ಬಿಎಲ್‌ಒಗಳಿಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಲು ಮನವಿ

ಬಿಎಲ್‌ಒಗಳಿಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಲು ಮನವಿ Appeal to the public to extend necessary cooperation to BLOs

ಲೋಕದರ್ಶನ ವರದಿ   

ಇಂಡಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದ ಅಂಗವಾಗಿ ಇಂಡಿ ಉಪವಿಭಾಗಾಧಿಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಹಾಗೂ ಇಂಡಿ ತಾಲೂಕ ಪಂಚಾಯತ ಸ್ವೀಪ್ ಸಮಿತಿ, ತಾಲೂಕ ಆಡಳಿತ, ಹಾಗೂ ಪಟ್ಟಣದ ಎಲ್ಲಾ ಸರಕಾರಿ ಶಾಲಾ ವಿದ್ಯಾರ್ಥಿಗಳ  ಸಹಯೋಗದಲ್ಲಿ ಸಾರ್ವಜನಿಕ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಇಂಡಿ  ಉಪ ವಿಭಾಗಾಧಿಕಾರಿಗಳು ಚಿದಾನಂದ ಗುರುಸ್ವಾಮಿ ರವರು ಮಾತನಾಡಿ, ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ಪ್ರಜಾಪ್ರಭುತ್ವ ಬಲಪಡಿಸಬೇಕು.

ಮತ್ತಷ್ಟು ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕಾಗಿ ಮನೆ-ಮನೆಗೆ ಭೇಟಿ ನೀಡುವ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇಂಡಿ ತಹಶೀಲದಾರ ನಾಗೇಂದ್ರ ಕೊಳಶೆಟ್ಟಿ ಅವರು ಮಾತನಾಡಿ  ಪ್ರಜಾಪ್ರಭುತ್ವದ ಯಶಸ್ಸು ಮತದಾರರ ಸಕ್ರಿಯ ಭಾಗವಹಿಸುವಿಕೆಯ ಮೇಲೆ ಅವಲಂಬಿತವಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಅಭಿಯಾನವು ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳಲು ಒಂದು ಸುಸಂದರ್ಭವಾಗಿದೆ ಎಂದು ಹೇಳಿದರು. 

ಇಂಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ ಅವರು ಮಾತನಾಡಿ ತಾಲೂಕಿನ ಪ್ರತಿಯೊಬ್ಬ ನಾಗರಿಕನು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಜವಾಬ್ದಾರಿಯುತ ಮತದಾರರಾಗಬೇಕು ಎಂದು ಕರೆ ನೀಡಿದರು. ಈ ಜಾಗೃತಿ ಜಾಥಾ ಪಟ್ಟಣದ ಆಡಳಿತ ಸೌಧದಿಂದ ಪ್ರಾರಂಭಗೊಂಡು ಬಸ್ ನಿಲ್ದಾಣ - ಬಸವೇಶ್ವರ ಸರ್ಕಲ್ - ಅಂಬೇಡ್ಕರ ಸರ್ಕಲ್ - ಮಹಾವೀರ ಸರ್ಕಲ್  ಮೂಲಕ ಸಾಗಿತು. ಜಾಥಾದ ವೇಳೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ, ಹೊಸ ಮತದಾರರ ನೋಂದಣಿ ಹಾಗೂ ಬಿಎಲ್‌ಒಗಳ ಸಮೀಕ್ಷೆಗೆ ಸಹಕರಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು  ತಾಲೂಕ ಆಡಳಿತ ಹಾಗೂ ತಾಲೂಕು ಪಂಚಾಯತಿ ಸಿಬ್ಬಂದಿಗಳು ಇದ್ದರು.