ಹುಕ್ಕೇರಿಯಲ್ಲಿ ನಗರೋತ್ಥಾನ ಕಾಮಗಾರಿಗಳ ಕಳಪೆ ಗುಣಮಟ್ಟದ ಆರೋಪ
ಲೋಕದರ್ಶನ ವರದಿ
ಹುಕ್ಕೇರಿ 17: ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಾ ನಗರೋತ್ಥಾನ ಯೋಜನೆಯಡಿ ಕಳಪೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಹುಕ್ಕೇರಿ ಪಟ್ಟಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಗುರುವಾರ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ದೊಡಮನಿ ಹಾಗೂ ಡಿವಿಜನ್ ಬೆಳಗಾವಿಯ ಸಹಾಯಕ ಅಭಿಯಂತರ ವರ್ಧಮಾನ ಹೂಗಾರ ಅವರು ಸ್ಥಳ ಪರೀಶೀಲನೆ ನಡೆಸಿದರು.
ಈ ವೇಳೆ ಬೆಳವಿ ರಸ್ತೆಯ ಸ್ಮಶಾನ ಭೂಮಿ ಕಾಮಗಾರಿ, ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ, ಆದರ್ಶ ನಗರ ಬಡಾವಣೆಯ ಚರಂಡಿ ಕಾಮಗಾರಿ, ನಾಕಾ ಸಮೀಪದ ನೀರು ಶುದ್ಧೀಕರಣ ಘಟಕ ಹಾಗೂ ಪಟ್ಟಣದ ಹೊರವಲಯದ ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಹಲವು ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಪರೀಶೀಲನಾ ತಂಡದ ಗಮನಕ್ಕೆ ಬಂದಿದೆ.
ನಗರೋತ್ಥಾನ ಯೋಜನೆಯಡಿ ಒಟ್ಟು 15 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮೂರನೇ ಹಂತಕ್ಕೆ 5 ಕೋಟಿ ಹಾಗೂ ನಾಲ್ಕನೇ ಹಂತಕ್ಕೆ 10 ಕೋಟಿ ಮಂಜೂರಾಗಿದೆ. ಆದರೆ ಕಾಮಗಾರಿಗಳ ಫಲಿತಾಂಶ ಮಾತ್ರ ಶೂನ್ಯವಾಗಿದ್ದು, ಬಹುತೇಕ ಕಾಮಗಾರಿಗಳು ಅರ್ಧದಲ್ಲೇ ನಿಂತಿವೆ. ನಡೆದಿರುವ ಕಾಮಗಾರಿಗಳಲ್ಲಿಯೂ ಕಳಪೆ ಗುಣಮಟ್ಟ ಕಂಡುಬಂದಿದೆ ಎಂದು ಆರೋಪಿಸಲಾಗಿದೆ.