ಮಠದ ಹಣಕಾಸು ಪ್ರಶ್ನಿಸಿದವರಿಗೆ ಮಾರಣಾಂತಿಕ ಹಲ್ಲೆ ಆರೋಪ

ಮಠದ ಹಣಕಾಸು ಪ್ರಶ್ನಿಸಿದವರಿಗೆ ಮಾರಣಾಂತಿಕ ಹಲ್ಲೆ ಆರೋಪ Allegation of a life-threatening assault on those who questioned the Math's finances

 ಕಾರವಾರ 09: ಮಠದ ಹಣಕಾಸು ವ್ಯವಹಾರ ಪ್ರಶ್ನಿಸಿದ್ದಕ್ಕೆ ಮರಣಾಂತಿಕ ಹಲ್ಲೆ : ಪೊಕಳೆ ಆರೋಪ ಕಾರವಾರ: ವೈಶ್ಯ ಸಮಾಜದ   ಮಠದ ಸ್ವಾಮೀಜಿ  ಹಣಕಾಸಿನ ಅವ್ಯವಹಾರ, ಆಸ್ತಿ ವಂಚನೆ ಹಾಗೂ ಕೆಲವರ ಮೇಲೆ  ಕಿರುಕುಳದ ಆರೋಪಗಳನ್ನು ಪ್ರಶ್ನಿಸಿದಕ್ಕೆ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಸದಾಶಿವಗಡದ ಅಜಿತ್ ಪೊಕಳೆ ಆರೋಪಿಸಿದ್ದಾರೆ.  

ಕಾರವಾರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಅವರು , ಹಲ್ಲೆ ಹಾಗೂ ಜೀವ ಬೆದರಿಕೆ ಕುರಿತುಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಕಚೇರಿಯಲ್ಲಿ   ದೂರು ಸಲ್ಲಿಸಿದ್ದೇನೆ ಎಂದರು .ಕಳೆದ ಜುಲೈ 5ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದಲ್ಲಿರುವ ವೈಶ್ಯ ಸಮಾಜದ ಕೃಷ್ಣಾಶ್ರಮ ಮಠದಲ್ಲಿ ಸಭೆ ಏರಿ​‍್ಡಸಲಾಗಿತ್ತು. ಮಠದ ವಾಮನಾಶ್ರಮ ಸ್ವಾಮೀಜಿ ವಿರುದ್ಧ ಮಠದ ಆಸ್ತಿ ಹಾಗೂ ಹಣಕಾಸು ವ್ಯವಹಾರಗಳಲ್ಲಿ ಅವ್ಯವಹಾರ ನಡೆದಿರುವುದು, ಜಮೀನು ಮಾರಾಟ ಮತ್ತು ಸಾಲದ ವಿಚಾರಗಳಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಲಾಯಿತು .   

 ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಸಭೆ ಕರೆಯಲಾಗಿತ್ತು ಎಂದು ಅಜಿತ್ ಪೊಕಳೆ ವಿವರಿಸಿದರು.ಮಠದಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ, ಸ್ವಾಮೀಜಿಯವರ ವಿರುದ್ಧ ಇಷ್ಟೊಂದು ಗಂಭೀರ ಆರೋಪಗಳು ಕೇಳಿಬಂದಿದ್ದರೂ , ಈವರೆಗೆ ಪೊಲೀಸ್ ಠಾಣೆಯಲ್ಲಿ ಯಾಕೆ ದೂರು ದಾಖಲಾಗಿಲ್ಲ ಎಂದು ನಾನು ಪ್ರಶ್ನಿಸಿದೆ. ಅದಕ್ಕೆ ಅಲ್ಲಿ ಇದ್ದ ಸುಮಾರು  ಎಂಟತ್ತು  ಅಪರಿಚಿತ ವ್ಯಕ್ತಿಗಳು ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದರು. ಕುತ್ತಿಗೆಯನ್ನು ಹಿಚುಕಿದರು, ಗಡ್ಡ ಮತ್ತು ತಲೆ ಕೂದಲು ಎಳೆದು ನೆಲಕ್ಕುರುಳಿಸಿ ಕಾಲಿನಿಂದ ಒದ್ದರು. ಅಲ್ಲದೆ, ಸ್ವಾಮೀಜಿಯವರ ವಿರುದ್ಧ ಮಾತನಾಡಿದರೆ ಜೀವ ಸಮೇತ ಮುಗಿಸಿ ಬಿಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು ಎಂದು ಅಜಿತ್ ಪೊಕಳಿ ವಿವರಿಸಿದರು. 

ವೈಶ್ಯ ಸಮಾಜದ  ಮಠದ ವಾಮನಾಶ್ರಮ ಸ್ವಾಮೀಜಿ , ಕಳೆದ ಐದು ತಿಂಗಳಿಂದ ಶೃಂಗೇರಿ ಮಠದಲ್ಲಿ ಆಶ್ರಯ ಪಡೆದಿದ್ದು, ಈ ಅವಧಿಯಲ್ಲಿ ಮಠದ ಆಸ್ತಿ, ಹಣಕಾಸು ಮತ್ತು ಟ್ರಸ್ಟ್‌ ವ್ಯವಹಾರಗಳ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ ಎಂದು ಅವರು ಆರೋಪಿಸಿದರು.  ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಟ್ರಸ್ಟ್‌ನವರು ಮೌನ ವಹಿಸಿರುವುದು ಅನುಮಾನಕ್ಕೆ ಮತ್ತಷ್ಟು ಕಾರಣವಾಗಿದೆ ಎಂದು ಹೇಳಿದರು. 2008-09ರಲ್ಲಿ ಪಟ್ಟಾಭಿಷೇಕಗೊಂಡ ಸ್ವಾಮೀಜಿಯವರ ವಿರುದ್ಧ ಸಮಾಜದ ಆಸ್ತಿ, ಅಂಗಡಿ ಹಾಗೂ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಉದ್ಭವಿಸಿರುವುದರಿಂದ, ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅಜಿತ್ ಪೊಕಳಿ ಒತ್ತಾಯಿಸಿದರು.

ಈ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ ಅವರು, ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಮಾನಹಾನಿ, ಜೀವ ಬೆದರಿಕೆ ಮತ್ತು ಹಲ್ಲೆ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ತನ್ನ ಮೇಲೆ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ  ಮಠದಲ್ಲಿ ಹಲ್ಲೆ ಮಾಡಿದ  ಗುಂಪಿನವರೇ ಹೊಣೆ ಎಂದು ಅವರು ಎಚ್ಚರಿಸಿದರು. ಸಮಾಜಕ್ಕೆ ಮೋಸ ಮಾಡಿದವರನ್ನು ಮಠದಿಂದ ತಕ್ಷಣ ಹೊರಹಾಕಬೇಕು ಎಂದು ಅವರು ಆಗ್ರಹಿಸಿದರು.