ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ

ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ  Building an addiction-free society is the responsibility of all of us

ತಾಳಿಕೋಟಿ 25 : ಮಾದಕ ದ್ರವ್ಯಗಳ ವ್ಯಸನವು ಇಂದು ಸಮಾಜ ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿದ್ದು ಯುವಜನತೆ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವಂತಹ ದುಶ್ಚಟಗಳಿಂದ ದೂರವಿದ್ದು ಇದನ್ನು ನಿಯಂತ್ರಿಸಲು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸ್ಥಳೀಯ ಪೋಲಿಸ್ ಠಾಣೆಯ ಪಿಎಸ್‌ಐ ಎಸ್ ಎಂ ಪಡಶೆಟ್ಟಿ ಹೇಳಿದರು. ಪಟ್ಟಣದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ತಾಳಿಕೋಟಿ ಪೊಲೀಸ್ ಠಾಣೆ ಹಾಗೂ ಎಸ್‌. ಕೆ ಪಿಯು ಕಾಲೇಜ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ಬೃಹತ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾದಕ ವ್ಯಸನದಿಂದ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆ. ಯಾರಾದರೂ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದರೆ ಅಂತವರ ಕುರಿತು ಮತ್ತು ಮಾದಕ ವಸ್ತುಗಳ ಖರೀದಿ, ಮಾರಾಟ ಹಾಗೂ ದಾಸ್ತಾನು ಮಾಡುವವರ ಕುರಿತು ಸ್ಪಷ್ಟ ಮಾಹಿತಿ ನೀಡಿದರೆ ಅಂತವರ ವಿರುದ್ಧ ಕಾನೂನಿನ ಕಠಿಣ ಕ್ರಮ ಜರುಗಿಸಲಾಗುವುದು.  ಸಾರ್ವಜನಿಕರಿಗೆ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿ ಎಂದರು.

ಜಾಗೃತಿ ಜಾಥಾ: ಪಟ್ಟಣದ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಬಳಕೆ, ಅದರ ದುರುಪಯೋಗ ಹಾಗೂ ಅಕ್ರಮ ಸಾಗಣಿ ಕುರಿತು ಜಾಗೃತಿ ಮೂಡಿಸಲು ಎಸ್‌. ಕೆ ಪಿಯು ಕಾಲೇಜ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಫ್ಲೆಕ್ಸ್‌ ಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಎಸ್‌.ಕೆ ಪಿಯು ಕಾಲೇಜ್ ಪ್ರಾಚಾರ್ಯ ಕಿಶೋರ ರಾಥೋಡ, ಪೊಲೀಸ್ ಸಿಬ್ಬಂದಿಗಳಾದ ಎಂ ಎಲ್ ಪಟ್ಟೇದ(ಎಚ್‌.ಸಿ.) ಸಿದ್ದನಗೌಡ ದೊಡ್ಡಮನಿ, ನಡಕೂರ, ಇಮಾಮ ಹಾಗೂ ಕಾಲೇಜ್ ವಿದ್ಯಾರ್ಥಿಗಳು ಇದ್ದರು.