ಕಿರಾಣಿ ವ್ಯಾಪಾರಸ್ಥರು ಸೇವಾ ಮನೋಭಾವನೆಯಿಂದ ವ್ಯಾಪಾರ ಮಾಡಲಿ

ಬನವಾಸಿ 10: ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಕಿರಾಣಿ ವ್ಯಾಪಾರಸ್ಥರು ಸೇವಾ ಮನೋಭಾವನೆಯಿಂದ ವ್ಯಾಪಾರ ಮಾಡಬೇಕಾಗಿದೆ ಎಂದು ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತ ಬಿರಾದಾರ ಹೇಳಿದರು.

ಅವರು ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಭಾನುವಾರ ಸಂಜೆ ನಡೆದ ಕಿರಾಣಿ ವರ್ತಕರ ಸಭೆಯಲ್ಲಿ ಮಾತನಾಡಿ, ಕೊರೋನ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಪಟ್ಟಣದ ಕಿರಾಣಿ ವರ್ತಕರು 14ದಿನಗಳ ಲಾಕ್ ಡೌನ್ ಸಂದರ್ಭದಲ್ಲಿ ಕೆಲ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಕಿರಾಣಿ ಅಂಗಡಿಗಳ ಮುಂದೆ ಜನಸಂದಣಿ ಆಗದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ  ಜವಾಬ್ದಾರಿ ವಹಿಸಿಕೊಳ್ಳಬೇಕು. ಅಲ್ಲದೇ ಗ್ರಾಮೀಣ ಭಾಗದ ಜನರ ಹಿತದೃಷ್ಟಿಯಿಂದ ಸ್ಥಳೀಯ ಕಿರಾಣಿ ವರ್ತಕರಿಗೆ ಸಾಮಾಗ್ರಿ ಚೀಟಿಯನ್ನು ಪಡೆದು ಯಾವ ಸಮಯದಲ್ಲಿ ಬೇಕಾದರೂ ಸಾಮಾಗ್ರಿ ವಿತರಣೆ ನೀಡಬಹುದು. ಅದೇ ಪ್ರಕಾರ ಸ್ಥಳೀಯ ತರಕಾರಿ ವ್ಯಾಪಾರಸ್ಥರು ಗಾಡಿಗಳ ಮೂಲಕ ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡುವಂತೆ ಸಲಹೆ ನೀಡಿದರು. ಒಂದು ವೇಳೆ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಟ್ಟಣದ ಕಿರಾಣಿ ವರ್ತಕರು, ಪೊಲೀಸ್ ಸಿಬ್ಬಂದಿಗಳು ಇದ್ದರು.