ಸನ್ಮತಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸಭೆ

 ಸನ್ಮತಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸಭೆ  Annual Meeting of Sanmathi Educational Institution

ಲೋಕದರ್ಶನ ವರದಿ 

   ಕಾಗವಾಡ  20: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದೇ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಪ್ರಮುಖ ಗುರಿಯಾಗಿದೆ. ಲಾಭ ಗಳಿಸುವ ಉದ್ದೇಶ ಸಂಸ್ಥೆಗಿಲ್ಲ ಎಂದು ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ ಹೇಳಿದರು.  

 ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಶನಿವಾರ ನಡೆದ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ 75 ವರ್ಷಗಳಿಂದ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬಡ ವಿದ್ಯಾರ್ಥಿಗಳ ಶುಲ್ಕವನ್ನು ದಾನಿಗಳ ಆರ್ಥಿಕ ಸಹಕಾರದೊಂದಿಗೆ ಭರಿಸಲಾಗುತ್ತಿದೆ ಎಂದರು.  

 ಮುಂಬರುವ ದಿನಗಳಲ್ಲಿ ನಡೆಯಲಿರುವ ಸಂಸ್ಥೆಯ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಂಗ ಸಂಸ್ಥೆಗಳ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಮಾಜಿ ವಿದ್ಯಾರ್ಥಿಗಳು ಈಗಾಗಲೇ ಆರ್ಥಿಕ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.  

 ಶಿಕ್ಷಕ ಎ.ಕೆ. ಪಾಟೀಲ ಸಂಸ್ಥೆಯ ಒಟ್ಟಾರೆ ಪ್ರಗತಿ ವರದಿ ಮಂಡಿಸಿದರು. ವಿವಿಧ ಅಂಗ ಸಂಸ್ಥೆಗಳ ವಾರ್ಷಿಕ ವರದಿಗಳನ್ನು ಡಾ. ಭಾರತ ಅಲಸಂದಿ, ಎಸ್‌.ಡಿ. ಮುತಾಲಿಕ, ಸುವರ್ಣಾ ಪೂಜಾರ ಹಾಗೂ ಬಾಹುಬಲಿ ಬಡಜಿಗವಾಡೆ ವಾಚಿಸಿದರು.  

 ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ದಾನಿಗಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಅಜೀತ್ ನಾಂದ್ರೆ, ಡಾ. ಅಶೋಕ ಪಾಟೀಲ, ಸನ್ಮತಿ ವಿದ್ಯಾಲಯದ ಚೇರ್ಮನ್ ಸನ್ಮತಿ ಪಾಟೀಲ, ವಿನೋದ ಪಾಟೀಲ, ಮಹೇಂದ್ರ ಕುಸನಾಳೆ, ಸಿಇಒ ಸತೀಶ ಪಾಟೀಲ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.