ಫೆ.24ರಂದು ಭಾರತ ಹುಣ್ಣಿಮೆ: ಯಲ್ಲಮ್ಮನಗುಡ್ಡದಲ್ಲಿ ಜಾತ್ರೆಗೆ ಸಕಲ ಸಿದ್ಧತೆ ಪೂರ್ಣ

15 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನೀರೀಕ್ಷೆ: ಮೂಲಸೌಕರ್ಯ ಒದಗಿಸಲು ದೇವಸ್ಥಾನ ಆಡಳಿತ ಮಂಡಳಿ ಕ್ರಮ 

ಉಗರಗೋಳ 22: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಫೆ.24ರಂದು ನಡೆಯಲಿರುವ ಭಾರತ ಹುಣ್ಣಿಮೆ ಜಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿವೆ. ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಯಲ್ಲಮ್ಮ ದೇವಿ ದೇವಸ್ಥಾನ ಆಡಳಿತ ಮಂಡಳಿ ಕ್ರಮ ವಹಿಸಿದೆ. 

ಇದು ರಾಜ್ಯದ ದೊಡ್ಡಜಾತ್ರೆ. ಇದರಲ್ಲಿ 15 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನೀರೀಕ್ಷೆಯಿದೆ. ಕೆಲವರು ಪಾದಯಾತ್ರೆ, ಚಕ್ಕಡಿಬಂಡಿ ಮೂಲಕ ಈಗಾಗಲೇ ಯಲ್ಲಮ್ಮನ ಸನ್ನಿಧಿಯತ್ತ ಮುಖಮಾಡಿದ್ದಾರೆ. ಶುಕ್ರವಾರ ಸಂಜೆಯವರೆಗೆ ಇಡೀ ಗುಡ್ಡದ ಪರಿಸರ ಭಕ್ತರಿಂದ ತುಂಬಿ ತುಳುಕಲಿದೆ. 

ಈ ಜಾತ್ರೆಗೆ ರೈತರು ಚಕ್ಕಡಿಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರಿಗೆ ಮತ್ತು ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಭಕ್ತರಿಗೆ ಕುಡಿಯುವ ನೀರು, ಶೌಚಗೃಹ, ವಸತಿ ಸೌಕರ್ಯ ಕಲ್ಪಿಸಲಾಗುವುದು. ಸುಲಭವಾಗಿ ದೇವಿ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗುವುದು' ಎಂದು ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ತಿಳಿಸಿದ್ದಾರೆ. 

'ಜಾತ್ರೆಗೆ ಬರುವವರ ಆರೋಗ್ಯ  ದೃಷ್ಟಿಯಿಂದ ಎರಡು ಕಡೆ ಕ್ಲಿನಿಕ್ ತೆರೆಯಲಾಗಿದೆ. ಅಲ್ಲಿ ವೈದ್ಯರು, ಶುಶ್ರೂಷಾಧಿಕಾರಿಗಳನ್ನು ನಿಯೋಜಿಸಿ, ಓಷಧ ವ್ಯವಸ್ಥೆ ಮಾಡಲಾಗಿದೆ. ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸುವುದಕ್ಕಾಗಿ 30 ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. 

'ಭಾರತ ಹುಣ್ಣಿಮೆ ಅಂಗವಾಗಿ ಬೆಳಿಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ನಸುಕಿನ ಜಾವ 4.30ರಿಂದಲೇ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು ಸರದಿ ಸಾಲಿನಲ್ಲಿ ನಿಂತು, ದರ್ಶನ ಪಡೆಯಬೇಕು. ಜಾತ್ರೆ ಯಶಸ್ವಿಗೆ ಸಹಕರಿಸಬೇಕು ಎಂದು ಯಲ್ಲಮ್ಮ ದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಹೇಳಿದ್ದಾರೆ. 

ಪ್ರತಿ ಚಲನ-ವಲನದ ಮೇಲೂ ನಿಗಾ: ಜಾತ್ರೆಯಲ್ಲಿ ಜನದಟ್ಟಣೆ ಆಗುವ ಕಾರಣ, ಸುರಕ್ಷತೆ ಮತ್ತು  ಭದ್ರತೆ ದೃಷ್ಟಿಯಿಂದ ಯಲ್ಲಮ್ಮ ದೇವಿ ದೇವಸ್ಥಾನದ ಪ್ರಾಂಗಣ, ಕ್ಯೂಲೈನ್ ವ್ಯವಸ್ಥೆ, ಮಹಾದ್ವಾರ, ಚೈನ್ ಗೇಟ್,  ಎಣ್ಣೆ ಹೊಂಡ, ಪರಶುರಾಮ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಮೂರು ನಾಕಾಗಳು ಸೇರಿದಂತೆ ಗುಡ್ಡದ ಪರಿಸರದಲ್ಲಿ 65 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ 

ದೇವಸ್ಥಾನದ ಅಧಿಕಾರಿಗಳು ಸೇರಿದಂತೆ 150 ಸಿಬ್ಬಂದಿ, 45 ಪೌರ ಕಾರ್ಮಿಕರು ಶಿಫ್ಟ್‌ ಆಧಾರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಪಿ.ಬಿ. ಮಹೇಶ ಹೇಳಿದರು. 

ಬಸ್ ವ್ಯವಸ್ಥೆ: 'ಭಾರತ ಹುಣ್ಣಿಮೆ ಜಾತ್ರೆಗೆ ಬೆಳಗಾವಿ ಜತೆಗೆ, ಮಹಾರಾಷ್ಟ್ರದಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಅವರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಬೆಳಗಾವಿಯಿಂದ ಯಲ್ಲಮ್ಮನಗುಡ್ಡಕ್ಕೆ 24*7 ಮಾದರಿಯಲ್ಲಿ ವಿಶೇಷ ಬಸ್ ಸೌಕರ್ಯ ಒದಗಿಸಲಾಗಿದೆ' ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ಹೇಳಿದ್ದಾರೆ. 

ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಸವದತ್ತಿಯ ನೂಲಿನ ಗಿರಣಿ, ಜೋಗುಳಬಾವಿ ಮಾರ್ಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಉಗರಗೋಳ ಮಾರ್ಗದಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ 7 ಸಿಪಿಐ, 18 ಪಿಎಸ್‌ಆಯ್ ಸೇರಿದಂತೆ 41 ಎಎಸ್‌ಆಯ್, ಎಚ್‌ಜಿ 278, ಕೆಎಸ್‌ಆರ್‌ಪಿ 6 ತುಕಡಿ ಡಿಎಆರ್ 2 ತುಕಡಿ ಹಾಗೂ 310 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ರಾಮದುರ್ಗ ಡಿವಾಯ್‌ಎಸ್‌ಪಿ  ಎಮ್ ಪಾಂಡುರಂಗಯ್ಯ ಹೇಳಿದ್ದಾರೆ."