ಇನ್ನೆರಡು ದಿನದಲ್ಲಿ ಅಭ್ಯರ್ಥಿ ಬದಲಿಸದಿದ್ದಲ್ಲಿ ಸೂಕ್ತ ನಿರ್ಧಾರ : ಶಾಸಕ ಮಹಾದೇವಪ್ಪ ಯಾದವಾಡ ಘೋಷಣೆ

ಲೋಕದರ್ಶನ ವರದಿ 

ರಾಮದುರ್ಗ 13: ಕಾಂಗ್ರೆಸ್ ಪಕ್ಷದಲ್ಲಿದ್ದು ಈಗೀಗ ಬಿಜೆಪಿಗೆ ಬಂದ ವ್ಯಕ್ತಿಗೆ ನಮ್ಮ ವರಿಷ್ಠರು ಟಿಕೆಟ್ ನೀಡಿರುವುದಕ್ಕೆ ನೋವಾಗಿದ್ದು, ಇನ್ನೆರಡು ದಿನದಲ್ಲಿ ಅಭ್ಯರ್ಥಿ ಬದಲಿಸದಿದ್ದಲ್ಲಿ ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಘೋಷಿಸಿದರು. 

ಪಟ್ಟಣದ ರಾಠಿ ಫಾರ್ಮ್‌ಹೌಸ್‌ನಲ್ಲಿ ಕರೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ 25 ವರ್ಷಗಳ ರಾಜಕೀಯಕ್ಕೆ ಬರುವ ಮುನ್ನ ಕಳೆದ 50 ವರ್ಷಗಳಿಂದ ಜನರ ಸಂಪರ್ಕದಲ್ಲಿದ್ದೇನೆ. ಇನ್ನೂ ನನಗೆ ವಿಶ್ವಾಸವಿದೆ. ಅಲ್ಲಿಯವರೆಗೂ ನಾನು ಕಾಯತ್ತೇನೆ ಎಂದು ತಿಳಿಸಿದರು. 

ಕಳೆದ 20 ವರ್ಷಗಳಿಂದ ನಿರಂತರ ಪಕ್ಷಕ್ಕಾಗಿ ನ್ಯಾಯ ಸಮ್ಮತವಾಗಿ ಶ್ರಮಿಸಿದ್ದೇನೆ. ಪಕ್ಷ ಹೇಳಿದ ಕಡೆಗಳಲ್ಲಿ ಪ್ರಚಾರ ಮಾಡಿ ಸಂಘಟನೆ ಮಾಡಿದ ವ್ಯಕ್ತಿಗೆ ಇಂದು ಪಕ್ಷ ಗೌರವಯುತವಾಗಿ ನಡೆದುಕೊಂಡಿಲ್ಲ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಅವರು ಹೇಳಿದರು. 

ಸಿದ್ದರಾಮಯ್ಯನವರನ್ನು ಓಲೈಸಿಕೊಳ್ಳಲು ಲಕ್ಷಾಂತರ ಬೆಲೆಯುಳ್ಳ ಮಾಲೆಯನ್ನು ಹಾಕಿ, ಅವರಿಗೆ ಜೈಕಾರ ಕೂಗಿದವರಿಗೆ ಇಂದು ಪಕ್ಷ ಮಣಿ ಹಾಕಿರುವುದು ದೊಡ್ಡ ದುರಂತ. ಮೋದಿಯವರನ್ನು ಮುಂದಿಟ್ಟುಕೊಂಡು ಪಕ್ಷವನ್ನು ಬಲಪಡಿಸಿದವರು ಇಂದು ವಿರುದ್ಧ ಮತ ಹಾಕಲು ನಮಗೆ ನೋವಾಗುತ್ತಿದೆ ಭಾವುಕರಾಗಿ ಮಲ್ಲಣ್ಣ ಅವರು ನುಡಿದರು. 

ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಕರೆದು ಟಿಕೆಟ್ ನೀಡಿದ್ದರೆ ನಮ್ಮ ಸಂಪೂರ್ಣ ಸಹಕಾರ ಇತ್ತು. ಇಂದು ಬೇರೆಯವರಿಗೆ ಟಿಕೆಟ್ ನೀಡಿರುವುದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಮುಖಂಡ ಡಾ. ಕೆ.ವಿ. ಪಾಟೀಲ ಹೇಳಿದರು. 

ಸಮಾರಂಭದಲ್ಲಿ ಮುಖಂಡರಾದ ಎಸ್‌.ಎಸ್‌. ಢವಣ, ನಿಂಗಪ್ಪ ಮೆಳ್ಳಿಕೇರಿ, ಸುರೇಶ ದುಳ್ಳೊಳ್ಳಿ, ಜಾನಪ್ಪ ಹಕಾಟಿ, ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ, ಬಸವರಾಜ ಸೋಮಗೊಂಡ, ಎಸ್‌.ಎಂ. ಮುರುಡಿ, ಮಹಾದೇವಿ ರೊಟ್ಟಿ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.