53 ಲಕ್ಷ ಟನ್ ಆಹಾರ ಧಾನ್ಯ ನಿರ್ವಹಣೆ: ಎಫ.ಸಿ.ಐ ಕಾರ್ಯಕ್ಕೆ ಕಡಾಡಿ ಮೆಚ್ಚುಗೆ
53 lakh tonnes of food grains managed: Kadadi praises FCI's work
ಲೋಕದರ್ಶನ ವರದಿ
ಬೆಳಗಾವಿ 25: ಸುರಕ್ಷಿತ ಸಾಗಣೆ, ಶೂನ್ಯ ಹಾನಿ ಹಾಗೂ ಕನಿಷ್ಠ ಸಂಗ್ರಹಣಾ ಮತ್ತು ಸಾಗಾಣಿಕೆ ನಷ್ಟ ದಾಖಲಿಸುವ ಮೂಲಕ ಗುಣಮಟ್ಟ ನಿರ್ವಹಣೆಯಲ್ಲಿ ಭಾರತೀಯ ಆಹಾರ ನಿಗಮದ (ಎಫ್.ಸಿ.ಐ) ಕರ್ನಾಟಕ ಪ್ರದೇಶವು ಅತ್ಯುತ್ತಮ ಸಾಧನೆ ಮಾಡಿದೆ ಎಂದು ರಾಜ್ಯ ಮಟ್ಟದ ಸಲಹಾ ಸಮಿತಿ (ಎಸ್.ಎಲ್.ಸಿ) ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಶ್ಲಾಘಿಸಿದರು. ನಗರದ ಫೇರ್ ಫೀಲ್ಡ್ ಮ್ಯಾರಿಯೊಟ್ ಹೊಟೇಲ್ನಲ್ಲಿ ಗುರುವಾರ ನಡೆದ ಭಾರತೀಯ ಆಹಾರ ನಿಗಮದ ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಕರ್ನಾಟಕ ಪ್ರದೇಶದ 2025-26ನೇ ಸಾಲಿನ ಕಾರ್ಯಚಟುವಟಿಕೆಗಳ ಪರೀಶೀಲನೆ ನಡೆಸಿ ಅವರು ಮಾತನಾಡಿದರು. ಆಹಾರ ಧಾನ್ಯಗಳ ಸಂಗ್ರಹಣೆ, ಸಾಗಣೆ ಮತ್ತು ಗುಣಮಟ್ಟದ ನಿರ್ವಹಣೆಯಲ್ಲಿ ಕರ್ನಾಟಕ ವಿಭಾಗವು ಕೇಂದ್ರ ಕಚೇರಿ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಕಟ್ಟುನಿಟ್ಟಿನ ಮಾನದಂಡಗಳನ್ನು ಸಮರ್ಕವಾಗಿ ಪಾಲಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐದು ವರ್ಷಗಳಿಂದ ಶೂನ್ಯ ಹಾನಿ ಸಾಧನೆ:
ಬೃಹತ್ ಪ್ರಮಾಣದ ಆಹಾರ ಧಾನ್ಯಗಳನ್ನು ನಿರ್ವಹಿಸುತ್ತಿದ್ದರೂ ಕಳೆದ ಐದು ವರ್ಷಗಳಲ್ಲಿ ಧಾನ್ಯಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ಹಾನಿ ಅಥವಾ ಕೊರತೆ ದಾಖಲಾಗಿಲ್ಲ. ವೈಜ್ಞಾನಿಕ ಸಂಗ್ರಹಣೆ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಯಿಂದಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ನಿರಂತರ ಹಾಗೂ ವಿಶ್ವಾಸಾರ್ಹ ಪೂರೈಕೆ ಸಾಧ್ಯವಾಗಿದೆ.
ಸಂಗ್ರಹಣೆ ಹಾಗೂ ಸಾಗಾಣಿಕೆ ಹಂತಗಳಲ್ಲಿ ನಷ್ಟವನ್ನು ಗಣನೀಯವಾಗಿ ತಗ್ಗಿಸಿರುವುದು ಕರ್ನಾಟಕ ಪ್ರದೇಶದ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದರು.
52.91 ಲಕ್ಷ ಮೆಟ್ರಿಕ್ ಟನ್ ವಿತರಣೆ: ಕಳೆದ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಪಿಎಂ ಪೋಷಣ್ (ಬಿಸಿಯೂಟ), ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ವಿದ್ಯಾರ್ಥಿ ನಿಲಯಗಳು ಸೇರಿದಂತೆ ವಿವಿಧ ಯೋಜನೆಗಳಡಿ ರಾಜ್ಯದಲ್ಲಿ ಒಟ್ಟು 52,91 ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ.
54.54 ಲಕ್ಷ ಮೆಟ್ರಿಕ್ ಟನ್ ಸಾಗಾಣಿಕೆ: ರಾಜ್ಯದ ಅಗತ್ಯತೆಗಳನ್ನು ಪೂರೈಸಲು ಹೆಚ್ಚುವರಿ ಉತ್ಪಾದನಾ ರಾಜ್ಯಗಳಿಂದ 54,53,948 ಮೆಟ್ರಿಕ್ ಟನ್ ಅಕ್ಕಿ ಮತ್ತು ಗೋಧಿಯನ್ನು ರೈಲ್ವೆ ಮೂಲಕ ಕರ್ನಾಟಕಕ್ಕೆ ಸುರಕ್ಷಿತವಾಗಿ ತರಿಸಲಾಗಿದೆ.
ಹೆಚ್ಚಲಿರುವ ಸಂಗ್ರಹಣಾ ಸಾಮರ್ಥ್ಯ: ಸದ್ಯ ರಾಜ್ಯದಲ್ಲಿ ಎಫ್ ಸಿಐಯು 61 ಗೋದಾಮುಗಳ ಮೂಲಕ 10.68 ಲಕ್ಷ ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಹೆಚ್ಚುವರಿಯಾಗಿ 2.45 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ನೂತನ ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಬೆನಕನಹಳ್ಳಿ ಗೋದಾಮಿಗೆ ಭೇಟಿ, ಪರೀಶೀಲನೆ:
ಸಭೆಯ ಬಳಿಕ ಇದೇ ಸಂದರ್ಭದಲ್ಲಿ ಸಂಸದ ಈರಣ್ಣ ಕಡಾಡಿ ಅವರು ಬೆಳಗಾವಿ ತಾಲೂಕಿನ ಬೆನಕನಹಳ್ಳಿಯಲ್ಲಿರುವ ಭಾರತೀಯ ಆಹಾರ ನಿಗಮದ (ಎಫ್ ಸಿಐ) ಬೃಹತ್ ಗೋದಾಮಿಗೆ ಖುದ್ದಾಗಿ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಗೋದಾಮಿನಲ್ಲಿ ಆಹಾರ ಧಾನ್ಯಗಳ ಸಂಗ್ರಹಣೆ, ಅವುಗಳ ಸುರಕ್ಷತೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಧಾನ್ಯಗಳನ್ನು ವಿತರಿಸುವ ನಿಖರವಾದ ನಿರ್ವಹಣಾ ಪದ್ಧತಿಯನ್ನು ಹತ್ತಿರದಿಂದ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಧಾನ್ಯಗಳ ಗುಣಮಟ್ಟ ಕಾಯ್ದುಕೊಳ್ಳಲು ಕೈಗೊಂಡಿರುವ ವೈಜ್ಞಾನಿಕ ಕ್ರಮಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾರತೀಯ ಆಹಾರ ನಿಗಮದ ಜನರಲ್ ಮ್ಯಾನೇಜರ್ ಬಿ. ಓ. ಮಹೇಶ್ವರ್ಪ, ಸಹಾಯಕ ಜನರಲ್ ಮ್ಯಾನೇಜರ್ ರಮೇಶ ನಾಯಕ, ಬೆಳಗಾವಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ್, ಸಲಹಾ ಸಮಿತಿ ಸದಸ್ಯರಾದ ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ, ಸುನಿತಾ ಜಗದೀಶ್, ಶಂಕರಣ್ಣ ಮುನ್ನೋಳಿ, ಶಶಿಧರ, ಮಂಜುನಾಥ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಆಹಾರ ಇಲಾಖೆಯ ಪ್ರತಿನಿಧಿಗಳು ಹಾಗೂ ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 