ಗುರು ಕೃಪೆಯಿಂದ ನೆಮ್ಮದಿಯ ಬದುಕು ಸಾಧ್ಯ: ಮಹಾದೇವ ಶ್ರೀ

ತಳಕಲ್ ಅನ್ನದಾನೀಶ್ವರ ಶಾಖಾಮಠದಲ್ಲಿ 2ನೇ ಶಿವಾನುಭವ 

ಕುಕನೂರ ಜ 13 : ದೇವರು ಸಾಧಕನಿಗೆ ಸಹಾಯ ಮಾಡಲು ವಿಫಲವಾದಾಗ, ಗುರುವು ಅವನ ರಕ್ಷಣೆಗೆ ಬರುತ್ತಾನೆ ಎಂದು ನಮ್ಮ ಧರ್ಮಗ್ರಂಥಗಳು ಹೇಳುತ್ತವೆ ಎಂದು ಕುಕನೂರ ತಳಕಲ್ ಮಠದ ಪೂಜ್ಯ ಡಾಽಽ ಮಹಾದೇವ ಸ್ವಾಮಿಗಳು ಹೇಳಿದರು. 

ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ 02ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ ಗುರುಗಳು ಸಾಧಕನಿಗೆ ಸಹಾಯ ಮಾಡಲು ವಿಫಲವಾದಾಗ ದೇವರು ಕೂಡ ಅವನ ಸಹಾಯಕ್ಕೆ ಬರುವುದಿಲ್ಲ. ಗುರು ಮಾತ್ರ ಸಾಧಕನನ್ನು ಮುನ್ನಡೆಸಬಲ್ಲ, ಗುರು ಕೃಪೆ ಇಲ್ಲದೇ ಭಗವತ್ ಸಾಕ್ಷಾತ್ಕಾರ ಸಾಧ್ಯವಿಲ್ಲ. ಭಗವಂತನನ್ನು ಅರಿಯುವುದಕ್ಕೆ ಅವನ ಕೃಪೆಯ ಆವಶ್ಯಕತೆ ಇದ್ದೇ ಇರುತ್ತದೆ ಎಂದರು.   

ವಿರಾಪೂರದ ವೇ ಮೂ ಚನ್ನಬಸಯ್ಯ ಶಾಸ್ತ್ರೀಗಳು ಪ್ರವಚನ ಮಾಡುತ್ತಾ ಮಾನವನ ಬದುಕಿನಲ್ಲಿ ಸುಖ-ದುಃಖಗಳು ಬರುತ್ತವೆ, ಹೋಗುತ್ತವೆ. ಸುಖದ ಸಂದರ್ಭಗಳು ಬಂದಾಗ ವಿಶೇಷ ಆನಂದ, ಸಂಭ್ರಮಪಡುವ ಮನುಷ್ಯರು ದುಃಖ, ಸಂಕಟ, ವಿಪತ್ತುಗಳು ಬಂದಾಗ ಗೋಳಿಡುತ್ತಾ ತನ್ನ ನೆರೆಕರೆಯವರು, ಬಂಧು-ಬಳಗದವರು, ಆಪ್ತಮಿತ್ರ ವರ್ಗದವರನ್ನು, ಸರಕಾರದ ಅಧಿಕಾರಿಗಳನ್ನು ನೆರವಿಗಾಗಿ ವಿನಂತಿಸುವುದುಂಟು ಆದರೆ ಕೊನೆಗೆ ಭಗವಂತನಿಗೆ ಪ್ರಾರ್ಥಿಸುತ್ತಾರೆ ಎಂದರು. ಪ್ರಸಾದ ಸೇವೆಯನ್ನ ಜಯಮ್ಮ ತಳಕಲ್ ಕುಟುಂಬದವರು ಮಾಡಿದರು.    

ಈ ಸಂಧರ್ಭದಲ್ಲಿ ಪ್ರಭು ಶಿವಸಿಂಪರ ಕುಕನೂರ, ಸಿದ್ದಪ್ಪ ಕರ್ಜಗಿ, ಹನುಮಂತಪ್ಪ ಬಂಗಾರಿ, ಮಲ್ಲಯ್ಯ, ಶಿವಕಲ್ಲಯ್ಯ, ಬಸವ ಬ್ಯಾಳಿ, ಮಲ್ಲಿಕಾರ್ಜುನಾ ಕರ್ಜಗಿ, ಮುದಿಯಪ್ಪ ಯಗ್ಗಮ್ಮನವರು ಮತ್ತು ಇತರರು ಇದ್ದರು.