ವಿಜಯಪುರ

ಗುರುಗಳಿಗೆ ಅದ್ದೂರಿ ಗುರುವಂದನೆ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ

ಗುರುಗಳಿಗೆ ಅದ್ದೂರಿ ಗುರುವಂದನೆ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ

 ದೇವರಹಿಪ್ಪರಗಿ, ಜು.6: ಸ್ಥಳೀಯ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ 1997-98ನೇ ಸಾಲಿನ ಎಸ್‌ಎಸ್‌ಎಲ್ಸಿ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸಾರೋಟಿಯಲ್ಲಿ ಮೆರವಣಿಗೆ ನಡೆಸಿ, ಪುಷ್ಪವೃಷ್ಟಿಯೊಂದಿಗೆ ವೇದಿಕೆಗೆ ಕರೆತಂದು ಪಾದಪೂಜೆ ನೆರವೇರಿಸಿ ಗೌರವ ಸಲ್ಲಿಸಿದರು.  ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಂ.ಡಿ. ಬಳಿಗಾರ ಹಾಗೂ ಎಂ.ಡಿ. ಬಿರಾದಾರ ಸೇರಿದಂತೆ ಪ್ರಸ್ತುತ ಶಿಕ್ಷಕರನ್ನು ಸನ್ಮಾನಿಸಲಾಯಿತು.  

ನಿವೃತ್ತ ಶಿಕ್ಷಕ ಎಂ.ಡಿ. ಬಳಿಗಾರ ಮಾತನಾಡಿ, "ಹಲವು ವರ್ಷಗಳ ಬಳಿಕವೂ ವಿದ್ಯಾರ್ಥಿಗಳು ಗುರುಗಳನ್ನು ನೆನಪಿಸಿಕೊಂಡು ಗೌರವಿಸುವುದು ಅತ್ಯಂತ ಸಂತಸದ ಸಂಗತಿ. ನಾವು ಬಿತ್ತಿದ ಜ್ಞಾನದ ಬೀಜ ಫಲ ನೀಡುತ್ತಿರುವುದನ್ನು ಕಂಡು ಹೆಮ್ಮೆ ಎನಿಸುತ್ತದೆ" ಎಂದು ಹೇಳಿದರು.  ಶಿಕ್ಷಕ ಬಿ.ವೈ. ಬಂಟನೂರ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಆಯೋಜಿಸಿರುವ ಗುರುವಂದನಾ ಕಾರ್ಯಕ್ರಮ ಶಾಲೆಯ ಸಂಸ್ಕಾರ ಮತ್ತು ಮೌಲ್ಯಗಳಿಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.  

ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ ಅಧ್ಯಕ್ಷತೆ ವಹಿಸಿ, ಶಾಲೆಯ ಹಳೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ಶಾಲೆಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.  ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ದ್ವಾರಕಾಲಿಂಗ ಶಿವಾಚಾರ್ಯರು, ಕೊಕಟನೂರಿನ ಶ್ರೀ ಮಡಿವಾಳೇಶ್ವರ ಮಹಾಸ್ವಾಮೀಜಿ ಹಾಗೂ ಆಲಮೇಲದ ಶ್ರೀಗಳು ವಹಿಸಿ ಆಶೀರ್ವಚನ ನೀಡಿದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ (ಯಡಿಯಾಪೂರ), ಜಿ.ಎಸ್‌. ನಾಡಗೌಡ, ಬಿ.ವೈ. ಬಂಟನೂರ, ಕೆ.ಐ. ಹೊಸಮನಿ, ಎಂ.ಎಸ್‌. ಬಾಗೇವಾಡಿ, ಸಿ.ಸಿ. ಬಿರಾದಾರ, ಎಚ್‌.ಎಚ್‌. ಪಾಟೀಲ ಸೇರಿದಂತೆ ಗ್ರಾಮಸ್ಥರು, ನಿವೃತ್ತ ಹಾಗೂ ಹಾಲಿ ಶಿಕ್ಷಕರು, ಸಿಬ್ಬಂದಿ ಮತ್ತು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ