ಬೆಳಗಾವಿ 06: ಇತ್ತೀಚಿನ ಕೆಲವು ವರ್ಷಗಳ ಹಿಂದೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಭೂಮಿಯ ಮೇಲಿನ ಜೀವರಾಶಿಗಳ ಉಳಿವಿಗಾಗಿ ಅಂತರರಾಷ್ಟ್ರೀಯ ಜೀವ ವೈವಿಧ್ಯ ವರ್ಷಾಚರಣೆ ಆಚರಿಸಲು ಕರೆಕೊಟ್ಟಿತು. ಆದರೆ ಇದಕ್ಕೂ 800 ವರ್ಷಗಳ ಮೊದಲೇ ಬಸವಣ್ಣನವರು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳ ಉಳಿವಿಗಾಗಿ "ಸಕಲ ಜೀವಾತ್ಮರಿಗೆ ಲೇಸನೆ ಬಯಸು" ಎಂದು ತಿಳಿಸುತ್ತಾ ಜೀವವೈವಿಧ್ಯತೆಯ ಪ್ರಾಮುಖ್ಯತೆಯನ್ನು ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ತಿಳಿಸಿಕೊಟ್ಟರು ಎಂದು ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರಗೌಡ ಪಾಟೀಲ ಅಭಿಪ್ರಾಯಪಟ್ಟರು.
ಅವರು ಸೋಮವಾರ ಇಲ್ಲಿನ ಶಿವ ಬಸವನಗರದ ಕಾರಂಜಿ ಮಠದಲ್ಲಿ 286 ನೇ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ವೈಜ್ಞಾನಿಕ ನಿಲುವು ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಜನನ, ಮರಣ, ಜಾತಕ, ಸರ್ ಸೇರಿದಂತೆ ಇತ್ಯಾದಿ ದೋಷ ಹಾಗೂ ನವಗ್ರಹ, ಶನಿ ಮುಂತಾದ ಕಾಟಗಳನ್ನು ನಂಬಿ ಜನ ಮೋಸ ಹೋಗುವ ಬದಲು ಬಸವಣ್ಣನವರು ತಿಳಿಸಿದ ವೈಜ್ಞಾನಿಕ ತಳಹದಿಯ ಮೇಲೆ ಜೀವನ ರೂಪಿಸಿಕೊಳ್ಳಬೇಕು. ಮುಟ್ಟು ಮೈಲಿಗೆಯ ಕಾರಣದಿಂದ ಹೆಣ್ಣು ಮಕ್ಕಳಿಗೆ ಧಾರ್ಮಿಕ ಸ್ವಾತಂತ್ರ್ಯ ಇರದ ಸಂದರ್ಭದಲ್ಲಿ ಬಸವಣ್ಣನವರು ಅದೊಂದು ನೈಸರ್ಗಿಕ ಪ್ರಕ್ರಿಯೆ ಎಂದು ತಿಳಿಸುತ್ತಾ ಅವರಿಗೂ ಸಮಾನ ಅವಕಾಶವನ್ನು ನೀಡಿ ವೈಜ್ಞಾನಿಕ ಹಿನ್ನೆಲೆಯಲ್ಲಿ ಬದುಕು ರೂಪಿಸಿಕೊಳ್ಳಲು ಅವಕಾಶ ಕೊಟ್ಟರು. ಅಂತಹ ಮಹಾ ಮಾನವತಾವಾದಿಯ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಗುರುಪಾದ ಘಿವಾರಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಾನತೆಯ ಸಮಾಜ ನಿರ್ಮಿಸಲು ಪ್ರಯತ್ನಿಸಿದರೆ ಬಸವಣ್ಣನವರು ಸಮಾನತೆಯ ಜೊತೆ ಜೊತೆಗೆ ಆಧ್ಯಾತ್ಮಿಕ ತಳಹದಿಯ ಮೇಲೆ ಸಮಾಜ ಕಟ್ಟುವ ಕಾರ್ಯ ಮಾಡಿದರು ಎಂದರು.
ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಮೂಢನಂಬಿಕೆಗಳನ್ನು ತ್ಯಜಿಸಿ ಮೂಲ ನಂಬಿಕೆಗಳೊಂದಿಗೆ ಜೀವನ ರೂಪಿಸಿಕೊಳ್ಳಬೇಕು. ಮಾನಸಿಕವಾಗಿ ದುರ್ಬಲವಾಗಿರುವವರು ಮಾತ್ರ ಅಂಧಾನುಕರಣೆಯಲ್ಲಿ ಜೀವಿಸುತ್ತಾರೆ. ಶರಣ ಪರಂಪರೆಯ ವಾರಸುದಾರರು ವೈಜ್ಞಾನಿಕವಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮನೋಜ ಘೋಡಗೇರಿ, ದಾನೇಶ್ವರಿ ಪಾಟೀಲ, ಸಾಕ್ಷಿ ಘಿವಾರಿ, ಗೌತಮಿ ಹಿರೇಮಠ, ಸಾಕ್ಷಿ ನೇರಳಿ ವಿದ್ಯಾರ್ಥಿಗಳಿಗೆ ಕಾರಂಜಿ ಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಲಿಂಗರಾಜ ಕಾಲೇಜು ಪ್ರಾಧ್ಯಾಪಕ ಮಹೇಶ ಗುರಣಗೌಡರ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಏ.ಕೆ. ಪಾಟೀಲ ನಿರೂಪಿಸಿದರು. ನ್ಯಾಯವಾದಿ ವಿ. ಕೆ. ಪಾಟೀಲ ವಂದಿಸಿದರು.