ಬಾರಿ ಮಳೆಗೆ ತತ್ತರಿಸಿದ ಬಳ್ಳಾರಿ : ಜನಜೀವನ ಅಸ್ತವ್ಯಸ್ತವ್ಯಾಪಾರ ವಹಿವಾಟು ಸ್ಥಗಿತ ಹಿ ರಸ್ತೆಗಳು ಜಲಾವೃತ ಹಿ ಗುಡುಗು ಸಿಡಿಲಿಗೆ ಜನರಲ್ಲಿ ಆತಂಕ
Bellary reels under heavy rain: Normal life disrupted, business halted, roads flooded, thunderstorms
ಬಳ್ಳಾರಿ 19 : ಈ ವರ್ಷದ ಮೊದಲ ಭಾರೀ ಮಳೆಯೇ ಗಣಿನಾಡು ಬಳ್ಳಾರಿಯನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಸೋಮವಾರ ಸಂಜೆ ಆರಂಭವಾದ ಧಾರಾಕಾರ ಮಳೆ ಹಲವು ಗಂಟೆಗಳ ಕಾಲ ನಿರಂತರವಾಗಿ ಸುರಿದ ಪರಿಣಾಮ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡವು. ರಸ್ತೆಗಳು ಕೆರೆಗಳಂತಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಗಾಂಧಿನಗರ, ಕೌಲ್ಬಜಾರ್, ಬೆಂಗಳೂರು ರಸ್ತೆ, ಮೋತಿ ಸರ್ಕಲ್, ಸುಧಾ ಕ್ರಾಸ್, ಡಬ್ಲ್ಯುಡಿಸಿ ಪ್ರದೇಶ, ಹವಂಬಾವಿ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಮಳೆ ನೀರು ರಸ್ತೆ ಮೇಲೆ ಹರಿದು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಕೆಲವೆಡೆ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ವ್ಯಾಪಾರಸ್ಥರು ಆತಂಕಕ್ಕೀಡಾದರು.
ಮಳೆಯ ತೀವ್ರತೆಗೆ ವ್ಯಾಪಾರ ವಹಿವಾಟು ಸಂಪೂರ್ಣ ಕುಂಠಿತಗೊಂಡಿದ್ದು, ಸಂಜೆ ವೇಳೆಗೆ ಅನೇಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟವು.ಭಾರೀ ಮಳೆಯೊಂದಿಗೆ ಗುಡುಗು ಹಾಗೂ ಸಿಡಿಲಿನ ಆರ್ಭಟವೂ ಹೆಚ್ಚಾಗಿದ್ದರಿಂದ ಜನರು ಭಯಭೀತರಾದರು. ಮಳೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಆಕಾಶದಲ್ಲಿ ನಿರಂತರ ಮಿಂಚು ಕಾಣಿಸಿಕೊಂಡು, ಭಾರೀ ಸದ್ದುಗಳೊಂದಿಗೆ ಸಿಡಿಲು ಬಡಿದ ಪರಿಣಾಮ ಮಕ್ಕಳು, ವೃದ್ಧರು ಹಾಗೂ ಮಹಿಳೆಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಹಲವರು ಸುರಕ್ಷತೆಗಾಗಿ ಮನೆಗಳಲ್ಲೇ ಉಳಿದುಕೊಂಡರು.ನಗರದ ತಗ್ಗು ಪ್ರದೇಶಗಳಾದ ರಾಯಲ್ ಸರ್ಕಲ್ ಸುತ್ತಮುತ್ತ, ಕಪಗಲ್ಲು ರಸ್ತೆ, ಕಣೇಕಲ್ ರಸ್ತೆ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಘಟನೆಗಳು ವರದಿಯಾಗಿವೆ.
ಒಳಚರಂಡಿ ವ್ಯವಸ್ಥೆ ಸಮರ್ಕವಾಗಿಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆಯೇ ನಿಂತು ಕೆಸರುಮಯ ವಾತಾವರಣ ನಿರ್ಮಾಣವಾಯಿತು. ಮಳೆ ನೀರು ಮತ್ತು ಚರಂಡಿ ನೀರು ಒಂದೇ ಸೇರಿ ಹರಿದ ಪರಿಣಾಮ ಜನರು ದುರ್ವಾಸನೆ ಹಾಗೂ ಅಸ್ವಚ್ಛತೆಯಿಂದ ಸಂಕಷ್ಟ ಅನುಭವಿಸಿದರು.ಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು. ರಸ್ತೆಗಳಲ್ಲಿನ ಗುಂಡಿಗಳು ನೀರಿನಿಂದ ಮುಚ್ಚಿಕೊಂಡಿದ್ದರಿಂದ ಬೈಕ್ ಸವಾರರು ಹಲವು ಕಡೆ ಜಾರಿ ಬಿದ್ದ ಘಟನೆಗಳು ಸಂಭವಿಸಿವೆ. ಸಂಚಾರ ದಟ್ಟಣೆ ಹೆಚ್ಚಾಗಿ, ನಗರದ ಪ್ರಮುಖ ವೃತ್ತಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಉದ್ಯೋಗಿಗಳು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡರು.
ನಗರದ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವೂ ಉಂಟಾಯಿತು. ಗುಡುಗು-ಸಿಡಿಲಿನ ಭೀತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಜನರು ಕತ್ತಲಲ್ಲೇ ಕಾಲ ಕಳೆಯುವಂತಾಯಿತು.ಕೃಷಿಕರಲ್ಲಿ ಮಾತ್ರ ಈ ಮಳೆ ಸಂತಸ ಮೂಡಿಸಿದೆ. ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನತೆಗೆ ಮಳೆ ತಂಪು ನೀಡಿದರೂ, ಏಕಾಏಕಿ ಸುರಿದ ಧಾರಾಕಾರ ಮಳೆಯಿಂದ ನಗರ ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾದವು.
ಮುಂಗಾರು ಪೂರ್ವ ಸಿದ್ಧತೆಗಳ ಕೊರತೆ ಮತ್ತೊಮ್ಮೆ ಬಹಿರಂಗಗೊಂಡಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.“ಪ್ರತಿ ವರ್ಷ ಮಳೆಯಾದಾಗ ಇದೇ ಸಮಸ್ಯೆ ಎದುರಾಗುತ್ತದೆ. ರಸ್ತೆ, ಚರಂಡಿ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ಪರಿಸ್ಥಿತಿ ಬದಲಾಗಿಲ್ಲ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.ಹವಾಮಾನ ಇಲಾಖೆ ಮುಂದಿನ ಕೆಲ ದಿನಗಳ ಕಾಲ ಜಿಲ್ಲೆಯಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 