ಪಂಢರಪುರ ಸೈಕಲ್ ವಾರಿಯಲ್ಲಿ ವಿಜಯಪುರದ 40 ಸೈಕ್ಲಿಸ್ಟ್ಗಳ ಭಾಗವಹಿಸಿದ್ದರು
ವಿಜಯಪುರ 14: ಆಷಾಢ ಏಕಾದಶಿ ನಿಮಿತ್ತ ದೇಶದ ವಿವಿಧ ಭಾಗಗಳಿಂದ ಪಂಢರಪುರಕ್ಕೆ ಸೈಕಲ್ ಮೂಲಕ ತೆರಳುವ ‘ಸೈಕಲ್ ವಾರಿ’ ಕಾರ್ಯಕ್ರಮ ಈ ವರ್ಷವೂ ಸಂಭ್ರಮದಿಂದ ನಡೆಯಿತು. ವಿಜಯಪುರ ಸೈಕ್ಲಿಂಗ್ ಗ್ರೂಪ್ನ 40 ಸದಸ್ಯರು ಸುಮಾರು 100 ಕಿ.ಮೀ. ಸೈಕಲ್ ಸವಾರಿ ಮಾಡಿ ಪಂಢರಪುರ ತಲುಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಪಂಢರಪುರದ ವಿಠ್ಠಲ ದರ್ಶನಕ್ಕೆ ತೆರಳುವುದು ಸಂಪ್ರದಾಯವಾಗಿದೆ.
ಕಳೆದ ಕೆಲ ವರ್ಷಗಳಿಂದ ಸೈಕ್ಲಿಂಗ್ ಪ್ರಿಯರು ಇದೇ ಸಂಪ್ರದಾಯವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ‘ಸೈಕಲ್ ವಾರಿ’ ಆಯೋಜಿಸುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಸೈಕ್ಲಿಸ್ಟ್ಗಳು ತಮ್ಮ ಊರುಗಳಿಂದಲೇ ಸೈಕಲ್ ಮೂಲಕ ಪಂಢರಪುರಕ್ಕೆ ಆಗಮಿಸುತ್ತಾರೆ. ಜುಲೈ 11 ಮತ್ತು 12ರಂದು ನಡೆದ ಈ ವರ್ಷದ ಸೈಕಲ್ ವಾರಿಯಲ್ಲಿ ದೇಶದಾದ್ಯಂತದಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ಸೈಕ್ಲಿಸ್ಟ್ಗಳು ಪಾಲ್ಗೊಂಡಿದ್ದರು. ಪಂಢರಪುರದಲ್ಲಿ ಸೈಕ್ಲಿಸ್ಟ್ಗಳ ಸಮಾವೇಶ, ಅನುಭವ ವಿನಿಮಯ ಕಾರ್ಯಕ್ರಮ ಹಾಗೂ ನಗರ ಪ್ರದಕ್ಷಿಣೆಯ ನಂತರ ಸೈಕಲ್ ರಿಂಗ್ (ವೃತ್ತಾಕಾರ ಸೈಕಲ್ ಪ್ರದರ್ಶನ) ಆಯೋಜಿಸಲಾಯಿತು.
ವಿಜಯಪುರದ ಬಿ.ಎಂ. ಪಾಟೀಲ ವೃತ್ತದಿಂದ ಆರಂಭವಾದ ಸೈಕಲ್ ವಾರಿಗೆ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್ (ವಿಸಿಜಿ) ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ವಿಸಿಜಿಯ ವಾರ್ಷಿಕ ಕ್ಯಾಲೆಂಡರ್ನಲ್ಲಿ ಪಂಢರಪುರ ಸೈಕಲ್ ವಾರಿಗೆ ವಿಶೇಷ ಸ್ಥಾನ ನೀಡಲಾಗಿದೆ. ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲಿಸ್ಟ್ಗಳು ಭಾಗವಹಿಸಬೇಕು ಎಂದು ಕರೆ ನೀಡಿದರು.
ವಿಸಿಜಿಯ ಪ್ರಮುಖ ವಾರ್ಷಿಕ ಕಾರ್ಯಕ್ರಮಗಳಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸುವ 42 ಕಿ.ಮೀ. ರನ್ ಹಾಗೂ ಡಿಸೆಂಬರ್ ಎರಡನೇ ಭಾನುವಾರ ನಡೆಯುವ ವೃಕ್ಷೋಥಾನ್ ಕೂಡ ಸೇರಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಡಾ. ಮುರುಗೇಶ್ ಪಟ್ಟಣಶೆಟ್ಟಿ, ವಿಠ್ಠಲ ತೇಲಿ, ರಾಜಶೇಖರ ಸಜ್ಜನ, ಪ್ರಕಾಶ ಕನ್ನೂರ, ಶಾಂತಪ್ಪ ದೇಶಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ ನೇತೃತ್ವದಲ್ಲಿ ನಡೆದ ಸೈಕಲ್ ವಾರಿಯಲ್ಲಿ ಡಾ. ರವಿ ಚೌಧರಿ, ಡಾ. ಮಹಾಂತೇಶ ಜಾಲಗೇರಿ, ಡಾ. ರಾಜು ಯಲಗೊಂಡ, ಡಾ. ರವಿ ಸಂಕ, ಸೋಮಶೇಖರ ಸ್ವಾಮಿ, ವಿರೇಂದ್ರ ಗುಚ್ಚಟ್ಟಿ, ಅನೀಲ ಧಾರವಾಡಕರ, ಸಿದ್ದು ನಾಯಕೋಡಿ, ಚಂದ್ರಹಾಸ ಬಣ್ಣದ, ಸಂತೋಷ ಸಜ್ಜನ, ಮಹೇಶ್ ಆಲಮೇಲ, ಮುರುಗೇಶ್ ಅಲಬಾಳ, ಅಂಬರೀಷ ಭೈರಗೊಂಡ ಸೇರಿದಂತೆ ಅನೇಕ ಸೈಕ್ಲಿಸ್ಟ್ಗಳು ಭಾಗವಹಿಸಿದ್ದರು.