ರಾಜ್ಯಕ್ಕೆ ಕೇಂದ್ರ ಸರ್ಕಾರ ವಂಚನೆ ಮಾಡಿದೆ : ಸಂಯುಕ್ತಾ

ಹುನಗುಂದ, ಇಳಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಮಾವೇಶ  

ಬಾಗಲಕೋಟೆ 16: ಸತತ ಎರಡು ಬರಗಾಲ ಎದುರಿಸಿದ ಕರ್ನಾಟಕ ಸರ್ಕಾರಕ್ಕೆ ಬಿಡಿಗಾಸೂ ನೀಡದೆ ಕೇಂದ್ರ ಸರ್ಕಾರ ವಂಚನೆ ಮಾಡಿದೆ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಆರೋಪ ಮಾಡಿದರು.  

ಹುನಗುಂದ ವಿಧಾನಸಭಾ ಕ್ಷೇತ್ರದ ಹುನಗುಂದ ಹಾಗೂ ಇಳಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹುನಗುಂದದ ಬಸವ ಮಂಟಪದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಸಂಯುಕ್ತ ಪಾಟೀಲ್ ಅವರ ಚುನಾವಣಾ ಪ್ರಚಾರದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

ರೈತರು ಸಂಕಷ್ಟದಲ್ಲಿ ಇದ್ದಾಗ ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ. ರೈತರ ಬೆಲೆಗೆ ಬೆಂಬಲ ಬೆಲೆ ನೀಡಲಿಲ್ಲ. ಕರ್ನಾಟಕ ಸರ್ಕಾರ ಬಡವರು ಮತ್ತು ರೈತರ ನೆರವಿಗೆ ನಿಂತಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.  

ಗ್ಯಾರಂಟಿ ನೀಡಿ ಕರ್ನಾಟಕ ಸರ್ಕಾರ ದಿವಾಳಿ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳುತ್ತಾರೆ. ಆದರೆ ಕರ್ನಾಟಕ ಸರ್ಕಾರ ಗ್ಯಾರಂಟಿ ನೀಡಿ ಜನರ ಬದುಕಿಗೆ ನೆರವಾಗಿದೆ. ಕರ್ನಾಟಕದ ಜನರು ಸ್ವಾಭಿಮಾನಿಗಳು. ನಮ್ಮ ಹಕ್ಕಿನ ಪಾಲನ್ನು ನಾವು ಕೇಳುತ್ತಿದ್ದೇವೆ ಎಂದರು.  ದೇಶಕ್ಕೆ ಕರ್ನಾಟಕವೇ ಮಾದರಿ :  

ಇಡೀ ದೇಶಕ್ಕೆ ಕರ್ನಾಟಕವೇ ಮಾದರಿ. ಗುಜರಾತ್ ಮಾದರಿ ಇಲ್ಲ. ಗುಜರಾತ್ ಹೆಚ್ಚು ತೆರಿಗೆ ಕೊಡಲ್ಲ. ಮಹಾರಾಷ್ಟ್ರ ನಂತರ ಕರ್ನಾಟಕವೇ ಹೆಚ್ಚು ತೆರಿಗೆ ನೀಡುತ್ತಿದೆ. ಇಡೀ ದೇಶದಲ್ಲಿ ಮೋದಿ ಅಲೆ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.  

ರೈತರಿಗೆ ಪರಿಹಾರ ನೀಡಲು ಯೋಗ್ಯತೆ ಇಲ್ಲದ ಕೇಂದ್ರ ಸರ್ಕಾರ ಏನು ಸುಭಿಕ್ಷೆ ಸಾಧಿಸುತ್ತದೆ. ಆದ್ದರಿಂದ ರೈತರು ಪ್ರತಿಭಟನೆ ನಿಲ್ಲಿಸಬಾರದು. ನಾವು ಬೆಳೆದ ಬೆಳೆಗೆ ಬೆಲೆ ಕೇಳುವುದು ತಪ್ಪಲ್ಲ. ಇಷ್ಟೆಲ್ಲ ಆದರೂ ರೈತರ ಸಂಕಲ್ಪ ಪತ್ರ ಬಿಡುಗಡೆ ಮಾಡ್ತಾರೆ ಎಂದರೆ ದುರ್ದೈವ. ನಿಜವಾಗಿಯೂ ರೈತರ ಕಾಳಜಿ ಮಾಡುತ್ತಿರುವುದು ಅದು ಕರ್ನಾಟಕ. ಇಲ್ಲಿ  ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ.  ರೈತರಿಗೆ ಹಾಗೂ ನೇಕಾರರಿಗೆ ಪುಕ್ಕಟೆ ವಿದ್ಯುತ್ ನೀಡಲಾಗಿದೆ. ಬಡವರಿಗೆ 200 ಯೂನಿಟ್ ಕರೆಂಟ್ ಉಚಿತ ನೀಡಲಾಗಿದೆ ಎಂದರು.  

ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ದೇಶದ ಇತಿಹಾಸ ಕಾಂಗ್ರೆಸ್ ಪಕ್ಷದ ಇತಿಹಾಸ. ಭಾರತೀಯ ಜನತಾ ಪಕ್ಷದ ಇತಿಹಾಸವೇ ಇಲ್ಲ. ಕರ್ನಾಟಕದಲ್ಲಿ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಜಾರಿ ಮಾಡಿದ್ದೇವೆ. ಸಂಯುಕ್ತ ಪಾಟೀಲ್ ಅವರಿಗೆ ಮತಹಾಕಿ ಗೆಲ್ಲಿಸಿ. ಏಕೆ ಮತ ಹಾಕಿ ಎಂದರೆ ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ.  

ನನ್ ಸಹೋದರಿಗೆ ಮತ ನೀಡಿ ಗೆಲ್ಲಿಸಿ  ಎಂದರು.  

ಈ ಸಂದರ್ಭದಲ್ಲಿ ಸಚಿವರಾದ ಆರ್‌.ಬಿ.ತಿಮ್ಮಾಪುರ, ಶಾಸಕರಾದ, ವಿಜಯಾನಂದ ಕಾಶಪ್ಪನವರ, ಜಿ.ಟಿ.ಪಾಟೀಲ್, ಎಚ್‌.ವೈ.ಮೇಟಿ, ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಸ್‌.ಜಿ.ನಂಜಯ್ಯನಮಠ, ಸಿದ್ದು ಕೊಣ್ಣೂರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.