ಸಮಾಜದಲ್ಲಿ ಸಮಾನತೆಗಾಗಿ ಸೇವಾ ಮನೋಭಾವ ಅಗತ್ಯ: ಡಾ. ಗೀರೀಶ್ ಕುಚಿನಾಡ

ಸಮಾಜದಲ್ಲಿ ಸಮಾನತೆಗಾಗಿ ಸೇವಾ ಮನೋಭಾವ ಅಗತ್ಯ: ಡಾ. ಗೀರೀಶ್ ಕುಚಿನಾಡ  A spirit of service is essential for equality in society: Dr. Girish Kuchinada

ರಾಣಿಬೇನೂರ 14: ಸಮಾಜದಲ್ಲಿ ಸಮಾನತೆ ಕಾಣಬೇಕಾದರೆ ಇರುವವರು ಇಲ್ಲದವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಲಯನ್ಸ್‌ ಜಿಲ್ಲಾ 317-ಬಿ ಪ್ರಾಂತೀಯ ಅಧ್ಯಕ್ಷ ಡಾ. ಗೀರೀಶ್ ಕುಚಿನಾಡ ಹೇಳಿದರು.  

ನಗರದಲ್ಲಿ ಭಾನುವಾರ ಲಯನ್ಸ್‌ ಸಭಾಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ನೂತನ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ, ಕಾರ್ಯದರ್ಶಿ ಪ್ರಭುಲಿಂಗಪ್ಪ ಹಲಗೇರಿ ಹಾಗೂ ಖಜಾಂಚಿ ಕೋಟ್ರೇಶಪ್ಪ ಎಮ್ಮಿ ಮತ್ತು ತಂಡದವರಿಗೆ ಅಧಿಕಾರ ಗೌಪ್ಯತೆ ಹಾಗೂ ಪ್ರತಿಜ್ಞಾವಿಧಿ ಬೋಧಿಸಿದರು.  

ಲಯನ್ಸ್‌ ಸೇವಾ ಸಂಸ್ಥೆಯು ವಿಶ್ವದಾದ್ಯಂತ ತನ್ನದೇ ಆದ ಸೇವಾ ಕಾರ್ಯಗಳಿಂದ ಗುರುತಿಸಿಕೊಂಡಿದೆ. ಸೇವೆಯನ್ನೇ ಪ್ರಮುಖ ಗುರಿಯಾಗಿಸಿಕೊಂಡಿರುವ ಈ ಅಂತಾರಾಷ್ಟ್ರೀಯ ಸಂಸ್ಥೆಯು ಜನಸಾಮಾನ್ಯರು, ಬಡವರು ಹಾಗೂ ಸಂಕಷ್ಟದಲ್ಲಿರುವವರ ಜೀವನಮಟ್ಟ ಸುಧಾರಣೆಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.  

ಹೊಸ ಸದಸ್ಯರು ಸಂಸ್ಥೆಯ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕು. ಸೇವೆಯ ಜೊತೆಗೆ ಆತ್ಮತೃಪ್ತಿಯನ್ನು ಪಡೆಯುವಂತಾಗಬೇಕು. ಅದುವೇ ನಿಜವಾದ ಸೇವೆ ಎಂದು ಕರೆ ನೀಡಿದರು.  

ಹಿಂದಿನ ಅಧ್ಯಕ್ಷ ಅಮೋಘ ಬಡಾಮಿ ಅವರು ಅಧಿಕಾರ ಹಸ್ತಾಂತರಿಸಿ, ತಮ್ಮ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.  2026-27ನೇ ಸಾಲಿನ ನೂತನ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ ಮಾತನಾಡಿ, 1976ರಲ್ಲಿ ಆರಂಭವಾದ ಲಯನ್ಸ್‌ ಸಂಸ್ಥೆ 50 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ. ಮೂರು ಅವಧಿಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಪೂರ್ವಜನ್ಮದ ಪುಣ್ಯದ ಫಲ ಎಂದು ಭಾವಿಸುತ್ತೇನೆ ಎಂದರು.  

ಲಯನ್ಸ್‌ ಸಂಸ್ಥೆಯ ಸುವರ್ಣ ಸಂಭ್ರಮದ ಅಂಗವಾಗಿ ವರ್ಷಪೂರ್ತಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉಚಿತ ಕೃತಕ ಕಾಲು ಜೋಡಣೆ, ಹೃದಯ ತಪಾಸಣೆ, ದಂತ ತಪಾಸಣೆ, ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ ಹಾಗೂ ಆಸ್ಪತ್ರೆಗಳಲ್ಲಿ ಅನ್ನದಾಸೋಹ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

ನೂತನ ಪದಾಧಿಕಾರಿಗಳಿಗೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಹಾಗೂ ಲಯನ್ಸ್‌ ಸದಸ್ಯರು ಹೂಮಾಲೆ ಹಾಕಿ ಅಭಿನಂದಿಸಿದರು.  ಕಾರ್ಯಕ್ರಮದಲ್ಲಿ ಮಾಜಿ ಕಾರ್ಯದರ್ಶಿ ಶಿವಪ್ಪ ಗುರಿಕಾರ, ಖಜಾಂಚಿ ನಂದೀಶ್ ಆರ್‌., ಮಹೇಶ್ ಅಡಿವೆಪ್ಪನವರ್, ಬಸವರಾಜ ಬಡಿಗೇರ್, ಪರಮೇಶಪ್ಪ ಗೋಳಣ್ಣನವರ್, ಎಸ್‌.ಟಿ. ವೀರಣ್ಣ, ಡಾ. ಸಂಜಯ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಶಿಕ್ಷಕಿ ವೇದಾವತಿ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರಭುಲಿಂಗಪ್ಪ ಹಲಗೇರಿ ಸ್ವಾಗತಿಸಿದರು. ಶಿವಪ್ಪ ಗುರಿಕಾರ ವರದಿ ವಾಚಿಸಿದರು. ಶಿಕ್ಷಕ ಆರಿ​‍್ವ. ಸೂರಗೊಂಡ ನಿರೂಪಿಸಿದರು. ಎನ್‌.ಎಸ್‌. ಕುಲಕರ್ಣಿ ವಂದಿಸಿದರು.