ಕೃಷ್ಣಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ

ರಬಕವಿ-ಬನಹಟ್ಟಿ 25: ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ. ಇದೇ ರೀತಿ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದರೆ ಕೃಷ್ಣಾ ನದಿ ಪ್ರವಾಹ ಎದುರಾಗಲಿದೆ. 

ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದ ಒಳ ಹರಿವು 1.02 ಲಕ್ಷಕ್ಕೂ, ಇದ್ದು, ಅಷ್ಟೇ ಪ್ರಮಾಣದ ಹೊರ ಹರಿವಿದೆ. ನೀರಿನ ಮಟ್ಟ 521.35 ಮೀ, ದಾಖಲಾಗಿದೆ. ಹಾಗಾಗಿ ಬಂದಷ್ಟೇ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ ಡಾ.ಡಿ.ಎಚ್‌.ಹೂಗಾರ ತಿಳಿಸಿದ್ದಾರೆ. 

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕೋಯ್ನಾ ಭಾಗದಲ್ಲಿ 150 ಮಿ.ಮೀ., ನವುಜಾ-214 ಮಿ.ಮೀ., ಮಹಾಬಳೇಶ್ವರ-189 ಮಿ.ಮೀ., ರಾಧಾ ನಗರಿ- 142 ಮಿ.ಮೀ., ವಾರಣಾ-76 ಮಿ.ಮೀ., ದೂಧಗಂಗಾ- 97 ಮಿ.ಮೀ., ತರಳಿ- 56 ಮಿ.ಮೀ. ಮಳೆಯಾದ ವರದಿಯಾಗಿದೆ. ರಾಜಾಪೂರ ಬ್ಯಾರೇಜ್‌ನಿಂದ 87,500 ಕ್ಯೂ ನೀರು ಬಿಡಲಾಗುತ್ತಿದೆ ಎಂದು ಹಿಪ್ಪರಗಿ ಜಲಾಶಯದ ಸಹಾಯಕ ಅಭಿಯಂತರ ವಿಠಲ ನಾಯಕ ತಿಳಿಸಿದ್ದಾರೆ.