ಫೆ.23ರಿಂದ ಬಡಕುಂದ್ರಿ ಶ್ರೀ ಹೊಳೆಮ್ಮಾದೇವಿ ಜಾತ್ರಾ ಮಹೋತ್ಸವ.

ಬಡಕುಂದ್ರಿ 20: ಹುಕ್ಕೇರಿ ತಾಲೂಕಿನ ಕರ್ನಾಟಕ ಮತ್ತು ಮಹಾರಾಷ್ಟ್ರ ಭಕ್ತರ ಪ್ರಸಿದ್ಧ ಪುಣ್ಯಕ್ಷೇತ್ರ ಹುಕ್ಕೇರಿ ತಾಲೂಕು ಬಡಕುಂದ್ರಿ ಗ್ರಾಮದ ಶಕ್ತಿದೇವತೆ ಶ್ರೀ ಹೊಳೆಮ್ಮಾ(ಲಕ್ಷ್ಮೀ)ದೇವಿ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಭಾರತ ಹುಣ್ಣಿಮೆ ಅಂಗವಾಗಿ ಶುಕ್ರವಾರ ಫೆ.23ರಿಂದ ಮಂಗಳವಾರ ಮಾ.05ರವರೆಗೆ 12ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗಲಿದೆ.  

ಜಾತ್ರೆಯ ನಿಮಿತ್ತ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಹೊಳೆಮ್ಮಾದೇವಿ ಟ್ರಸ್ಟ್‌ ಕಮೀಟಿಯವರು ಪ್ರಕಟಣೆಗೆ ತಿಳಿಸಿದ್ದಾರೆ. 

ಭಕ್ತರ ಚೈತನ್ಯಶಕ್ತಿ ಬಡಕುಂದ್ರಿ ಹೊಳೆಮ್ಮಾದೇವಿ.  

- ಎಂ.ಎ.ಗುಂಡಕಲ್ಲಿ (ಬಡಕುಂದ್ರಿ) 

ದಕ್ಷಿಣ ಭಾರತದ ಬಾಗಿಲು ಇಲ್ಲದ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ ಹೊಳೆಮ್ಮಾದೇವಿ ದೇವಸ್ಥಾನವು ಕರ್ನಾಟಕ, ಮಹಾರಾಷ್ಟ್ರ ಭಕ್ತರ ಪ್ರಸಿದ್ಧ ಪುಣ್ಯಕ್ಷೇತ್ರ, ಭಕ್ತಿ, ಶ್ರದ್ಧೆಯಿಂದ ದೇವಿಯ ಸನ್ನಿದಿಗೆ ಬರುವ ಭಕ್ತರ ಇಷ್ಠಾರ್ಥ ಪೂರೈಸುವ ಕಾಮಧೇನು. ಹಿರಣ್ಯಕೇಶಿ ನದಿ ದಡದ ಹುಣಸೆ ಬಣದಲ್ಲಿ ಭಕ್ತರ ಚೈತನ್ಯ ಚಿಲುಮೆಯಾಗಿ ನೆಲೆನಿಂತಿರುವ ಹುಕ್ಕೇರಿ ತಾಲೂಕು ಬಡಕುಂದ್ರಿ ಗ್ರಾಮದ ಶಕ್ತಿದೇವತೆ ಶ್ರೀ ಹೊಳೆಮ್ಮಾದೇವಿಯ ಜಾತ್ರಾ ಮಹೋತ್ಸವವು ಪ್ರತಿವರ್ಷ ಭಾರತ ಹುಣ್ಣಿಮೆಯಲ್ಲಿ ವೈಭವದಿಂದ ಜರುಗುತ್ತದೆ.  

ದೇವಿಯ ಹಿನ್ನೆಲೆ:  

ಹಿರಣ್ಯಕೇಶಿ ನದಿಯಲ್ಲಿ ಜನರು ಸ್ನಾನ ಮಾಡುವಾಗ ಅವರಿಗೆ ನೀರಿನಲ್ಲಿ ಹರಿದು ಬಂದ ಮೂರ್ತಿಯೊಂದು ಗೋಚರಿಸಿತು, ಆ ಮೂರ್ತಿ ಕಂಡು ಬೆರಗಾದ ಅವರು, ಭಕ್ತಿ ಭಾವದಿಂದ ‘ಹೊಳೆಗಂಗಮ್ಮಾ’ ಎಂದು ನಾಮಕರಣ ಮಾಡಿ ಬಣ್ಣಿಮರದ ನೆರಳಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಇಂದು ಭಕ್ತರ ಮಾತಲ್ಲಿ ಹೊಳೆಮ್ಮಾ ಎಂದೇ ಪ್ರಸಿದ್ಧಿ ಪಡೆದಿದ್ದಾಳೆ.   

ಶ್ರೀದೇವಿಯ ಸನ್ನಿದಾನಕ್ಕೆ ಬರುವ ಭಕ್ತರು ಭಕ್ತಿ, ಶ್ರದ್ಧೆಯಿಂದ ಹೂ, ಭಂಡಾರ ಹಾರಿಸಿ, ಕಾಯಿ, ಕರ​‍್ೂಕ ಮಾಡಿ ತಮ್ಮ ಇಷ್ಠಾರ್ಥ ಸಿದ್ದಿಗಾಗಿ ಪೂಜೆ ಸಲ್ಲಿಸುವರು, ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಹರಿಕೆ ತಿರಿಸಲು ಮಡಿಸ್ನಾನ ಮಾಡಿ ದೀಡ ನಮಸ್ಕಾರ ಹಾಕಿ, ಮುತ್ತೈದೆಯರ ಉಡಿ ತುಂಬಿ, ಶ್ರೀದೇವಿಗೆ ನೈವೇದ್ಯೆ ಅರ​‍್ಿಸುವರು.  

ಸಜ್ಜುಗೊಂಡ ಗ್ರಾಮ: 

ಬಡಕುಂದ್ರಿ ಸೇರಿದಂತೆ ಸುತ್ತಲಿನ ಹಳ್ಳಿಗಳು ಜಾತ್ರೆಗೆ ವಿಶೇಷವಾಗಿ ಸಜ್ಜುಗೊಂಡಿದ್ದು, ಮನೆಗಳನ್ನು ಶುಚಿಗೊಳಿಸಿ, ಸುಣ್ಣ-ಬಣ್ಣ ಹಚ್ಚಿ ಸಿಂಗರಿಸಲಾಗಿದೆ. ಬೀಗರು-ಬಿಜ್ಜರು, ದೂರದ ಊರಿನ ನೆಂಟರು, ಅಕ್ಕ-ತಂಗಿಯರನ್ನು, ಆಪ್ತಸ್ನೇಹಿತರಿಗೆ ಜಾತ್ರೆಗೆ ಬರುವಂತೆ ಆಹ್ವಾನ ನೀಡಲಾಗಿದೆ. 

ದೇವಿಯ ಮಹಿಮೆ:  

ಶಿಕ್ಷಣ, ರಾಜಕೀಯ, ಉದ್ಯೋಗ, ವ್ಯಾಪಾರ, ಮದುವೆ-ಮುಂಜಿ ಹಾಗೂ ಮಹತ್ವದ ಕಾರ್ಯಗಳಿಗೆ ಇಲ್ಲಿಯ ಭಕ್ತರು ದೇವಿಗೆ ಕವಲು ಹಚ್ಚಿ ವರ ಬೇಡುವ ಸಂಪ್ರದಾಯವಿದೆ. ಚರ್ಮರೋಗ ಹಾಗೂ ಕಣ್ಣಿನಲ್ಲಿ ಹೂ ಬಿದ್ದರೆ, ದೇವಿಯ ಮೇಲೆ ಹೂ ಬಂಢಾರ ಹಾರಿಸುವದು ಮತ್ತು ಸಂತಾನ ಪ್ರಾಪ್ತಿಗಾಗಿ ದೇವಿಯ ಸನ್ನಿದಾನದಲ್ಲಿ ತೊಟ್ಟಿಲು ಪೂಜೆ ಮಾಡುವ ವಾಡಿಕೆಯಿದೆ.  

ಮಹಾರಾಷ್ಟ್ರದ ಮಹಿಳೆಯೊಬ್ಬರ ಕೈ-ಕಾಲುಗಳಿಗೆ ವಿಪರೀತ ಹುಣ್ಣುಗಳಾಗಿ ನೋವಿನಿಂದ ಸಂಕಟ ಪಡುತ್ತಿದ್ದಾಗ. ಅವರಿಗೆ ದೇವಿಯ ಮಹಿಮೆ ಗೊತ್ತಾಗಿ ನಿರಂತರ 5 ಶುಕ್ರವಾರ ಮತ್ತು ಮಂಗಳವಾರ ಉಪ್ಪುಹಚ್ಚಿ ನದಿ ನೀರಿನಲ್ಲಿ ಸ್ನಾನ ಮಾಡಿ ಭಕ್ತಿಯಿಂದ ದೇವಿಯ ದರ್ಶನ ಪಡೆದರು. ನಂತರ ಕೆಲದಿನಗಳಲ್ಲಿ ಅವರ ಹುಣ್ಣುಗಳೆಲ್ಲ ಮಾಯವಾಗಿ ಕೈ-ಕಾಲುಗಳು ಮೊದಲಿನಂತಾದವು ಎಂದು ಆ ಮಹಿಳೆ ಹೇಳುತ್ತಾರೆ. ಚಕ್ಕಡಿ ಗಾಡಿಯಲ್ಲಿ ಕುಟುಂಬ ಸಮೇತರಾಗಿ ಜಾತ್ರೆಗೆ ಬರುವ ಭಕ್ತರು ಒಂದು ದಿನ ವಾಸ್ತವ್ಯ ಮಾಡಿ ದೇವಿಯ ದರ್ಶನ ಭಾಗ್ಯ ಪಡೆಯುತ್ತಾರೆ. ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಸಹಸ್ರಾರು ಹಿಂದೂ, ಜೈನ, ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಜಾತ್ರೆಯಲ್ಲಿ ಪಾಲ್ಗೂಳ್ಳುತ್ತಾರೆ.  

ಶಸ್ತ್ರ ಚುಚ್ಚುವದು:  

ಹಬ್ಬ ಹರಿದಿನಗಳಂದು ಹಾಗೂ ಜಾತ್ರೆಯ ಸಂದರ್ಭದಲ್ಲಿ ವಾಧ್ಯಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿದ ನಂತರ ದೇವಿಯ ಸಮ್ಮುಖದಲ್ಲಿ ಭಕ್ತನೊರ್ವನಿಗೆ ಗಲ್ಲ ಹಾಗೂ ನಾಲಿಗೆಗೆ ಶಸ್ತ್ರ ಚುಚ್ಚುವದು ತಲತಲಾಂತದಿಂದ ನಡೆದು ಬಂದ ಸಂಪ್ರದಾಯ.  

ಭವ್ಯ ಮಂದಿರ :  

ಹಿರಣ್ಯಕೇಶಿ ನದಿ ದಡದ ಹುಣಸೆ ಬಣದ ಮಧ್ಯೆ ಕಂಗೊಳಿಸುವ ದೇವಿಯ ಮೂಲಮಂದಿರವನ್ನು ಸುಮಾರು 500 ವರ್ಷಗಳ ಹಿಂದೆ ವಂಟಮೂರಿ ದೇಸಾಯಿಯ ವಂಶಸ್ಥರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಗುಡಿಯ ಮುಂಭಾಗದಲ್ಲಿ ಅಷ್ಟಕೋನಾಕೃತಿಯ ದೀಪಸ್ತಂಭ, ಹಾಗೂ ಮಹಾಮಂಟಪ ದೇವಸ್ಥಾನದ ಪ್ರಮುಖ ಆಕರ್ಷನೆಗಳು, ನದಿ ಬಲದಂಡೆಯ ಪ್ರಶಾಂತವಾದ ಹುಣಸೆ ಬನದ ಪರಿಸರದಲ್ಲಿ ಬೆಳಿಗ್ಗೆ ಮತ್ತು ಸಂಜೆ ಪೂಜೆಯ ವೇಳೆ ಹಕ್ಕಿಗಳ ಚಿಲಿಪಿಲಿ ನಿನಾದ ಮನಸ್ಸಿಗೆ ಮುದ ನೀಡುತ್ತದೆ. 

ಭವ್ಯ ಮಂದಿರದ ಮುಂಭಾಗದಲ್ಲಿದಲ್ಲಿರುವ ಮಹಾದ್ವಾರದ ಮೇಲೆ ಸುಮಾರು 25.ಲಕ್ಷ ರೂ ವೆಚ್ಚದಲ್ಲಿ ರಾಜಗೋಪುರ ಕಟ್ಟಡ ನಿರ್ಮಿಸಿ ಕಳಶಾರೋಹನ ಮಾಡಲಾಗಿದೆ.  

ದೇಗುಲದ ಆವರಣದಲ್ಲಿ ವ್ಯಾಪಾರ ಮಳಿಗೆ, ಕುಡಿಯುವ ನೀರಿನ ಟ್ಯಾಂಕ, ಯಾತ್ರಿ ನಿವಾಸ ಸೇರಿದಂತೆ ಅನೇಕ ಜೀಣೋದ್ಧಾರ ಕಾಮಗಾರಿಗಳು ಸುಮಾರು 1.ಕೋಟಿ ರೂ ವೆಚ್ಚದಲ್ಲಿ ಭರದಿಂದ ಸಾಗಿವೆ. ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರಿಗೆ ಪ್ರತಿ ಅಮವಾಸ್ಯೆಯಂದು ‘ಅನ್ನದಾಸೋಹ’ ನಡೆಯುತ್ತದೆ. ಪರಸ್ಥಳದಿಂದ ಜಾತ್ರೆಗೆ ಬರುವ ಭಕ್ತರಿಗೆ ವಾಹನ ಸೌಕರ್ಯ, ಆರೋಗ್ಯ ಸೌಕರ್ಯ, ಕುಡಿಯುವ ನೀರು, ವಸತಿ ಸೇರಿದಂತೆ ಸಕಲ ಸೌಲಭ್ಯ ನೀಡುವಲ್ಲಿ ಗ್ರಾಮಸ್ಥರು ಹಾಗೂ ಟ್ರಸ್ಟ ಕಮೀಟಿಯವರು ಶ್ರಮಿಸುತ್ತಿದ್ದಾರೆ.  

ಹುಕ್ಕೇರಿ ತಾಲೂಕಿನ ಬಡಕುಂದ್ರಿ ಶ್ರೀ ಹೊಳೆಮ್ಮಾದೇವಿ ದೇವಸ್ಥಾನವೂ ಬೆಳಗಾವಿಯಿಂದ 45 ಕಿ.ಮೀ, ಹುಕ್ಕೇರಿಯಿಂದ ನೈರುತ್ಯ ಭಾಗಕ್ಕೆ 6 ಕಿ.ಮೀ ಅಂತರದ ಹಿರಣ್ಯಕೇಶಿ ನದಿ ದಡದಲ್ಲಿದೆ. 

ಸದ್ಭಕ್ತರು ಜಾತ್ರೆಗೆ ಆಗಮಿಸಿ ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಶ್ರೀ ಹೊಳೆಮ್ಮಾದೇವಿ ಟ್ರಸ್ಟ್‌ ಕಮೀಟಿಯವರು ಪ್ರಕಟನೆಗೆ ತಿಳಿಸಿದ್ದಾರೆ.