಲಿ ವಿದ್ಯಾಶ್ರೀ ಸ್ವಸಹಾಯ ಸಂಘದ ವತಿಯಿಂದ ಗಿರಿಮಲ್ಲಪ್ಪ ಯರಗಟ್ಟಿ ಮತ್ತು ಚಂದ್ರು ಯರಗಟ್ಟಿ ಅವರ ನೇತೃತ್ವದಲ್ಲಿ ಭಾನುವಾರ ರಾತ್ರಿ ಜರುಗಿದ ಮಾತೃ ವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದ ಅವರು,ಯಾವುದಾದರೂ ಒಂದು ದೇಶವನ್ನು ಹಾಳು ಮಾಡಬೇಕೆಂದರೆ ಅಲ್ಲಿಯ ಸಂಸ್ಕೃತಿಯನ್ನು ಹಾಳು ಮಾಡಿದರೆ ಸಾಕು ಎಂಬ ಮಾತಿನಂತೆ ಒಂದು ದೇಶದ ಉಳಿವು ಆ ದೇಶದ ಜನರ ಸಂಸ್ಕೃತಿಯನ್ನೇ ಅವಲಂಬಿಸಿರುತ್ತದೆ, ಹಾಗಾಗಿ ಮಕ್ಕಳಿಗೆ ಸಂಸ್ಕೃತಿ ಕಲಿಸಿ ಸುಸಂಸ್ಕೃತ ಸಮಾಜ, ಸುಭದ್ರ ದೇಶ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅವರ್ಣನೀಯ, ಮಾತೆ ಜೀಜಾಬಾಯಿಯಿಂದ ಶಿವಾಜಿ ಉದಯಿಸಿದಂತೆ ಸುಸಂಸ್ಕೃತ ಮಾತೆಯರಿಂದ ಮಹಾನ್ ವ್ಯಕ್ತಿಗಳು ನಿರ್ಮಾಣವಾಗುತ್ತಾರೆ.
ಹಾಗಾಗಿ ಮಾತೆಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ಮೊಬೈಲ್, ಟಿವಿಗಳಿಂದ ದೂರವಿದ್ದು ಮಕ್ಕಳಿಗೆ ಮಾದರಿಯಾಗಿ ಮಕ್ಕಳಲ್ಲಿ ದೇಶಾಭಿಮಾನದ ಜೊತೆ ಧರ್ಮಾಭಿಮಾನ ಬೆಳೆಯುವಂತೆ ನಿತ್ಯವೂ ಮನೆಯಲ್ಲಿ ಭಗವಂತನ ನಾಮಸ್ಮರಣೆ ಮಾಡುವುದರೊಂದಿಗೆ ಮಕ್ಕಳೂ ನಾಮಸ್ಮರಣೆಯಲ್ಲಿ ತೊಡಗುವಂತೆ ಮಾಡಬೇಕಾಗಿದೆ.ಅನ್ಯಧರ್ಮೀಯರು ನಿತ್ಯವೂ ದಿನಕ್ಕೆ ಮೂರು ಬಾರಿ ಸಮಯಕ್ಕೆ ಸರಿಯಾಗಿ ಪ್ರಾರ್ಥನೆಯಲ್ಲಿ ತೊಡಗಿ ಶಕ್ತಿ ವೃದ್ಧಿಸಿಕೊಳ್ಳುತ್ತಿರುವಾಗ ಹಿಂದುಗಳು ಭಗವಂತನ ನಾಮಸ್ಮರಣೆಯಿಂದ ದೂರವಾಗಿ ದುರ್ಬಲರಾಗುತ್ತಿರುವುದು ಆತಂಕಕಾರಿ ಹಾಗಾಗಿ ಮಾತೆಯರು ಎಚ್ಚೆತ್ತುಕೊಂಡು ನಿತ್ಯವೂ ಮನೆಯಲ್ಲಿ ನಾಮಸ್ಮರಣೆ ಮಾಡುತ್ತಾ ಮಕ್ಕಳಿಗೆ ನಮ್ಮ ಸಂಸ್ಕಾರವನ್ನು ಕಲಿಸಿದರೆ ಸುಸಂಸ್ಕೃತ ಕುಟುಂಬ, ಸಮಾಜ, ಸುಭದ್ರ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದರು.
ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿ, ಮಕ್ಕಳಲ್ಲಿ ಮಾತೃಪೂಜ್ಯ ಭಾವನೆಯ ಸಂಸ್ಕಾರ ಕಲಿಸುವ ಶ್ರೇಷ್ಠ ಕಾರ್ಯ ಕುಬಸದ ಗಲ್ಲಿಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ, ಇದು ದೇಶಕ್ಕೆ ಮಾದರಿ ಎಂದರು. ಸಂಗಪ್ಪ ಜಮಖಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾಳಿಕಾದೇವಿ ಮಂದಿರದ ಅರ್ಚಕ ದಯಾನಂದ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ನೂರಾರು ಮಕ್ಕಳು ತಾಯಂದಿರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು, ಮಕ್ಕಳ ಭಕ್ತಿ ಭಾವ ಕಂಡ ತಾಯಂದಿರು ಹೃದಯ ತುಂಬಿ ಹರಿಸಿದರು.ಹಿರಿಯರಾದ ಶಂಕ್ರೆವ್ವ ಹನಗಂಡಿ, ಕಲ್ಲವ ಗಲಗಲಿ, ಸಿದ್ದು ಹಾವನಳ್ಳಿ, ಮಲ್ಲಪ್ಪ ಹುಣಶ್ಯಾಳ, ಚೈತ್ರಾ ಯರಗಟ್ಟಿ, ಶೃತಿ ಯರಗಟ್ಟಿ, ಅನುಪಮಾ ಗಲಗಲಿ, ಅಶ್ವಿನಿ ಗಲಗಲಿ, ಭಾರತಿ ನಡಕಟ್ನಿ, ದಾಕ್ಷಾಯಿಣಿ ನಡಕಟ್ನಿ, ದಾನಮ್ಮ ಹುಣಶ್ಯಾಳ ಸೇರಿದಂತೆ ನೂರಾರು ಮಾತೆಯರು ಭಾಗವಹಿಸಿದ್ದರು.