ಡಾ. ಸರೋಜಿನಿ ಶಿಂತ್ರಿ ವ್ಯಕ್ತಿತ್ವಕ್ಕೆ ಸ್ಮರಣಾ ನಮನ
A Tribute to the Personality of Dr. Sarojini Shintri
ಲೋಕದರ್ಶನ ವರದಿ
ಧಾರವಾಡ 05 : ಶತಮಾನಗಳಿಂದ ಶೋಷಣೆಗೆ ಒಳಪಟ್ಟು ಕತ್ತಲಿನಲ್ಲಿಯೇ ಬದುಕು ಸಾಗಿಸುತ್ತಿದ್ದ ಮಹಿಳೆಯರ ಪರವಾಗಿ ಗಟ್ಟಿ ಧ್ವನಿ ಎತ್ತಿದ ಧೀಮಂತ ಮಹಿಳೆ ಡಾ. ಸರೋಜಿನಿ ಶಿಂತ್ರಿ. ಅವರು ಸ್ತ್ರೀಕುಲಕ್ಕೆ ಸ್ಥೂರ್ತಿಯ ಸೆಲೆಯಾಗಿದ್ದರು ಎಂದು ಲೇಖಕಿ ಸರಸ್ವತಿ ಭೋಸಲೆ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ಸರೋಜಿನಿ ಶಿಂತ್ರಿ ಸಂಸ್ಮರಣೆ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಡಾ. ಸರೋಜಿನಿ ಶಿಂತ್ರಿ ಅವರ ವ್ಯಕ್ತಿತ್ವ’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆ ಎಂಬಂತೆ ಡಾ. ಸರೋಜಿನಿ ಶಿಂತ್ರಿಯವರ ವ್ಯಕ್ತಿತ್ವ ನಿರ್ಮಾಣವಾದದ್ದೇ ಮನೆಯಲ್ಲಿ. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು ಮಗಳಿಗೆ ಒಳ್ಳೆಯ ಸಂಸ್ಕಾರ ನೀಡಿದರು. ಆ ಕಾಲದಲ್ಲಿ ಮಹಿಳೆ ಶಿಕ್ಷಣ ಪಡೆಯುವುದೇ ಅಪರೂಪವಾಗಿತ್ತು. ಇಂಥ ಕಾಲಘಟ್ಟದಲ್ಲಿ ಸಂಪ್ರದಾಯ ಮೀರಿ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿದರು. ಹೆಣ್ಣು ಮಕ್ಕಳೇ ನಮ್ಮ ಆಸ್ತಿ ಎಂದು ಬೆಳೆಸಿದರು. ಬಾಲ್ಯದಲ್ಲಿ ಡಾ. ಸರೋಜಿನಿ ಶಿಂತ್ರಿ ಆಂಗ್ಲ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು.
ಮುಂದೆ ಕರ್ನಾಟಕ ಮಹಾವಿದ್ಯಾಲಯದಲ್ಲಿ ಓದಿ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ಡಾ. ವಿ. ಕೃ. ಗೋಕಾಕರ ನೆಚ್ಚಿನ ಶಿಷ್ಯೆಯಾದರು. ಪ್ರೊ. ಅರ್ಮೆಂಡೋ ಮೆನಜಿಸ್‌ರ ಮಾರ್ಗದರ್ಶನದಲ್ಲಿ ಶೇಕ್ಸಫಿಯರನ ನಾಟಕದಲ್ಲಿ ಸ್ತ್ರೀ ವಿಷಯ ಕುರಿತು ಪಿ.ಎಚ್.ಡಿ. ಪದವಿ ಪಡೆದರು. ಕ.ವಿ.ವಿ.ಯಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕಿಯಾಗಿ ವಿಭಾಗದ ಮುಖ್ಯಸ್ಥರಾಗಿ 40 ವರ್ಷ ಅಖಂಡ ಸೇವೆ ಸಲ್ಲಿಸಿದರು. ಉತ್ತರ ಕರ್ನಾಟಕ ಲೇಖಕಿಯರ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದರು. ನೇರನುಡಿಯ ಅವರು ಹೃದಯವಂತರೂ, ದಾನಗುಣ ಉಳ್ಳವರೂ ಆಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ.ಸಂಘದ ಕಾರ‌್ಯಕಾರಿ ಸಮಿತಿ ಸದಸ್ಯೆ, ಪ್ರಾಧ್ಯಾಪಕಿ ಡಾ. ಶೈಲಜಾ ಅಮರಶೆಟ್ಟಿ ಮಾತನಾಡಿ, ಮಹಿಳೆಯರಿಗೆ ಪಾಲಕರು ಎಲ್ಲಾ ರೀತಿಯ ಸಹಕಾರ ನೀಡಿದಾಗ ಮಾತ್ರ ಸಾಧಕರಾಗಬಹುದು. ಡಾ. ಸರೋಜಿನಿ ಶಿಂತ್ರಿಯವರಿಗೆ ತಂದೆಯೇ ಸ್ಥೂರ್ತಿ. ಅವರು ಅನೇಕ ಪ್ರಥಮಗಳ ಸಾಧಕಿಯಾಗಿದ್ದರು. ಗಂಭೀರ ವ್ಯಕ್ತಿತ್ವದ, ನೇರ, ದಿಟ್ಟ ಸ್ವಭಾವದವರಾಗಿದ್ದರು. ಅವರು ಮಹಿಳಾ ಲೋಕಕ್ಕೊಂದು ಧ್ರುವತಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಡಾ. ಸರೋಜಿನಿ ಶಿಂತ್ರಿ ಟ್ರಸ್ಟ್ ಪರವಾಗಿ ದೊಡ್ಡಬಸಪ್ಪ ಬೆಳವಗಿ ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಸಿದರು. ಶಂಕರ ಕುಂಬಿ ನಿರ್ವಹಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಂದಾಕಿನಿ ಪುರೋಹಿತ, ಸುಮಂಗಲಾ ಮುಮ್ಮಿಗಟ್ಟಿ ಸೇರಿದಂತೆ ಶಿಂತ್ರಿಯವರ ಅಭಿಮಾನಿಗಳು, ಪರಿವಾರದವರು, ಟ್ರಸ್ಟ್ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 