ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ

ಹಾನಗಲ್ 09:  ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ ಮಂಜೂರಾಗಿರುವ ಪ್ರಕಣಗಳನ್ನು ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳದೇ ತಕ್ಷಣವೇ ಹಕ್ಕುಪತ್ರ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ತಹಶೀಲ್ದಾರ್ ರೇಣುಕಾ ಎಸ್‌. ಅವರಿಗೆ ಸೂಚನೆ ನೀಡಿದರು. 

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಗುವಳಿ ಸಕ್ರಮೀಕರಣ ಪ್ರಕರಣಗಳು ಬಾಕಿ ಉಳಿದಿರುವುದರಿಂದ ಸಾಗುವಳಿದಾರ ರೈತರು ತೊಂದರೆ ಅನುಭವಿಸುವಂತಾಗಿದೆ. ಮಂಜೂರಾಗಿರುವ ಪ್ರಕರಣಗಳನ್ನು ಮತ್ತೆ ಬಾಕಿ ಉಳಿಸಿಕೊಳ್ಳದೇ ತಕ್ಷಣವೇ ಮುಂದಿನ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಿ ಎಂದರು. 

ತಾಲೂಕಿನಲ್ಲಿ 1409 ಪ್ರಕರಣಗಳನ್ನು ಜಿಲ್ಲಾಧಿಕಾರಿಗಳು ಮಂಜೂರಿ ಮಾಡಿದ್ದು, ಅರ್ಜಿಗಳನ್ನು ವಿಗಂಡನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು. ನಮೂನೆ 53 ರಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಮುಂದಿನ ಸಭೆಯಲ್ಲಿ ಇತ್ಯರ್ಥ ಪಡಿಸಲು ಸಭೆಯಲ್ಲಿ ಶಾಸಕ ಮಾನೆ ಸೂಚಿಸಿದರು. 

ನಮೂನೆ 50 ರಲ್ಲಿ ಸ್ವೀಕರಿಸಲಾದ ಯಾವುದೇ ಅರ್ಜಿಗಳೂ ಸಹ ಬಾಕಿ ಇಲ್ಲ ಎಂದು ತಹಶೀಲ್ದಾರ್ ರೇಣುಕಾ ಎಸ್‌. ತಿಳಿಸಿದರು. ಸಮಿತಿಯ ಸದಸ್ಯರಾದ ಜಗದೀಶ ತಿಳವಳ್ಳಿ, ಮಂಗಳಾ ಬೆಣ್ಣಿ, ಶಿರಸ್ತೆದಾರ ಟಿ.ಕೆ.ಕಾಂಬ್ಳೆ ಸಭೆಯಲ್ಲಿ ಪಾಲ್ಗೊಂಡಿದ್ದರು.