ಬಳ್ಳಾರಿ: ಡ್ರ್ಯಾಗನ್ ಹಣ್ಣಿನ ಬೇಸಾಯದಿಂದ ಗಟ್ಟಿಯಾದ ಆದಾಯ

ಲೋಕದರ್ಶನ ವರದಿ

ಬಳ್ಳಾರಿ 03: ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯ ಇಂಜಿನಿಯರರೊಬ್ಬರು ಕೇವಲ ಎರಡು ಎಕರೆಯಲ್ಲಿ ಇಳುವರಿ ಪಡೆದ ಎಲ್ಲ 14 ಮೆ.ಟನ್ ಡ್ರ್ಯಾಗನ್ ಹಣ್ಣಿನ ಮಾರಾಟದಿಂದ ಒಂದೇ ವರ್ಷದಲ್ಲಿ ಒಟ್ಟು 14 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಇವರೇ  ರಾಜಶೇಖರ್ ದ್ರೋಣವಲ್ಲಿ.

ಡ್ರ್ಯಾಗನ್ ಹಣ್ಣಿನ ಬೇಸಾಯವನ್ನು 2018ರ ಫೆಬ್ರವರಿಯಲ್ಲಿ ಪ್ರಾರಂಭಿಸಿರುತ್ತಾರೆ. ಕೇವಲ ಒಂದುವರೆ ವರ್ಷಕ್ಕೆ ಅಂದರೆ 2019ರ ಜೂನ್ ತಿಂಗಳಲ್ಲಿ ಪ್ರಾರಂಭಿಕ ಇಳುವರಿ ಸುಮಾರು ಒಂದುವರೆ ಟನ್ ಮತ್ತು ಅಲ್ಲಿಂದ 2019ರ ಅಕ್ಟೋಬರ್ವರೆಗೆ ಪ್ರತಿ ಎಕರೆಗೆ 7 ಟನ್ದಂತೆ ಒಟ್ಟು 14 ಮೆ.ಟನ್ ಡ್ರ್ಯಾಗನ್ ಹಣ್ಣಿನ ಇಳುವರಿ ಪಡೆದಿದ್ದಾರೆ. ಈಗ ಬರುವ ಜೂನ್ದಿಂದ ಪುನಃ ಇಳುವರಿ ಪ್ರಾರಂಭವಾಗಲಿದ್ದು, ಎಕರೆಗೆ 10 ಟನ್ನಿನಂತೆ ಒಟ್ಟು 20 ಮೆ.ಟನ್ ಇಳುವರಿಯ ನಿರೀಕ್ಷೆ ಹೊಂದಿದ್ದಾರೆ.

ಪ್ರತಿ ಕಿಲೋಗ್ರಾಂ ಹಣ್ಣನ್ನು ಸರಾಸರಿ 100ರೂ.ದಂತೆ ಬೆಂಗಳೂರು, ಮಂಗಳೂರು, ಉಡುಪಿ, ಬಳ್ಳಾರಿ, ಹೊಸಪೇಟೆ ಮುಂತಾದ ಕಡೆಗಳಲ್ಲಿ ಸಗಟು ರೂಪದಲ್ಲಿ ಮಾರಾಟ ಮತ್ತು ಹೊಸಪೇಟೆಯಲ್ಲಿ ಕೋಳಿಮೊಟ್ಟೆ ಮಾರಾಟದ ಅಂಗಡಿಗಳ ಮೂಲಕವೂ ಡ್ರ್ಯಾಗನ್ ಹಣ್ಣಿನ ಚಿಲ್ಲರೆ ಮಾರಾಟ ವ್ಯವಸ್ಥೆ ಮಾಡಿದ್ದಾರೆ. ಈ ಹಣ್ಣಿನ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಕೊರತೆ ಇರುವುದರಿಂದ ಹಣ್ಣಿನ ಬೇಡಿಕೆ ಅಷ್ಟೊಂದು ಇಲ್ಲವಾದರೂ ನಿಧಾನವಾಗಿ ಬೇಡಿಕೆ ಹೆಚ್ಚಾಗಬಹುದು.

"ಇದರ ಬೇಸಾಯಕ್ಕಾಗಿ 10 ಲಕ್ಷ ರೂ. ವೆಚ್ಚವಾಗಿದ್ದು, ತೋಟಗಾರಿಕೆ ಇಲಾಖೆ 1ಲಕ್ಷ ರೂ. ಸಹಾಯಧನ ನೀಡಿದೆ. ಇದಲ್ಲದೆ ಹಣ್ಣಿನ ಸಾಗಾಣಿಕೆ ಮತ್ತು ಪ್ಯಾಕಿಂಗ್ ವ್ಯವಸ್ಥೆಗಾಗಿ 2.50 ಲಕ್ಷ ರೂ. ವ್ಯಯಿಸಲಾಗಿದೆ. ಮೊದಲನೇ ವರ್ಷವೇ ಇಷ್ಟೊಂದು ಪ್ರಮಾಣದ ಇಳುವರಿ ಬರಬಹುದೆಂದೂ ನಿರೀಕ್ಷಿಸಿರಲಿಲ್ಲ. ಬೇಸಾಯದಲ್ಲಿ ತೊಡಗಿಸಿರುವ ಹಣವು ಒಂದೇ ವರ್ಷದಲ್ಲಿ ಮರುಪಾವತಿಯಾದಂತಾಗಿದೆ. ಈ ಬೆಳೆಗೆ ಯಾವುದೇ ರೋಗ ಮತ್ತು ಕೀಟಬಾಧೆ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ದ್ರೋಣವಲ್ಲಿ.

ಈ ಹಣ್ಣಿನ ಬೇಸಾಯಕ್ಕಾಗಿ 2 ಎಕರೆ ಭೂಮಿಗೆ 25-35 ಟನ್ ಕೋಳಿಗಳ ತ್ಯಾಜ್ಯ ಹಾಕಿ ಭೂಮಿ ಚೆನ್ನಾಗಿ ಹದಗೊಳಿಸಿದರು. ಕೆಂಪು-ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು ಕಂಬದಿಂದ ಕಂಬಕ್ಕೆ 6 ಅಡಿ ಮತ್ತು ಸಾಲಿನಿಂದ ಸಾಲಿಗೆ 14 ಅಡಿಯಂತೆ ಒಟ್ಟು 900 ಕಂಬಕ್ಕೆ 3600 ಬಳ್ಳಿಗಳನ್ನು ಹರಡಿಸಿದ್ದಾರೆ. ಪ್ರತಿ 2-3 ತಿಂಗಳಿಗೊಮ್ಮೆ ಸುಮಾರು 10-12ಕೆ.ಜಿ.ಯಷ್ಟು ಕೋಳಿಗಳ ತ್ಯಾಜ್ಯವನ್ನು ಪ್ರತಿಯೊಂದು ಬಳ್ಳಿಗೆ ಹಾಕುತ್ತಿದ್ದಾರೆ. ಹನಿ ನೀರಾವರಿಯನ್ನೂ ಅಳವಡಿಸಿಕೊಂಡು ತೋಟಗಾರಿಕೆ ಅಧಿಕಾರಿಗಳ ಸೂಕ್ತ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಡ್ರ್ಯಾಗನ್ ಬೇಸಾಯ ಕ್ರಮಗಳನ್ನು ಅನುಸರಿಸಿದ್ದಾರೆ. 

ಒಟ್ಟು ಮೂರು ಬಣ್ಣಗಳಿಂದ ಕೂಡಿರುವ ಈ ಹಣ್ಣು ವಿಲಕ್ಷಣ ಮತ್ತು ರುಚಿಕರವಾಗಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆಯಲ್ಲದೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. ಇವರ ಮೊಬೈಲ್ ಸಂಖ್ಯೆ 9448131806.