ಗುರ್ಲಾಪೂರ 10: ಮೂಡಲಗಿಯ ಪ್ರತಿಷ್ಠಿತ ಬಸವೇಶ್ವರ ಅರ್ಬನ್ ಸೊಸೈಟಿಯು ಪ್ರಸಕ್ತ ಮಾರ್ಚ್ ಕೊನೆಯಲ್ಲಿ 5.5 ಕೋಟಿ ಲಾಭ ಹೊಂದಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ತಿಳಿಸಿದ ಅವರು, ಸಂಘವು ಮಾರ್ಚ ಅಂತ್ಯಕ್ಕೆ 6 ಕೋಟಿ 41 ಲಕ್ಷ ರೂ. ಶೇರು ಬಂಡವಾಳದೊಂದಿಗೆ, ಸಾರ್ವಜನಿಕ ವಲಯದಿಂದ 241 ಕೋಟಿ ರೂ. ಠೇವು ಸಂಗ್ರಹಿಸಿ ಸದಸ್ಯರಿಗೆ 184 ಕೋಟಿ ರೂ. ವಿವಿಧ ಸಾಲ ವಿತರಿಸಿದೆ. ಠೇವಣಿ ಭದ್ರತೆಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 71 ಕೋಟಿ ರೂ. ಠೇವಣೆ ಇಡಲಾಗಿದೆ. 282 ಕೋಟಿ ರೂ ದುಡಿಯುವ ಬಂಡವಾಳ ಹೊಂದಿ ಒಟ್ಟು 11236 ಸದಸ್ಯರನ್ನು ಹೊಂದಿದ್ದು , ಗ್ರಾಹಕರಿಗೆ ತ್ವರಿತ ಗತಿಯ ಸೇವೆ ಸಲ್ಲಿಸಲು ಗಣಕೀಕೃತ ಸೇವೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, 1995-96 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ಪ್ರಧಾನ ಕಛೇರಿ ಹಾಗೂ 15 ಶಾಖೆಗಳನ್ನು ಹೊಂದಿದೆ ಪ್ರಧಾನ ಕಛೇರಿಯು ಆಧುನಿಕ ಮಾದರಿಯ ಸುಸಜ್ಜಿತ ಕಟ್ಟಡ ಹೊಂದಿದೆ. ಎಲ್ಲಾ ಶಾಖೆಗಳು ಪ್ರಗತಿ ಪಥದತ್ತ ಸಾಗಿ ವಡೇರಹಟ್ಟಿ ಶಾಖೆಯ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಇನ್ನುಳಿದ ಶಾಖೆಗಳಿಗೆ ಶೀಘ್ರದಲ್ಲಿ ನಿವೇಶನ ಖರೀದಿಸಲಾಗುವದು ಎಂದರು.
ಉಪಾಧ್ಯಕ್ಷ ಭಾಗೋಜಿ ಮಾತನಾಡಿ,ರೈತರಿಗೆ, ವ್ಯಾಪಸ್ಥರಿಗೆ, ಕೂಲಿ-ಕಾರ್ಮಿಕರಿಗೆ ಹಾಗೂ ವಿವಿಧ ರೀತಿಯ ಜನರಿಗೆ ಸಾಲ ಸೌಲಭ್ಯ ಒದಗಿಸಿ ಗ್ರಾಮೀಣ ಜನರನ್ನು ಆರ್ಥೀಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಮಾಜದಲ್ಲಿನ ಆರ್ಥಿಕ ಅಸಮತೋಲನವನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಮತ್ತು ಸೊಸೈಟಿ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.
ನಿರ್ದೇಶಕರಾದ ಬಸವರಾಜ ತೇಲಿ, ಗೀರೀಶ ಢವಳೇಶ್ವರ, ಚನ್ನಬಸು ಬಡ್ಡಿ, ಶ್ರೀಕಾಂತ ಹಿರೇಮಠ, ಶ್ರೀಶೈಲ ಮದಗಣ್ಣವರ, ದೇವಪ್ಪ ಕೌಜಲಗಿ, ಕುಸುಮಾ ತೇಲಿ, ಸುಮಿತ್ರಾ ಶೇಡಬಾಳ, ಮಹಾದೇವಿ ಹಿರೇಮಠ, ಲಕ್ಷ್ಮಣ ತೆಳಗಡೆ, ರಾಘವೇಂದ್ರ ಕೇಸಪನಟ್ಟಿ ಉಪಸ್ಥಿತರಿದ್ದರು.