ಸತ್ಸಂಗದಿಂದ ಸಂಸ್ಕಾರಯುತ ಸಮಾಜ ನಿರ್ಮಾಣ

Building a cultured society through satsang

ವಿಜಯಪುರ 27: ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಮಾನವನಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ, ಸಮ ಸಮಾಜದ ನಿರ್ಮಾಣದಲ್ಲಿ ತೊಡಗಿದ್ದರು. ಆಡುವ ಮಾತು ಮೃದು ವಚನದಂತಿದ್ದು, ಅದು ನುಡಿದರೆ ಮುತ್ತಿನಹಾರದಂತಿರಬೇಕು. ಯಾರ ಮನಸ್ಸಿಗೂ ನೋವುಂಟು ಮಾಡಬಾರದು. ನಡೆ-ನುಡಿ ಒಂದಾದರೆ ಮಾತ್ರ ಆ ದೇವರು ನಮಗೆ ಒಲಿಯುತ್ತಾನೆ ಎಂಬ ಭಾವ ಬಸವಣ್ಣನವರ ವಚನದಲ್ಲಿದೆ. ಕಾಳವ್ವ ತನ್ನ ವಚನದಲ್ಲಿ ಆಚಾರ, ವಿಚಾರ, ಸನ್ನಡತೆ, ಸಚ್ಚಾರಿತ್ರ್ಯ, ಸದ್ಭಾವ, ಸಮಾನತೆ ಮತ್ತು ಸಮಷ್ಠಿಭಾವಗಳ ತಿಳಿಸಿ, ಇಡೀ ಮನುಕುಲ ನಾವೆಲ್ಲರೂ ಒಂದೇ ಎಂಬ ಭಾವ ಮೂಡುವಂತಹ ಜೀವನ ಸಂದೇಶ ನೀಡುವ ವಚನಗಳನ್ನು ಬರೆದಿದ್ದಾಳೆ. ಶರಣರ ಎಲ್ಲ ವಚನಗಳು ನಮಗೆ ಇಂದಿಗೂ ದಾರೀದೀಪವಾಗಿವೆ ಎಂದು ಸಾಹಿತಿ ಮನು ಪತ್ತಾರ ಅಭಿಪ್ರಾಯಪಟ್ಟರು. 

ಅವರು ನಗರದ ಅಲ್‌-ಅಮೀನ ಆಸ್ಪತ್ರೆಯ ಎದುರಿಗೆ ಇರುವ ಸೇನಾ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಜರುಗಿದ “ಮಾಸಿಕ ಸತ್ಸಂಗ ಕಾರ್ಯಕ್ರಮ-ಬೆಳದಿಂಗಳ ಬೆಳಕಿನೆಡೆಗೆ” ಕಾರ್ಯಕ್ರಮದಲ್ಲಿ “ಶರಣರ ಅನುಭಾವ” ವಿಷಯ ಕುರಿತು ಅವರು ಮಾತನಾಡುತ್ತಿದ್ದರು. 

ಅವರು ಮಾತನಾಡುತ್ತಾ, ಬಸವಣ್ಣನವರು ತಮ್ಮ ವಚನದಲ್ಲಿ ಬದುಕುವ ಕಲೆ, ರೀತಿ-ನೀತಿ, ಸಂಸ್ಕೃತಿ-ಸಂಸ್ಕಾರ, ಜೀವನದ ಒಳನೋಟ ಮತ್ತು ಜೀವನಾನುಭವಗಳನ್ನು ಸವಿಯುವ ಬಗೆ ಹೀಗೆ ಅನೇಕ ಜೀವನ ಮತ್ತು ಮೌಲ್ವಿಕ ವಿಚಾರಧಾರೆಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲು ಗುರುವಾಗಿರುದರಿಂದ ಶ್ರೇಷ್ಠ ದಾರ್ಶನಿಕರ ವೈಚಾರಿಕತೆ, ಮೌಲ್ವಿಕ, ನೈತಿಕ, ಜೀವನಾನುಭವ ನೀಡುವ ಎಲ್ಲ ವಚನಾಮೃತಗಳು ಪ್ರತಿ ಮನೆಯಲ್ಲಿ, ಮಕ್ಕಳಲ್ಲಿ ಮೈಗೂಡಿಸಿಕೊಳ್ಳುವಂತಾಗಬೇಕು. ಶರಣರ ಎಲ್ಲ ತತ್ವ-ಸಿದ್ದಾಂತ, ವಚನಗಳ ಸಾರ-ಸಂದೇಶಗಳ ಹಿಂದಿನ ಸತ್ವವನ್ನು ಅರಿತುಕೊಂಡು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕೆಂದು ಸಲಹೆ ನೀಡಿದರು. ಅವರು ತಮ್ಮ ಉಪನ್ಯಾಸದುದ್ದಕ್ಕೂ ಅಕ್ಕಮಹಾದೇವಿ, ಅಲ್ಲಮಪ್ರಭು, ಡೋಹರ ಕಕ್ಕಯ್ಯ, ಕಾಳವ್ವೆ, ಸರೂ​‍್ಭಷಣ ಶಿವಯೋಗಿಗಳ, ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕಮ್ಮ ಇನ್ನಿತರ ಬಸವಾದಿ ಶರಣರ ವಚನಗಳಲ್ಲಿ ಅಡಗಿದ ತಾತ್ವಿಕ-ಜೀವನ ಮೌಲ್ಯಗಳನ್ನು  ಮನಮುಟ್ಟುವಂತೆ ತಿಳಿಸಿದರು. 

ಸಮಾರಂಭದಲ್ಲಿ ಇನ್ನೊರ್ವ ಅತಿಥಿ ಪ್ರೊ. ಎಂ.ಆರ್‌.ಉಕುಮನಾಳಮಠ ಅವರು ಮಾತನಾಡಿ, ನಮ್ಮಲ್ಲಿರುವ ಧನ, ಅಧಿಕಾರ, ಆಸ್ತಿ, ಸಂಪತ್ತು ಯಾವುದು ಶಾಶ್ವತವಲ್ಲ. ಅದನ್ನು ಬಳಸಿದಂತೆ ಖಾಲಿಯಾಗುತ್ತದೆ. ಆದರೆ ಮನುಷ್ಯನು ಸುಖ-ಶಾಂತಿ, ನೆಮ್ಮದಿ, ಸಂತೃಪ್ತಿ ಮತ್ತು ಸಾರ್ಥಕ ಬದುಕಿಗೆ ಅಧ್ಯಾತ್ಮಿಕ, ವೈಚಾರಿಕ, ನೈತಿಕ-ಮೌಲ್ವಿಕಗಳು ದೊರೆಯುವದು ದೇವಸ್ಥಾನಗಳ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವದರಿಂದ ಮಾತ್ರ. ಕೋವಿಡ್ ಕಾಲಘಟ್ಟದಲ್ಲಿ ಜೀವ, ಜೀವನ ಮತ್ತು ಆರೋಗ್ಯದ ಮಹತ್ವವನ್ನು ಅರಿತ ಜನ ಇಂದು ದೇವರು, ದೇವಸ್ಥಾನ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಸಮಾರಂಭದಲ್ಲಿ ಲಕ್ಷ್ಮೀ ದೇವಸ್ಥಾನದ ನಿರ್ದೇಶಕಿ ಕಸ್ತೂರಿ ಸಾವಳಗಿ ಹಾಗೂ ಎಸ್‌. ಕೆ. ಕಡಕೋಳ ಇನ್ನಿತರು ಸಹ ಉಪಸ್ಥಿತರಿದ್ದರು.  

ಈ ಕಾರ್ಯಕ್ರಮದಲ್ಲಿ ರಾಜಶೇಖರ ಉಮರಾಣಿ, ಶಿವಾಲಯ ದೇವಸ್ಥಾನದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಡಾ. ರಾಜಕುಮಾರ ಡೊಳ್ಳಿ, ಸಾಹಿತಿಗಳಾದ ಪ್ರೊ. ಬಿ.ಡಿ.ಕುಂಬಾರ. ಪ್ರೊ. ಎಂ.ಎಸ್‌.ಖೊದ್ನಾಪೂರ, ಸಿದ್ದು ಯರನಾಳ, ಆರ್‌.ಕೆ. ಕಪಾಳಿ ಹಾಗೂ ಲಕ್ಷ್ಮೀ ದೇವಸ್ಥಾನದ ಅಧ್ಯಕ್ಷೆ ಶಾಂತಾ ಕಪಾಳಿ, ಕಾರ್ಯದರ್ಶಿ ಶೋಭಾ ಚವ್ಹಾಣ ಇನ್ನಿತರರು ಸಹ ಭಾಗವಹಿಸಿದ್ದರು. ಪ್ರತಿ ತಿಂಗಳು ಜರುಗುವ ಶರಣ ಸಂಸ್ಕೃತಿ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಬಡಾವಣೆಗಳ ಯುವಕರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಭಾಗವಹಿಸಿದ್ದರು.