ಧಾರವಾಡದಲ್ಲಿ ಶಿಕ್ಷಕರ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಕರೆ

ಧಾರವಾಡದಲ್ಲಿ ಶಿಕ್ಷಕರ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಕರೆ  Call for a protest against teachers' issues in Dharwad

ಲೋಕದರ್ಶನ ವರದಿ 

ಧಾರವಾಡ 06: ಶಿಕ್ಷಕರನ್ನು ಬೋಧನಾ ಕಾರ್ಯದ ಜತೆಗೆ ಸರ್ಕಾರದ ವಿವಿಧ ಯೋಜನೆಗಳ ಕೆಲಸಗಳಿಗೆ ನಿಯೋಜಿಸುವುದರಿಂದ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು. ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಆಯೋಜಿಸಿದ್ದ ‘ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ-2026’ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರನ್ನು ಚುನಾವಣಾ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಸಿಕೊಳ್ಳುವುದನ್ನು ಖಂಡಿಸಿದರು. ಶಾಲೆಗಳಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕೊರತೆ, ಪಠ್ಯಪುಸ್ತಕಗಳ ಅಭಾವ ಸೇರಿದಂತೆ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರ ಶೀಘ್ರ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಶಿಕ್ಷಕರ ಪರ ಸಂಘವು ಸದಾ ಹೋರಾಟಕ್ಕೆ ಸಿದ್ಧವಿದೆ ಎಂದರು. ಕಾರ್ಯಕ್ರಮದಲ್ಲಿ ಡಾ. ಲಿಂಗರಾಜ ರಾಮಾಪುರ ಅವರ ದತ್ತಿ ವತಿಯಿಂದ ಮಾಲತೇಶ ನಿಂಬಕ್ಕನವರ ಹಾಗೂ ರೂಪಾ ಬಿ. ಪುರಮಕರ ಅವರಿಗೆ ‘ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ-2026’ ನೀಡಿ ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಳಗಿ, ಜಂಟಿ ನಿರ್ದೇಶಕಿ ಜಯಶ್ರೀ ಕಾರೇಕಾರ ಸೇರಿದಂತೆ ಗಣ್ಯರು, ಶಿಕ್ಷಕರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.