ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
Abuse of Power: PDOs complain to DC and Election Commission, seeking disciplinary action against Kha
ಖಾನಾಪುರ : ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಯ ಗೌರವಾನ್ವಿತ ಹುದ್ದೆಯಲ್ಲಿರುವ ಖಾನಾಪುರ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರು ತಮ್ಮ ಗೌರವ ತರುವಂತೆ ವರ್ತಿಸದೇ ದುರ್ವತನೆ ತೋರಿದ್ದಾರೆ. ಕರ್ತವ್ಯನಿರತ ಸರ್ಕಾರಿ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಬ್ಬಾಳಿಕೆ ನಡೆಸಿದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಅವರನ್ನು ತಕ್ಷಣ ಇಲ್ಲಿಂದ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ತಾಲೂಕಿನ ಪಿಡಿಒಗಳು ಮತ್ತು ಗ್ರಾಮ ಪಂಚಾಯತಿಗಳ ಡೇಟಾ ಎಂಟ್ರಿ ಆಪರೇಟರ್‌ಗಳು ಗುರುವಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಗುರುವಾರ ಮುಂಜಾನೆ ಖಾನಾಪುರ ತಾಲೂಕು ಪಂಚಾಯತ ಸಭಾಭವನದಲ್ಲಿ ತಹಸೀಲ್ದಾರರು ತಾಲೂಕಿನ ಪಿಡಿಒ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳ ಸಭೆ ಕರೆದಿದ್ದರು. ಸಭೆ ಆರಂಭವಾದಾಗ ಸಭೆಯಲ್ಲಿ ಭಾಗವಹಿಸಿದ್ದ ಪಿಡಿಒಗಳು ಎಸ್.ಐ.ಆರ್ ಗಣಕೀಕರಣದ ಬಗ್ಗೆ ತಮ್ಮ ಪ್ರಶ್ನೆಗಳನ್ನು ಕೇಳಲು ಮುಂದಾದರು. ಆಗ ತಹಸೀಲ್ದಾರ್ ಪಿಡಿಒಗಳಿಗೆ ಮಾತನಾಡಲು ಅವಕಾಶ ನೀಡದೇ ದಬ್ಬಾಳಿಕೆ ನಡೆಸಿದರು ಎನ್ನಲಾಗಿದೆ. ಪಿಡಿಒಗಳನ್ನು ಏಕವಚನದಲ್ಲಿ ಮಾತನಾಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಮನನೊಂದ ಪಿಡಿಒ ಮತ್ತು ಆಪರೇಟರ್‌ಗಳು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಆಗ ಪಿಡಿಒಗಳ ಜೊತೆ ಹೊರಬಂದ ತಹಸೀಲ್ದಾರ್ ಸಭಾಭವನದ ಮುಂಭಾಗದಲ್ಲೂ ಪಿಡಿಒಗಳೊಂದಿಗೆ ಮಾತಿನ ಚಕಮಕಿ ನಡೆಸಿ ಕೆಲ ಪಿಡಿಒಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ಆಗ ಘಟನಾ ಸ್ಥಳದಲ್ಲಿದ್ದ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಹಸೀಲ್ದಾರರನ್ನು ಸ್ಥಳದಿಂದ ಬೇರೆಡೆ ಕರೆದೊಯ್ದರು.
ಸಭೆ ಬಹಿಷ್ಕರಿಸಿ ಹೊರಬಂದ ಪಿಡಿಒಗಳು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳು ಸುದ್ದಿಗೋಷ್ಠಿ ನಡೆಸಿ ತಹಸೀಲ್ದಾರರ ವರ್ತನೆಯನ್ನು ಖಂಡಿಸಿದರು. ಬಾಲರಾಜ ಭಜಂತ್ರಿ, ಪ್ರಸನ್ನಕುಮಾರ, ವೀರೇಶ ಸಜ್ಜನ ಮತ್ತಿತರರು ಮಾತನಾಡಿ, "ದುಂಡಪ್ಪ ಕೋಮಾರ ಅವರು ಈ ಹಿಂದೆಯೂ ಹಲವು ಬಾರಿ ಅಧಿಕಾರಿಗಳು ಮತ್ತು ನೌಕರರಿಗೆ ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಏಕವಚನದಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಅಗೌರವ ತೋರಿದ್ದಾರೆ.
ಇಂತಹ ಮನಃಸ್ಥಿತಿಯುಳ್ಳ ತಹಸೀಲ್ದಾರ್ ನಡೆಯನ್ನು ಎಲ್ಲರೂ ಸೇರಿ ಖಂಡಿಸಿದ್ದು, ಅವರು ಕರೆದಿದ್ದ ಸಭೆ ಬಹಿಷ್ಕರಿಸಿ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ತಹಸೀಲ್ದಾರರು ಬಹುಶಃ ಮಾನಸಿಕ ಖಿನ್ನತೆಯಿಂದ ಅಥವಾ ಅಧಿಕಾರ ದರ್ಪದಿಂದ ಈ ರೀತಿ ವರ್ತಿಸುತ್ತಿರಬಹುದು.
ಬೆಳಗಾವಿ ಡಿಸಿ, ಜಿಪಂ ಸಿಇಒ ಮತ್ತು ಚುನಾವಣಾ ಆಯೋಗಕ್ಕೆ ಈ ಘಟನೆಯ ಬಗ್ಗೆ ವಿವರಿಸಿ ತಹಸೀಲ್ದಾರ್ ವಿರುದ್ಧ ದೂರು ನೀಡುತ್ತಿದ್ದು, ಮೇಲಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಸುವ ಮೂಲಕ ತಹಸೀಲ್ದಾರರ ವಿರುದ್ಧ ಅಗತ್ಯ ಶಿಸ್ತುಕ್ರಮ ಕೈಗೊಳ್ಳಬೇಕು ಮತ್ತು ಇಲ್ಲಿಂದ ಅವರನ್ನು ಬೇರೆಡೆ ಎತ್ತಂಗಡಿ ಮಾಡಬೇಕು ಎಂದರು.
ಬಳಿಕ ಪಿಡಿಒಗಳು ಬೆಳಗಾವಿಗೆ ತೆರಳಿ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಬಾಲರಾಜ ಭಜಂತ್ರಿ, ಪ್ರಸನ್ನಕುಮಾರ, ಸಾಗರಕುಮಾರ ಬಿರಾದಾರ, ಜ್ಯೋತಿಬಾ ಕಾಮಕರ, ಪ್ರವೀಣ ಸಾಯನಾಕ, ಪ್ರೀತಿ ಪತ್ತಾರ, ಉಸ್ಮಾನ ನದಾಫ, ವೀರೇಶ ಸಜ್ಜನ, ಆರತಿ ಅಂಗಡಿ, ರಾಜಾರಾಮ ಹಲಗೇಕರ, ರಾಜು ತಳವಾರ, ಸಂತೋಷ ಚೌಗುಲೆ ಸೇರಿದಂತೆ ಪಿಡಿಒಗಳು ಮತ್ತು ಪಿಡಿಒಗಳ ಹುದ್ದೆ ಉನ್ನತೀಕರಿಸಿದ ಸಂಘದ ಪದಾಧಿಕಾರಿಗಳು ಇದ್ದರು.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 