ಲಿಕ್ಕರ್ ಹಗರಣಕ್ಕೆ ಸಂಬಂದಿಸಿದಂತೆ ಕೇಜ್ರಿವಾಲ್ ಬಂಧನ: ಕುಮ್ಮಕ್ಕು ನೀಡಿದ ಬಿಜೆಪಿ

ಮುಂಡರಗಿ 10: ದೇಶದಲ್ಲಿ ಸರ್ವಾಧಿಕಾರಿ ಆಡಳಿತದಿಂದಾಗಿ ಲಿಕ್ಕರ್ ಹಗರಣಕ್ಕೆ ಸಂಬಂದಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ಬಂಧನ ಮಾಡಲು ಕುಮ್ಮಕ್ಕು ನೀಡಿದ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸುತ್ತೇವೆ ಎಂದು ಎಎಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ ಆಗ್ರಹಿಸಿದರು. 

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡುತ್ತಾ ದೇಶದಲ್ಲೆಲ್ಲ ಪ್ರಭಾವಶಾಲಿಯಾಗುತ್ತಿರುವ ಕೇಜ್ರಿವಾಲರಿಂದ ನಮ್ಮ ಪಕ್ಷದ ಸಂಘಟನೆಗೆ ಹಿನ್ನೆಡೆಯಾಗುತ್ತದೆ ಎಂಬ ಭಯದಿಂದ, ಅವರ ಮೇಲೆ ಈಡಿ ದಾಳಿ ನಡೆಸಿ ಅವರನ್ನು ಚನಾವಣಾ ಪ್ರಚಾರದಿಂದ ದೂರಸರಿಸಬೇಕೆಂದು ನರೇಂದ್ರ ಮೋದಿ ಸರ್ಕಾರ ದಾಳಹಾಕಿದೆ ಎಂದು ಕಂಡುಬರುತ್ತದೆ. ಸುಮಾರು 5 ರಾಜ್ಯದಲ್ಲಿ ಎಎಪಿ ಪಕ್ಷದ ಪ್ರಬಾಲ್ಯವಿದೆ. ಈ ಪೈಕಿ ದೇಹಲಿಯಲ್ಲಿ ಕೇಜ್ರಿವಾಲರ ಪ್ರಭಾವಿತನ ಹೆಚ್ಚಾಗಿರುವುದರಿಂದ ಆ ಕ್ಷೇತ್ರದಲ್ಲಿ ಕೇಜ್ರಿವಾಲರನ್ನು ಹಿಮ್ಮೆಟ್ಟಬೇಕೆನ್ನುವ ಹುನ್ನಾರು ನಡೆಸಿದ್ದಾರೆ. ಈ ರೀತಿ ಒತ್ತಡದ ರಾಜಕಾರಣವನ್ನು ಮೋದಿ ಸರ್ಕಾರದಲ್ಲಿ ನಡೆಯುತ್ತಿದೆ. 

ಈ ಮೂಲಕ ಅರವಿಂದ ಕೇಜ್ರಿವಾಲರು ಚುನಾವಣಾ ಕಣದಲ್ಲಿ ಇರಬಾರದು, ಅವರನ್ನು ಲೋಕಸಭಾ ಚುನಾವಣೆ ಚಟುವಟಿಕೆಯಲ್ಲಿ ಇರಬಾರದೆಂಬ ದುರುದ್ದೇಶದಿಂದ ಅವರ ಮೇಲೆ ಕೆಟ್ಟ ತಂತ್ರವನ್ನು ಹೆಣೆಯುತ್ತಿದ್ದಾರೆ. ಹೀಗೇ ಪ್ರಾಮಾಣಿಕ ನಾಯಕರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಾ ಹೋದರೇ ದೇಶದ ಬೆಳವಣಿಗೆಯಾಗಲು ಹೇಗೆ ಸಾಧ್ಯವಾಗುತ್ತದೆ. ಇಂತಹ ಸರ್ಕಾರದಿಂದ ದೇಶದ ಪ್ರಜಾಪ್ರಭುತ್ವದ ಸಿದ್ದಾಂತವು ಹಾಳಾಗಿ ಹೋಗುತ್ತದೆ. 

ಹೀಗಾಗಿ ಅತ್ಯಂತ ಕುತಂತ್ರದಿಂದ ಬಂಧನಕ್ಕೆ ಒಳಗಾದ ಕೇಜ್ರಿವಾರನ್ನು ನ್ಯಾಯಾಂಗವು ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರೀಶೀಲಿಸಿ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು. ಒಂದು ವೇಳೆ ಬಿಡುಗಡೆ ಮಾಡದೇ ಹೋದರೆ ಎಎಪಿ ಪಕ್ಷದ ಎಲ್ಲರೂ ನಿರಂತರವಾಗಿ ಹೋರಾಟವನ್ನು ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಎಎಪಿ ಕಾರ್ಯಕರ್ತ ಸುಭಾಷ ಕುಂಬಾರ ಇದ್ದರು.