ರಾಜ್ಯ ಸರ್ಕಾರದಿಂದ ಆಡಳಿತ ಗೊಂದಲ: ಎಸ್‌ಐಆರ್ ಪ್ರಕ್ರಿಯೆ ಕುರಿತು ಎಫ್‌.ಎಸ್‌. ಸಿದ್ದನಗೌಡರ ಆರೋಪ

ರಾಜ್ಯ ಸರ್ಕಾರದಿಂದ ಆಡಳಿತ ಗೊಂದಲ: ಎಸ್‌ಐಆರ್ ಪ್ರಕ್ರಿಯೆ ಕುರಿತು ಎಫ್‌.ಎಸ್‌. ಸಿದ್ದನಗೌಡರ ಆರೋಪ Administrative confusion caused by the state government: F.S. Siddanagoudar alleges issues regarding

 ಬೈಲಹೊಂಗಲ, ಜು.14: ರಾಜ್ಯದಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರಾಜ್ಯ ಸರ್ಕಾರದ ಧೋರಣೆಯಿಂದ ಆಡಳಿತಾತ್ಮಕ ಗೊಂದಲ ಮತ್ತು ವೈಫಲ್ಯದ ಪರಮಾವಧಿಗೆ ತಲುಪಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್‌.ಎಸ್‌. ಸಿದ್ದನಗೌಡ ಆರೋಪಿಸಿದ್ದಾರೆ.  

ಸೋಮವಾರ ಪ್ರಕಟಣೆ ನೀಡಿದ ಅವರು, ಚುನಾವಣಾ ಆಯೋಗದ ಮನೆ-ಮನೆ ಭೇಟಿ ನಿಯಮಗಳನ್ನು ಪಾಲಿಸದೆ, ವಿವಿಧ ಪ್ರದೇಶಗಳಲ್ಲಿ ಕ್ಯಾಂಪ್ಗಳ ಮೂಲಕ ಪರೀಶೀಲನೆ ನಡೆಸಲಾಗುತ್ತಿದೆ. ಅಧಿಕಾರಿಗಳಿಗೆ ಸೂಕ್ತ ತಾಂತ್ರಿಕ ಮಾರ್ಗದರ್ಶನದ ಕೊರತೆಯಿಂದ ದತ್ತಾಂಶಗಳಲ್ಲಿ ಕುಟುಂಬ ಲಿಂಕ್, ಪ್ರೊಫೈಲ್ ಮ್ಯಾಪಿಂಗ್ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಿವೆ ಎಂದು ದೂರಿದರು.  

ಬಿಎಲ್‌ಒಗಳಿಗೆ ಸ್ಪಷ್ಟ ಸೂಚನೆಗಳಿಲ್ಲದೆ ಸಾರ್ವಜನಿಕರಿಗೆ ವಿಭಿನ್ನ ಮಾಹಿತಿಗಳನ್ನು ನೀಡಲಾಗುತ್ತಿದೆ. ಅನೇಕ ಕಡೆಗಳಲ್ಲಿ ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡುವ ಮುನ್ನವೇ ಫಾರ್ಮ್ಗಳನ್ನು ಸ್ಕ್ಯಾನ್ ಮಾಡಿರುವುದರಿಂದ ದಾಖಲೆಗಳಲ್ಲಿ ದೋಷಗಳು ಕಂಡುಬರುತ್ತಿವೆ ಎಂದು ಅವರು ಹೇಳಿದರು.  ಪ್ರತಿ ಬೂತ್ನಲ್ಲಿ ಬಿಎಲ್‌ಒಗಳೊಂದಿಗೆ ಒಬ್ಬ ಸರ್ಕಾರಿ ಅಧಿಕಾರಿಯನ್ನು ಮೇಲ್ವಿಚಾರಣೆಗೆ ನೇಮಿಸಬೇಕು. ಮತದಾರರಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು.  

ಅಕ್ಟೋಬರ್ 1, 2026ರೊಳಗೆ 18 ವರ್ಷ ಪೂರ್ಣಗೊಳ್ಳುವ ಹೊಸ ಮತದಾರರು ಈಗಲೇ ಫಾರ್ಮ-6 ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಯುವ ಮತದಾರರ ನೋಂದಣಿಗಾಗಿ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.  

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ಆಡಳಿತ ಯಂತ್ರದ ಮೂಲಕ ಮತದಾರರ ಪಟ್ಟಿಯಲ್ಲಿ ದುರುಪಯೋಗಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಅವರು ಆರೋಪಿಸಿದರು. ಮೃತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕದಿರುವುದು ಹಾಗೂ ದೂರದ ಸಂಬಂಧಿಕರನ್ನು ಕುಟುಂಬ ಸದಸ್ಯರೆಂದು ತೋರಿಸಿ ಹೆಸರು ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ ಎಂದರು.  

ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಭಾರತೀಯ ಚುನಾವಣಾ ಆಯೋಗವು ತಕ್ಷಣವೇ ಕರ್ನಾಟಕಕ್ಕೆ ವಿಶೇಷ ವೀಕ್ಷಕರನ್ನು ನೇಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಫ್‌.ಎಸ್‌. ಸಿದ್ದನಗೌಡ ಆಗ್ರಹಿಸಿದರು.