ಜಾನುವಾರು ವಿಮೆ ಕುರಿತು ರೈತ ಸಮೂಹದಲ್ಲಿ ಜಾಗೃತಿ ಮೂಡಿಸಬೇಕು: ಶಾಸಕ ಮಾನೆ

ಹಾನಗಲ್: ರೈತ ಸಮೂಹ ಜಾನುವಾರುಗಳನ್ನು ಕಡ್ಡಾಯವಾಗಿ ವಿಮಾ ವ್ಯಾಪ್ತಿಗೆ ಒಳಪಡಿಸುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕಿದೆ. ಜಾನುವಾರು ವಿಮೆ ಕುರಿತು ರೈತ ಸಮೂಹದಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

 ಪಶು ಆಸ್ಪತ್ರೆಯ ಆವರಣದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 50 ಜನ ಫಲಾನುಭವಿಗಳಿಗೆ ಶೇ. 50 ರಷ್ಟು ಸಹಾಯಧನದಲ್ಲಿ 33 ಸಾವಿರ ರೂ. ಮೌಲ್ಯದ ಮೇವು ಕತ್ತರಿಸುವ ಯಂತ್ರ ಹಾಗೂ 5600 ರೂ. ಮೌಲ್ಯದ ತಲಾ ಎರಡು ಕೊಟ್ಟಿಗೆಯ ರಬ್ಬರ್ ಮ್ಯಾಟ್ ವಿತರಿಸಿ ಅವರು ಮಾತನಾಡಿದರು. ಜಾನುವಾರು ವಿಮೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ ವರ್ಷ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿ ರೈತರ ಪಾಲಿನ ವಿಮಾ ಕಂತನ್ನು ಸ್ವತಃ ತಾವೇ ಭರಿಸಿದ್ದು, ಅನೇಕ ರೈತರಿಗೆ ಇದರಿಂದ ಪ್ರಯೋಜನವಾಗಿತ್ತು ಎಂದು ಹೇಳಿದ ಅವರು ಹೆಚ್ಚು ಹೆಚ್ಚು ಹಾಲು ಉತ್ಪಾದನೆಯ ಮೂಲಕ ರೈತರು ಆರ್ಥಿಕ ಸಬಲತೆ ಸಾಧಿಸುವಂತೆ ಕಿವಿಮಾತು ಹೇಳಿದರು.

  ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗಿರೀಶ ರೆಡ್ಡೇರ ಮಾತನಾಡಿ, ತಾಲೂಕಿನಲ್ಲಿ ಮೇವು ಕಟಾವು ಯಂತ್ರ ಮತ್ತು ಕೊಟ್ಟಿಗೆಯ ರಬ್ಬರ್ ಮ್ಯಾಟ್ಗೆ ರೈತರಿಂದ ಸಾಕಷ್ಟು ಬೇಡಿಕೆ ಬರುತ್ತಿದೆ. 2 ಎಚ್ಪಿ ಸಾಮಥ್ರ್ಯದ 50 ಯಂತ್ರಗಳನ್ನು ಸದ್ಯ ವಿತರಿಸಲಾಗಿದ್ದು, ಮತ್ತಷ್ಟು ಯಂತ್ರ ಮತ್ತು ಮ್ಯಾಟ್ಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

  ತಹಶೀಲ್ದಾರ್ ರವಿಕುಮಾರ ಕೊರವರ, ಪುರಸಭೆ ಮಾಜಿ ಉಪಾಧ್ಯಕ್ಷೆ ಶಂಶಿಯಾ ಬಾಳೂರ, ಸದಸ್ಯೆ ಮಮತಾ ಆರೆಗೊಪ್ಪ, ಪಶು ವೈದ್ಯರಾದ ಡಾ.ಮಂಜುನಾಥ ಗಂಗಿಮಾಳಮ್ಮನವರ, ಬಿ.ಬಿ.ಭಾವಿಕಟ್ಟಿ, ಸಿ.ಎ.ಪಾಟೀಲ, ಭೀಮಣ್ಣ ಲಮಾಣಿ, ಸಿದ್ದಪ್ಪ ಹಂಚಿನಮನಿ, ಅನೂಪ್ ಸಿದ್ದುನವರ, ಶಿವಾಜಿ ಬಡಿಗೇರ, ಮಲ್ಲಿಕಾರ್ಜುನ ಶಿರಮಾಪೂರ, ಗಣೇಶ ಕರಾಟೆ, ಸುನೀಲ ಲಕ್ಕಪ್ಪನವರ, ನಾಗೇಶ ಬಣಕಾರ, ಸಂಜೀವ ರಾಯಚೂರ, ಲಕ್ಷ್ಮಣಪ್ಪ ಕುರುಬರ, ರಘುನಾಥ ಗಾಯಕವಾಡ, ಸಹದೇವ ನಾರ್ವೇಕರ, ರಫೀಕ್ ಉಪ್ಪಣಸಿ, ಮಂಜಪ್ಪ ಕುರುಡಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.