ಉಷ್ಣಾಂಶದಿಂದ ರಕ್ಷಣೆಗೆ ಜೀವನ ಶೈಲಿ ಬದಲಿಸಿ : ಡಾ.ವೆಂಕಟೇಶ ಮಲಘಾಣ

ಮುಧೋಳ 21: ಬೇಸಿಗೆಯಲ್ಲಿ ತಾಪಮಾನ ಜಾಸ್ತಿಯಾಗಿ ಸೂರ್ಯ ಸಂಪೂರ್ಣವಾಗಿ ಬೆವರುವಂತೆ ಮಾಡುತ್ತಾನೆ. ಬೇಸಿಗೆ ವೇಳೆ ನಮ್ಮ ದೇಹಕ್ಕೆ ಅಗತ್ಯ ನೀರಿನಾಂಶ ಸಿಗದಿದ್ದರೆ ನಿರ್ಜಲೀಕರಣ ಸಮಸ್ಯೆ ಪ್ರಾರಂಭವಾಗುತ್ತದೆ. ನಿಶ್ಶಕ್ತಿಯು ಕೂಡ ಡಿಹೈಡ್ರೇಷನ್ ಸಮಸ್ಯೆಯ ಒಂದು ಲಕ್ಷಣವಾಗಿದೆ. ಇದನ್ನು ಕಡೆಗಣಿಸಿದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಕಿವಿಮಾತು ಹೇಳಿದರು. 

 ಮುಧೋಳ ಎಸ್‌.ಆರ್ ಕಂಠಿ ಕಾಲೇಜಿನ ಐಕ್ಯೂಎಸಿ ಹಾಗೂ ಕ್ರೈಟೇರಿಯಾ -7ರ ಅಡಿಯಲ್ಲಿ ತಾಲೂಕಿನ ಉತ್ತೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆರೋಗ್ಯ ಕಾಳಜಿ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇಸಿಗೆ ಸಮಯದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ನಾವು ಸೇವಿಸುವ ಆಹಾರಗಳಲ್ಲಿ ಕೆಲವು ಬದಲಾವಣೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಬೀರುವ ಕೆಟ್ಟ ಪರಿಣಾಮಗಳನ್ನು ತಡೆಯಬಹುದು ಎಂದು ತಿಳಿಸಿದರು. 

 ಉತ್ತೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಚವ್ಹಾಣ ಮಾತನಾಡಿ, ಬೇಸಿಗೆ ಉಷ್ಣಾಂಶದಿಂದ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟಲು ಜೀವನ ಶೈಲಿ ಬದಲಿಸಿಕೊಳ್ಳಬೇಕು ಎಂದು ಹೇಳಿದರು. 

ಎಸ್‌.ಆರ್ ಕಂಠಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಮಾತನಾಡಿ, ಅತಿ ಬಿಸಿಲಿನಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ವೈದ್ಯರ ಸಲಹೆಗಳನ್ನು ಪಾಲಿಸಿ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಿ ಎಂದು ಹೇಳಿದರು. 

ಐಕ್ಯೂಎಸಿ ಕ್ರೈಟೇರಿಯಾ-7ರ ಅಧ್ಯಕ್ಷ ಡಾ.ಸುರೇಶ ಮೋದಿ, ಸದಸ್ಯರಾದ ಪ್ರೊ.ಕೆ.ಎಸ್‌.ಮಾಲಾಪೂರ,  

ರವಿ ಗೌಡರ, ಎಸ್‌.ಪಿ.ಸಂಗಳಿ, ವಿ.ಎಸ್‌.ಮುನವಳ್ಳಿ, ಮುಂತಾದವರು ಇದ್ದರು. 

 ಪ್ರೊ.ಎ.ಎಚ್‌.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಲಕ್ಷಿ-್ಮ ಬಿರಾದಾರ ಸ್ವಾಗತಿಸಿ, ನಿರೂಪಿಸಿದರು, ಪ್ರೊ.ಪ್ರೀತಿ ಕರಡಿ ವಂದಿಸಿದರು. 

ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ರೋಗಿಗಳು, ಎಸ್‌.ಆರ್‌.ಕಂಠಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.