ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಗುರುವಂದನೆ : ಯಾಳವಾರದಲ್ಲಿ ಸುವರ್ಣ ಮಹೋತ್ಸವ ಸಂಭ್ರಮ

ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಗುರುವಂದನೆ : ಯಾಳವಾರದಲ್ಲಿ  ಸುವರ್ಣ ಮಹೋತ್ಸವ ಸಂಭ್ರಮ A Tribute to Teachers Marked by Emotional Moments: Golden Jubilee Celebrations in Yalavara

ದೇವರಹಿಪ್ಪರಗಿ ಜು. 7: ತಾಲೂಕಿನ ಯಾಳವಾರ ಗ್ರಾಮದ ಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.  ವಿದ್ಯಾರ್ಥಿಗಳ ಬದುಕಿಗೆ ಭದ್ರ ಅಡಿಪಾಯ ಹಾಕಿ, ಅಕ್ಷರ ಜ್ಞಾನ ನೀಡಿ ಜೀವನ ರೂಪಿಸಿದ ಸಂಸ್ಥೆಯ ಆವರಣದಲ್ಲಿ ನಡೆದ ಐತಿಹಾಸಿಕ ಸುವರ್ಣ ಮಹೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮದಲ್ಲಿ ಶಾಲೆಯ ಮೊದಲನೇ ತಲೆಮಾರಿನ ಶಿಕ್ಷಕರನ್ನು ಭಕ್ತಿಭಾವದಿಂದ ಪಾದಪೂಜೆ ನೆರವೇರಿಸಿ ಗೌರವಿಸಲಾಯಿತು.  

ಇದೇ ಸಂದರ್ಭದಲ್ಲಿ ಅಗಲಿದ ಗುರುಗಳ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಸಾವಿರಾರು ಹಳೆಯ ವಿದ್ಯಾರ್ಥಿಗಳು ಒಂದಾಗಿ ಗುರುಗಳಿಗೆ ಗೌರವ ನಮನ ಸಲ್ಲಿಸಿದರು. ಹಿರಿಯ ನಿವೃತ್ತ ಮುಖ್ಯ ಶಿಕ್ಷಕರಾದ ಎಂ.ಡಿ. ಬಳಿಗಾರ ಹಾಗೂ ಎಂ.ಬಿ. ಬಿರಾದಾರ ಅವರಿಂದ ಗೌರವ ಸ್ವೀಕರಿಸಿ ಮಾತನಾಡಿದ ಗಣ್ಯರು, ಯಾಳವಾರದ ಪ್ರೌಢಶಾಲೆಯು ವಿಜಯಪುರ ಜಿಲ್ಲೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು, ಈ ನಾಡಿಗೆ ಹಲವು ಪ್ರತಿಭಾವಂತರನ್ನು ನೀಡಿದೆ ಎಂದು ಹೇಳಿದರು.  

ಸಂಸ್ಥೆಯು ಶಿಕ್ಷಣದ ಜೊತೆಗೆ ಸಂಸ್ಕಾರಯುತ ಬದುಕಿನ ಮೌಲ್ಯಗಳನ್ನು ಕಲಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.  ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಿ. ಸಿದ್ದನಗೌಡ ಗು. ನಾಡಗೌಡ್ರ ಹಾಗೂ ಎಲ್ಲ ಸ್ಥಾಪಕರು, ಅಂದಿನ ಮುಖ್ಯ ಶಿಕ್ಷಕರು ಮತ್ತು ಬೋಧಕ ವರ್ಗದವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಗುರು ವಂದನೆಯ ಮೂಲಕ ವಿದ್ಯಾರ್ಥಿಗಳು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದರು.  

ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ ಮಾತನಾಡಿ, ಕಾರ್ಯಕ್ರಮವು "ನಾ ಭೂತೋ, ನಾ ಭವಿಷ್ಯತಿ" ಎಂಬಂತೆ ವಿಶೇಷವಾಗಿ ನೆರವೇರಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ​‍್ಿಸಿದರು.  ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸವಿ ನೆನಪುಗಳನ್ನು ಹಂಚಿಕೊಂಡರು. ಹಳೆಯ ಸ್ನೇಹಿತರ ಪುನರ್ಮಿಲನವೂ ನಡೆಯಿತು.  ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಿ.ಎಸ್‌. ನಾಡಗೌಡ ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.