ಅಂದು ವರ, ಇಂದು ಶಾಪ; ಇದು ಬಳ್ಳಾರಿ ನಾಲಾ ಕಥೆ -8200 ಹೇಕ್ಟರ ಭೂಮಿಗೆ ಬರ

ಅಂದು ವರ, ಇಂದು ಶಾಪ; ಇದು ಬಳ್ಳಾರಿ ನಾಲಾ ಕಥೆ -8200 ಹೇಕ್ಟರ ಭೂಮಿಗೆ ಬರ  A boon then, a curse now; the story of the Bellary Nala—drought for 8,200 hectares of land

ಲೋಕದರ್ಶನ ವರದಿ

ಯರಗಟ್ಟಿ 15:   ಒಂದು ಕಾಲದಲ್ಲಿ ಬೆಳಗಾವಿ ಜಿಲ್ಲೆಯ ಜನತೆಗೆ ವರವಾಗಿದ್ದ ಈ ನಾಲಾ ಈಗ ಶಾಪವಾಗಿ ಪರಿಣಮಿಸಿದೆ. ಪರಿಶುದ್ಧವಾಗಿ ಹರಿಯುತ್ತಿದ್ದ ನೀರನ್ನು ನಾವು ಕುಡಿಯುತ್ತಿದ್ದೆವು. ಈಗ ಚರಂಡಿ ನೀರು ಸೇರಿ ಗಬ್ಬು ನಾರುತ್ತಿದೆ. ಇನ್ನು ಹೂಳು ತುಂಬಿದ ಪರಿಣಾಮ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ, ಬೆಳೆ ಹಾನಿ ಆಗುತ್ತಿದೆ ಎಂದು ರೈತರು ಕಣ್ಣೀರು ಸುರಿಸುತ್ತಿದ್ದಾರೆ. ನಾವು ಹೇಳಲು ಹೊರಟಿರುವುದು ಬೆಳಗಾವಿಯಲ್ಲಿರುವ ಬಳ್ಳಾರಿ ನಾಲಾ ಕಥೆ - ವ್ಯಥೆ ಮತ್ತು ಕೆಲ ಕುತೂಹಲಕಾರಿ ಸಂಗತಿಗಳನ್ನು. 

ಬೆಳಗಾವಿ ಜಿಲ್ಲೆಯಲ್ಲಿ ಬಳ್ಳಾರಿ ಹೆಸರಿನ ನಾಲಾ ಇರುವುದು ಎಲ್ಲರಿಗೂ ಗೊತ್ತಿದೆ. ಪ್ರತಿವರ್ಷ ಮುಂಗಾರಿನಲ್ಲಿ ಮಳೆರಾಯನ ಆರ್ಭಟದಿಂದ ಉಕ್ಕಿ ಹರಿಯುತ್ತಿರುವ ಬಳ್ಳಾರಿ ನಾಲಾ, ಸಾವಿರಾರು ಎಕರೆ ಜಮೀನು ಜಲಾವೃತ ಎಂಬ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿರುತ್ತಿರಿ. ಹಾಗಾದ್ರೆ ಈ ನಾಲಾಗೆ ಬಳ್ಳಾರಿ ಹೆಸರು ಹೇಗೆ ಬಂತು?, ಮತ್ತೆ ಅದು ಎಲ್ಲಿ ಉಗಮವಾಗಿ, ಎಲ್ಲಿ ಸಂಗಮವಾಗುತ್ತದೆ? ಎಂಬ ಕುರಿತ  ವಿಶೇಷ ವರದಿ ಇಲ್ಲಿದೆ. 

ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಹೊರ ವಲಯದಲ್ಲಿ ಒಂದು "ಅರವಳ್ಳಿ ಜಲಾಶಯ" ಅಂತಾ ಇದೆ. ರಾಜಹಂಸಗಡ ಗುಡ್ಡದ ಮೇಲಿಂದ ಹರಿದು ಬರುವ ನೀರು ಇಲ್ಲಿ ಸಂಗ್ರಹವಾಗುತ್ತದೆ. ಈ ಜಲಾಶಯ 12 ತಿಂಗಳು ತುಂಬಿರುತ್ತದೆ. ಇನ್ನು ಮಳೆಗಾಲದಲ್ಲಿ ತುಂಬಿ ಹೆಚ್ಚುವರಿ ನೀರು ಯಳ್ಳೂರು ಗ್ರಾಮದ ಮೂಲಕ ಮಚ್ಚೆ, ಮಜಗಾವಿ, ಅನಗೋಳದ ಕೃಷಿಭೂಮಿ ಮಾರ್ಗವಾಗಿ ಸುಮಾರು 106 ಕಿ.ಮೀ. ಕ್ರಮಿಸಿ ವಡಗಾವಿ-ಶಾಹಪುರ ಕೃಷಿ ಭೂಮಿ ಬಳಿಯ ಯಳ್ಳೂರ ರಸ್ತೆಯಲ್ಲಿರುವ ಸೇತುವೆಗೆ ಬಂದು ಸೇರುತ್ತದೆ. ಇದೇ ಬಳ್ಳಾರಿ ನಾಲಾ.