ಹೊಲಗದ್ದೆಗಳಿಗೆ ಜಲಾಶಯದಿಂದ ನೀರು ಹರಿಸಲು ಮನವಿ

ಮುಂಡಗೋಡ 15: ತಾಲ್ಲೂಕಿನ ಸನವಳ್ಳಿ ಗ್ರಾಮದ ರೈತರ ಹೊಲಗದ್ದೆಗಳಿಗೆ ಜಲಾಶಯದಿಂದ ದಡಭಾಗದ ರೈತರ ಹೊಲಗದ್ದೆಗಳಿಗೆ ಎಂಟು ದಿನಗಳ ಮಟ್ಟಿಗೆ ನೀರು ಹಾಯಿಸಬೇಕೆಂದು ಒತ್ತಾಯಿಸಿ, ಅಲ್ಲಿನ ಗ್ರಾಮಸ್ಥರು ಉಪತಹಶೀಲ್ದಾರ್ ಜಿ.ಬಿ.ಭಟ್ಟ ಅವರಿಗೆ ಮನವಿ ಸಲ್ಲಿಸಿದರು.  

ದಡಭಾಗದಲ್ಲಿರುವ ಸುಮಾರು 50ಎಕರೆ ಅಡಿಕೆ ತೋಟ ಹಾಗೂ 40 ಎಕರೆ ಪ್ರದೇಶದಲ್ಲಿ ಬೆಳೆದಿರುವ ಗೋವಿನಜೋಳ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಅಂತರ್ಜಲ ಕುಸಿತದಿಂದ ಹೋಗಿದೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಒಂದು ವಾರದ ಮಟ್ಟಿಗೆ ಆದರೂ ಸನವಳ್ಳಿ ಜಲಾಶಯದಿಂದ ನೀರು ಹಾಯಿಸಿದರೆ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಜಲಾಶಯದಲ್ಲಿ ಸದ್ಯಕ್ಕೆ ನೀರಿನ ಪ್ರಮಾಣ ಹೆಚ್ಚಿದ್ದು. ಬೆಳೆಗಳಿಗೆ ನೀರು ಬಿಟ್ಟರೆ ನೀರಿನ ಪ್ರಮಾಣ ಕಡಿಮೆ ಆಗುವುದಿಲ್ಲ. ತೋಟ, ಗದ್ದೆಗಳಲ್ಲಿ ಇರುವ ಕೊಳವೆ ಬಾವಿಗಳು ರಿಚಾರ್ಜ್‌ ಅಗಲು ಸಹಾಯವಾಗುತ್ತದೆ. ಸಂಬಂಧಿಸಿದ ಇಲಾಖೆಯವರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ರಾಜು ಗುಬ್ಬಕ್ಕನವರ, ಮಂಜುನಾಥ ಕೋಣನಕೇರಿ, ವಿ.ಜಿ. ಹಿರೇಮಠ, ಗೀರೀಶ ಅರೆಗೊಪ್ಪ ಇನ್ನಿತರ ರೈತರು ಇದ್ದರು.