ಬೆಳಗಾವಿ 08: ಜಾಗತಿಕ ಮಾನವ ಇತಿಹಾಸದಲ್ಲಿ ಸಮ ಸಮಾಜದ ನಿರ್ಮಾಣಕ್ಕಾಗಿ ಮಾನವ ಹಕ್ಕುಗಳನ್ನು ಸ್ವಯಂ ಸಿದ್ಧಗೊಳಿಸಿದ ಶ್ರೇಯಸ್ಸು ಮಹಾ ಮಾನವತಾವಾದಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾನತೆ ಸಾಮರಸ್ಯ ವ್ಯಕ್ತಿ ಸ್ವಾತಂತ್ರ್ಯದ ಅಡಿಪಾಯದ ಸಮಾಜವನ್ನು ರೂಪಿಸಿದ ಬಸವಣ್ಣನವರು 12 ನೇ ಶತಮಾನ ಕಂಡ ಅಪರೂಪದ ದಾರ್ಶನಿಕ ಎಂದು ನಾಡಿನ ಖ್ಯಾತ ವಾಗ್ಮಿಗಳಾದ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಅಧ್ಯಕ್ಷ ಪ್ರೇಮಕ್ಕ ಅಂಗಡಿ ನುಡಿದರು.
ಎ. 30ರಂದು ಬೈಲಹೊಂಗಲದ ಪತ್ರಿಬಸವ ನಗರ ಅಭಿವೃದ್ಧಿ ಸಂಘ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನ ಚಕೋರ ಸಾಹಿತ್ಯ ವಿಚಾರ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಜಂಟಿಯಾಗಿ ಬೈಲಹೊಂಗಲದ ಪತ್ರಿಬಸವ ನಗರದ ಅನುಭವ ಮಂಟಪದಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸದಲ್ಲಿ ಬಸವಣ್ಣನವರ ವಚನಗಳಲ್ಲಿ ಸಾಂವಿಧಾನಿಕ ಆಶಯಗಳು ಕುರಿತಾಗಿ ಅವರು ಮಾತನಾಡುತ್ತಿದ್ದರು.
ಆಳು ಅರಸ ಎಂಬ ವರ್ಗ ಭೇದ, ಅಂತ್ಯಜ ಕುಲಜನೆಂಬ ವರ್ಣ ಭೇದ ಸ್ತ್ರೀ ಪುರುಷರೆಂಬ ಲಿಂಗ ಭೇದವಿಲ್ಲದೆ ಇರುವ ಸಾತ್ವಿಕ ತಳಹದಿಯ ತಾತ್ವಿಕ ಸಮಾಜ ಸ್ಥಾಪಿಸಿದ ಕೀರ್ತಿ ಬಸವಣ್ಣನವರದು. ಸಕಲ ಮಾನವರು ಸ್ವಾಭಿಮಾನದಿಂದ ತಲೆ ಎತ್ತಿ ವೃತ್ತಿ ಗೌರವದಿಂದ ಸಾಮಾಜಿಕ ಮನ್ನಣೆಗಳಿಸಿ ಊರು ಕೇರಿಯ ಎಲ್ಲಾ ಸಮ ಮನಸ್ಕರು ಸಹಬಾಳ್ವೆ ನಡೆಸಬಹುದಾದ ಸಮಾಜೋರಾಜಕೀಯ ಸಿದ್ಧಾಂತದ ತಳಹದಿಯ ಬದುಕನ್ನು ರೂಹೂಗೊಳಿದವರು ಬಸವಣ್ಣನವರು. ಅಭೇದ ಸಮಾಜದಲ್ಲಿ ಮಾನವರೆಲ್ಲರೂ ಕೂಡಿ ಬಾಳುವ ಕೂಡಿ ಉಣ್ಣುವ ಸಂಸ್ಕೃತಿಯನ್ನು ಜಾರಿಗೆ ತಂದವರು ಶರಣರು. ಈ ಚಳುವಳಿಯ ನೇತಾರ ಬಸವಣ್ಣನವರು ಪ್ರಭುತ್ವದಲ್ಲಿದ್ದುಕೊಂಡು ಪ್ರಜಾಪ್ರಭುತ್ವ ಬಯಸಿದ ವಿಶ್ವ ಮಾನವ. ಭಾರತದ ಸಂವಿಧಾನಾತ್ಮಕ ಚಿಂತನೆಗಳು 12 ನೇ ಶತಮಾನದಲ್ಲಿಯೇ ಪ್ರಾಯೋಗಿಕವಾಗಿ ಸಮಾಜದಲ್ಲಿ ಆಚರಣೆಯಲ್ಲಿದ್ದುದು ನಮ್ಮ ಕಣ್ಣ ಮುಂದಿರುವ ಸತ್ಯ. ಈ ನಿಟ್ಟಿನಲ್ಲಿ ಬಸವಣ್ಣನವರು ಬಿಜ್ಜಳನ ಪ್ರಧಾನಿಯಾಗಿದ್ದರು ಕೂಡಾ ಸಾಮರಸ್ಯದ ಬದುಕಿಗೆ ಒತ್ತು ಕೊಟ್ಟು ಸಾಂವಿಧಾನಿಕ ನಿಯಮಗಳನ್ನು ತಮ್ಮ ವಚನಗಳಲ್ಲಿ ಅಭಿವ್ಯಕ್ತಿಸಿರುವುದನ್ನು ನಾವು ಅರಿತಿದ್ದೇವೆ. ಕಳಬೇಡ ಕೊಲಬೇಡ ಈ ಸಪ್ತಸೂತ್ರದ ವಚನದಲ್ಲಿರುವ ಚಿಂತನೆಗಳೆ ಇಂದಿನ ಭಾರತೀಯ ಸಂವಿಧಾನದ ಆಶಯಗಳಾಗಿರುವುದನ್ನು ಕಾಣುತ್ತೇವೆ ಎಂದು ಪ್ರೇಮಕ್ಕ ಅಂಗಡಿ ಅವರು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತ ಸಮಾನತೆಯ ಹರಿಕಾರ, ಜಾತಿ, ವರ್ಣ ವರ್ಗ ರಹಿತ ಸಮಾಜದ ನಿರ್ಮಾಪಕ ಕಾಯಕ ದಾಸೋಹ ಸಿದ್ಧಾಂತಗಳ ಜನಕ, ಅನುಭವ ಮಂಟಪ ಸ್ಥಾಪಕ, ಮಹಾಮನೆ ಜನಕ, ಜಗತ್ತಿನ ್ರ್ರಥಮ ಸಂಸತ್ತಿನ ಸಂಸ್ಥಾಪಕ, ಸ್ತ್ರೀ ಕುಲೋದ್ಧಾರಕ ಮಹಾಮಾನವತಾವಾದಿ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಜಗಜ್ಯೋತಿ ಬಸವಣ್ಣನವರು ತಮ್ಮ ವಚನಗಳಲ್ಲಿ ಭಾರತೀಯ ಪ್ರಜಾಪ್ರಭುತ್ವದ ಬುನಾದಿಯೆಂದು ಪ್ರಸಿದ್ಧಿ ಹೊಂದಿದ ಭಾರತೀಯ ಸಂವಿಧಾನದ ಅನೇಕ ಕಲಂಗಳನ್ನು ತಮ್ಮ ವಚನಗಳಲ್ಲಿ ನಿರೂಪಣೆ ಮಾಡಿದ್ದನ್ನು ಸ್ಮರಿಸಬಹುದು ಎಂದರು.
ಕಸಾಪ ಬೈಲಹೊಂಗಲ ತಾಲೂಕಾಧ್ಯಕ್ಷರು ಹಾಗೂ ಶಿಕ್ಷಕ ಠಕ್ಕಾಯಿಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತ ಜಗತ್ತಿನಲ್ಲಿ ಅತ್ಯಂತ ಬೃಹತ್ತಾದ ಸಂವಿಧಾನ ನಮ್ಮ ದೇಶದ್ದು ಎಂಬ ಹೆಮ್ಮೆಯಿದೆ. ಜಗತ್ತಿನ ಹಲವಾರು ದೇಶಗಳ ಸಂವಿಧಾನಗಳನ್ನು ಅಭ್ಯಸಿಸಿ ಕೂಲಂಕಷವಾಗಿ ಪರೀಶೀಲನೆ ಮಾಡಿದ ನಂತರವಷ್ಟೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನ ರಚನಾ ಸಮಿತಿಯ ಒಮ್ಮತದ ನಿರ್ಣಯಗಳೆ ಭಾರತದ ಸಂವಿಧಾನವನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದು ಈ ಶತಮಾನದ ತಿಳುವಳಿಕೆಯಾದರೆ 12 ನೇ ಶತಮಾನದಲ್ಲಿಯೇ ಮಾನವ ಪರಿಸರವು ಪ್ರಕೃತಿ ದತ್ತವಾದ ನಿಮಯಗಳಂತೆ ಜೀವಿಸುವ ಹಕ್ಕನ್ನು ಹಾಗೆಯೇ ಸಕಲ ಜೀವಾತ್ಮರುಗಳು ದಯೆಯನ್ನು ಧರ್ಮವನ್ನಾಗಿಸಿಕೊಂಡು ಬದುಕಬಹುದಾದ ಸಾಮಾಜಿಕ ಪರಿಸರವನ್ನು ನಿರ್ಮಿಸಿದ್ದು ಬಸವ ಚಳುವಳಿಯ ಹೆಗ್ಗಳಿಕೆ. ಪ್ರಜಾಸತ್ತಾತ್ಮಕ ಅಂಶಗಳನ್ನು ಒಳಗೊಂಡ ಬಸವಣ್ಣನವರ ವಚನಗಳು ಇಂದಿಗೂ ಮಾದರಿಯಾಗಿವೆ. ಬಸವಣ್ಣನವರು ಅಂದು ಕೈಗೊಂಡ ಸಮಾಜೋಧಾರ್ಮಿಕ ಕಾಂತ್ರಿಯ ಫಲವೇ 8 ಶತಮಾನಗಳ ನಂತರದಲ್ಲಿಯೂ ಅನುಕರಣೀಯವಾಗಿರುವುದು ಬಸವಾದಿ ಶರಣರ ಹೋರಾಟದ ಫಲವಾಗಿದೆ ಎಂದು ನುಡಿದರು.
ಪತ್ರಿಬಸವ ನಗರ ಅಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಸುವರ್ಣ ಬಿಜಗುಪ್ಪಿ, ದುಂಡಯ್ಯ ಕುಲಕರ್ಣಿ, ಗಂಗಣ್ಣ ಅಂಗಡಿ, ಸದಾನಂದ ಹನುಮಸೇಠ, ಗೋಕಾಕ ಕದಳಿ ವೇದಿಕೆಯ ಅಧ್ಯಕ್ಷ ಜಯಶ್ರೀ ಚುನಮರಿ, ಬೈಲಹೊಂಗಲ ಶಿಕ್ಷಕಿಯರಾದ ಅನಪೂರ್ಣ ಕನೌಜ, ಗೌರಿ ಕರ್ಕಿ, ರಾಜೇಶ್ವರಿ ದ್ಯಾಮನಗೌಡರ, ದಾಕ್ಷಾಯಿಣಿ ಹುಬ್ಬಳ್ಳಿ, ಗೀತಾ ಮುದಕನಗೌಡರ, ಬೈಲಹೊಂಗಲ ನಗರದ ಅಜಗಣ್ಣ ಮುಕ್ತಾಯಕ್ಕ ಬಳಗದ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.