ಶೇಡಬಾಳ ಗ್ರಾಮದೇವರು ಬಸವಣ್ಣ ದೇವಾಲಯದ ಕಳಸಾರೋಹಣ

ಲೋಕದರ್ಶನ ವರದಿ

ಶೇಡಬಾಳ  22: ಶೇಡಬಾಳ ಪಟ್ಟಣದ ಗ್ರಾಮ ದೇವರು ಬಸವಣ್ಣ ದೇವಾಲಯದ ಕಳಸಾರೋಹಣ ಕಾರ್ಯಕ್ರಮವು ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ದಿ. 21 ಶ್ರಾವಣ ಮಾಸದ ಮೊದಲನೇ ಸೋಮವಾರ ಶ್ರದ್ಧಾ, ಭಕ್ತಿಯಿಂದ ಜರುಗಿತು.

ಮೈಶಾಳದ ಸುಕ್ಷೇತ್ರ ಮಹಾಸಂಸ್ಥಾನ ಹಿರೇಮಠದ ಡಾ. ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಜಿಯವರ ಸಾನಿಧ್ಯದಲ್ಲಿ ರವಿವಾರ ದಿ. 20ರಂದು ಗ್ರಾಮದಲ್ಲಿ ಕಳಸದ ಭವ್ಯ ಮೆರವಣಿಗೆ ಮಾಡಲಾಯಿತು. 

ಇಲ್ಲಿಯ ಮಾಳಿ ಸಮುದಾಯ ಭವನದಿಂದ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ಬಂದು ಮೆರವಣಿಗೆ ಮುಕ್ತಾಯಗೊಂಡಿತು. ಶ್ರಾವಣ ಮಾಸದ ಮೊದಲ ಸೋಮವಾರ ಕಳಾಸರೋಹಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಂಗವಾಗಿ ಮುಂಜಾನೆ 8 ಗಂಟೆಯಿಂದಲೇ ಪೂಜಾಭಿಷೇಕ, ರುದ್ರಾಭಿಷೇಕ, ಹೋಮ ಹವನ, ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 11 ಗಂಟೆಗೆ ನೆರೆದ ಸಹಸ್ರಾರು ಭಕ್ತರ ಹರ ಹರ ಮಹಾದೇವ ಜೈಘೋಷಗಳ ನಡುವೆ ಕಳಸಾರೋಹಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಮಹಾಪ್ರಸಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಳಸಾರೋಹಣ ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ, ಯುವ ಮುಖಂಡ ಶ್ರೀನಿವಾಸ ಪಾಟೀಲ ಭಾಗವಹಿಸಿ ದೇವರ ದರ್ಶನ ಪಡೆದುಕೊಂಡರು. 

ಬಸವೇಶ್ವರ ದೇವಾಲಯದ ವತಿಯಿಂದ ಶ್ರೀಮಂತ ಪಾಟೀಲ ಹಾಗೂ ಶ್ರೀನಿವಾಸ ಪಾಟೀಲ ಅವರನ್ನು ಸತ್ಕರಿಸಿ ಸನ್ಮಾನಿಸಲಾಯಿತು. 

ಅಶೋಕ ಪಾಟೀಲ, ಅತಿಕ್ರಾಂತ ಪಾಟೀಲ, ಸುನೀಲ ಪಾಟೀಲ, ವರ್ಧಮಾನ ಪಾಟೀಲ, ಅಶ್ವತ್ಥ ಪಾಟೀಲ, ವಿನೋದ ಪಾಟೀಲ, ಅಶೋಕ ವಿಭೂತೆ, ಮಹಾದೇವ ಚಿಂಚಲೆ, ರೋಹಿದಾಸ ಮುಜಾವರ, ಅರುಣ ಶಿರದವಾಡೆ, ಪೂಜಾರಿ ಕುಮಾರ ಗುರವ, ಪ್ರಕಾಶ ಪಾಟೀಲ, ಬಸು ನಾನಿಕರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.