6 ರಂದು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿ ಭೂಮಿಪೂಜೆ: ಲಕ್ಷ್ಮಣ ಸವದಿ

ಕೊಟ್ಟಲಗಿಯಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ  

ಅಥಣಿ 04:  ತಾಲೂಕಿನ ವಿಜಯಪುರ ಜಿಲ್ಲೆಗೆ ಹೊಂದಿಕೊಂಡ 10 ಗ್ರಾಮಗಳ 70 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ 1486 ಅನುದಾನದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಮಾರ್ಚ 6 ರಂದು ಮುಂಜಾನೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೊಟ್ಟಲಗಿಯಲ್ಲಿ ನೆರವೇರಿಸಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು. ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.   

ಅದೇ ದಿನ ಈ ಭಾಗದ 11 ರೈತರ ಸಮ್ಮುಖದಲ್ಲಿ ವಿಘ್ನೇಶ್ವರನ ಪೂಜೆ ಮತ್ತು ಹೋಮ ಹವನ ಮಾಡುವ ಮೂಲಕ ಧಾರ್ಮಿಕ ವಿಧಿ ವತ್ತಾಗಿ ಭೂಮಿ ಪೂಜೆ ಕೂಡ ನೆರವೇರಿಸಲಾಗುವುದು ಎಂದ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಬೃಹತ್ ಕೈಗಾರಿಕೆ ಸಚಿವ ಎಮ್‌.ಬಿ.ಪಾಟೀಲ, ಅಬಕಾರಿ ಸಚಿವ ಆರಿ​‍್ಬ.ತಿಮ್ಮಾಪುರ ಆಗಮಿಸಲಿದ್ದಾರೆ ಎಂದು ತಿಳಿಸಿದರು.   

ಈ ಯೋಜನೆಯಲ್ಲಿ ಪೂರ್ವ ಭಾಗದ 10 ಗ್ರಾಮಗಳ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ತುಂಬಿಸುವ ಮತ್ತು ಅವಶ್ಯ ಇದ್ದಲ್ಲಿ ಹೊಸ ಕೆರೆಗಳನ್ನು ನಿರ್ಮಿಸಿಕೊಂಡು ನೀರು ಸಂಗ್ರಹಿಸಲಾಗುತ್ತದೆ ಇದರಿಂದ ಈ ಭಾಗದಲ್ಲಿ ಅಂರ್ತಜಲ ಮಟ್ಟ ಹೆಚ್ಚಾಗುತ್ತದೆ ಮತ್ತು ನೀರು ತುಂಬಿಸಿದ ಕೆರೆಗಳಿಂದ ತಮ್ಮ ತಮ್ಮ ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿಟ್ಟು ಕೊಂಡು ಬೇಸಿಗೆ ಅವಧಿಯಲ್ಲಿ ಈ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.  

ಬಜೆಟ್ ಪೂರ್ವದಲ್ಲಿ ಈ ಯೋಜನೆಗೆ ಆಡಳಿತಾತ್ಮಕ ಮತ್ತು ಆರ್ಥಿಕ ಮಂಜೂರಾತಿ ಪಡೆದುಕೊಂಡ ನಂತರ ಇತ್ತೀಚಿಗೆ ಸಿಎಮ್ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ 1486 ಕೋಟಿ ಅನುದಾನ ಮೀಸಲಿಟ್ಟ ನಂತರವೇ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದ ಅವರು ಈ ಯೋಜನೆ ಪೂರ್ಣಗೊಳ್ಳುವುದರಿಂದ ಅಥಣಿ ತಾಲೂಕಿನಲ್ಲಿ ಶೇ.95 ರಷ್ಟು ಕೃಷಿ ಭೂಮಿ ನೀರಾವರಿಗೊಳ ಪಡಲಿದೆ ಎಂದರು.  

ರೈತನ ಬೆಳೆಗೆ ನೀರು ಮತ್ತು ವಿದ್ಯುತ್, ರಸ್ತೆ, ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ಮತ್ತು ರೈತನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸಂಕಲ್ಪ ಇಟ್ಟುಕೊಂಡು ರಾಜಕೀಯಕ್ಕೆ ಧುಮಿಕಿದ್ದೆ. ನಾನು ಅಧಿಕಾರಕ್ಕೆ ಬಂದಾಗ ಅಥಣಿ ತಾಲೂಕಿನಲ್ಲಿ ಒಂದೂ ಸರಕಾರಿ ಕಾಲೇಜುಗಳಿರಲಿಲ್ಲ ಈಗ ಅಥಣಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸರಕಾರಿ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ ಇದರ ಜೊತೆಗೆ ಕೊಕಟನೂರ ಗ್ರಾಮದಲ್ಲಿ ಸರಕಾರಿ ಪಶು ವೈದ್ಯಕೀಯ ಮಹಾವಿದ್ಯಾಲಯ ಕೂಡ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದರು.  

ಧುರೀಣರಾದ ಸುರೇಶ ಮಾಯಣ್ಣವರ, ಶಿವು ಗುಡ್ಡಾಪುರ, ಶಿದರಾಯ ಯಲ್ಲಡಗಿ, ಶಾಂತು ನಂದೇಶ್ಚರ, ಶಿವರುದ್ರ ಘೂಳಪ್ಪನವರ, ರಾಮನಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.