ಉಗರಗೋಳದ ಎಂಜಿನಿಯರ್ ನೇತೃತ್ವದಲ್ಲಿ ತಲೆ ಎತ್ತಿದ ಯಾತ್ರಿ ಸೇವಾ ಕೇಂದ್ರ

ಉಗರಗೋಳ 23:  ಅಯೋಧ್ಯೆಯಲ್ಲಿ ರಾಮನ ದರ್ಶನಕ್ಕೆ ಬರುವ ಭಕ್ತರಿಗಾಗಿ ಸುಸಜ್ಜಿತವಾದ ಯಾತ್ರಿ ಸೇವಾಕೇಂದ್ರ ನಿರ್ಮಿಸಲಾಗಿದೆ. ಈ ಕಾಮಗಾರಿಯ ಉಸ್ತುವಾರಿ ವಹಿಸಿದ್ದು ಉಗರಗೋಳ ಗ್ರಾಮದ ಸತೀಶ ಶಂಕರಗೌಡ ಹಿರೇಗೌಡ್ರ. 

ಈ ಬಗ್ಗೆ ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡ ಅವರು, ‘ನಾನು ದೇಶ ಹಾಗೂ ವಿದೇಶಗಳಲ್ಲಿ 43 ವರ್ಷಗಳಿಂದ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಈಗ ಅಯೋಧ್ಯೆಯಲ್ಲಿ ನನ್ನ ನೇತೃತ್ವದಲ್ಲೇ 33 ಸಾವಿರ ಚಡಿ ಅದರ ಪ್ರದೇಶದಲ್ಲಿ ಯಾತ್ರಿ ಸೇವಾಕೇಂದ್ರ ತಲೆ ಎತ್ತಿದೆ. ಇದು ಅಭಿಮಾನ ಮತ್ತು ಹೆಮ್ಮೆಯ ಸಂಗತಿ’ ಎಂದರು. 

‘ಈ ಕಾಮಗಾರಿ ಸವಾಲಿನಿಂದ ಕೂಡಿತ್ತು. ಅಲ್ಪ ಅವಧಿಯಲ್ಲೇ ಕಾಮಗಾರಿ ಮುಗಿಸಬೇಕಿತ್ತು. ನವೆಂಬರ್ 16ರಂದು ಕರ್ತವ್ಯಕ್ಕೆ ನಿಯೋಜನೆಗೊಂಡ ದಿನದಿಂದ ಹಗಲಿರುಳು ದುಡಿದೆವು. ಕಾರ್ಮಿಕರು ಪ್ರತಿದಿನ 16ರಿಂದ 17 ತಾಸು ದುಡಿದರು. ಅವರೆಲ್ಲರ ಪ್ರಯತ್ನದಿಂದಾಗಿ ಎರಡು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಿ, ರಾಮ ಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಿದ್ದೇವೆ‘ ಎಂದರು. 

'ಅಯೋಧ್ಯೆಗೆ ಬರುವ ಪ್ರತಿ ಭಕ್ತರು ಆರಂಭದಲ್ಲಿ ಇಲ್ಲಿಯೇ ಬರಬೇಕು. ಅವರಿಗೆ ಇಲ್ಲಿ ಶೌಚಗೃಹ, ಸ್ನಾನಗೃಹ, ಉಪಾಹಾರ ಗೃಹ, ವಿಐಪಿ ಲಾಂಜ್ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಕಿತ್ಸೆ ನೀಡಲು ವೈದ್ಯರನ್ನು ನೇಮಿಸಲಾಗಿದೆ. ಇಲ್ಲಿಂದ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯಬಹುದು. ಇಲ್ಲಿಗೆ ಮರಳಿದ ನಂತರವೇ ತಮ್ಮೂರಿನತ್ತ ಹೊರಡಬಹುದು’ ಎಂದರು. 

ನಾವು ಯಲ್ಲಮ್ಮಾ ದೇವಿಯ ಅರ್ಚಕರು ನಮ್ಮ ಕುಟುಂಬದ ಸದಸ್ಯರೊಬ್ಬರು ಅಯೋಧ್ಯಯಲ್ಲಿ ಕಾರ್ಯನಿರ್ವಹಿಸುವದಕ್ಕೆ ಸಂತೋಷವಾಗಿದೆ ಎಂದು ಶಿಕ್ಷಕ ಬಸವರಾಜ ಹಿರೇಗೌಡ್ರ ಸಂತೋಷ ಹಂಚಿಕೊಂಡರು.