ಚುನಾವಣಾ ಕರ್ತವ್ಯದಲ್ಲಿ 24*7 ಕಾರ್ಯನಿರತ ಕಂಟ್ರೋಲ್ ರೂಂ

ಕಾರವಾರ 11: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂದಿಸಿದಂತೆ, ಜಿಲ್ಲೆಯಲ್ಲಿ ಸುಗಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ತೆರಿದಿರುವ ಕಂಟ್ರೋಲ್ ರೂಂ ನಲ್ಲಿ 24*7 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಚುನಾವಣಾ ವ್ಯವಸ್ಥೆ ವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಅಗತ್ಯವಿರುವ ಎಲ್ಲಾ ಕಾರ್ಯಗಳನ್ನು ಮಾಡಲಾಗುತ್ತಿದೆ. 

 ಸೀ ವಿಜಿಲ್ ತಂಡ : ಈ ತಂಡದಲ್ಲಿ 24*7 ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಚುನಾವಣಾ ಅಕ್ರಮಗಳ ಕುರಿತು ಸಲ್ಲಿಕೆಯಾಗುವ ದೂರುಗಳ ಬಗ್ಗೆ 100 ನಿಮಿಷಗಳ ಒಳಗೆ ಸೂಕ್ತ ಕ್ರಮಗೊಳ್ಳಲು ಸಹಕರಿಸುತ್ತಿದ್ದು, ಇದುವರೆಗೆ 225 ಕ್ಕೂ ಅಧಿಕ ದೂರುಗಳ ವಿಲೇವಾರಿ ಮಾಡಲಾಗಿದೆ. 

ಉಚಿತ ಸಹಾಯವಾಣಿ 1950 ತಂಡ :  ಈ ತಂಡದಲ್ಲಿ ಕೂಡ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಾರ್ವಜನಿಕರ ಯಾವುದೇ ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರ ಒದಗಿಸುತ್ತಿದ್ದು ಇದುವರೆಗೆ 325 ಕ್ಕೂ ಅಧಿಕ ದೂರುಗಳ ವಿಲೇವಾರಿ ಮಾಡಲಾಗಿದೆ. 

ಚೆಕ್ ಪೋಸ್ಟ್‌ ಪರೀಶೀಲನೆ ತಂಡ : ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು 25 ಚೆಕ್ ಪೋಸ್ಟ್‌ ಗಳನ್ನು ತೆರೆಯಲಾಗಿದ್ದು, ಈ ಎಲ್ಲಾ ಚೆಕ್ ಪೋಸ್ಟ್‌ ಗಳಿಗೆ ಸಿಸಿಟಿವಿಗಳನ್ನು ಅಳವಡಿಸಿದ್ದು, ಸಿಬ್ಬಂದಿಗಳು ಸಮರ​‍್ಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮತ್ತು ಸೂಕ್ತ ರೀತಿಯಲ್ಲಿ ತಪಾಸಣಾ ಕಾರ್ಯಗಳನ್ನು ನಡೆಸುತ್ತಿರುವ ಬಗ್ಗೆ 24*7 ಪರೀಶೀಲನೆ ನಡೆಸಲಾಗುತ್ತಿದೆ. 

ಜಿಪಿಎಸ್ ವಾಹನಗಳ ಪರೀಶೀಲನೆ ತಂಡ : ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಮರ​‍್ಕವಾಗಿ ಕೆಲಸ ನಿರ್ವಹಿಸುತ್ತಿರುವ ಕುರಿತಂತೆ ಪರೀಶೀಲಿಸುವ ಈ ತಂಡ ಯಾವ ಅಧಿಕಾರಿಗಳ ವಾಹನ ಯಾವ ಪ್ರದೇಶದಲ್ಲಿ ಸಂಚರಿಸುತ್ತಿದೆ ಎಂಬ ಬಗ್ಗೆ ನಿರಂತರವಾಗಿ 24*7 ಪರೀಶೀಲನೆ ನಡೆಸುತ್ತಿದ್ದಾರೆ. 

ವೀಡಿಯೋ ವ್ಯೂವಿಂಗ್ ತಂಡ : ಪ್ರಮುಖ ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು 3 ಪಾಳಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ವೀಕ್ಷಿಸುತ್ತಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ವೀಡಿಯೋ ಪ್ರಸಾರವಾದಲ್ಲಿ ಈ ಬಗ್ಗೆ ನಿಗಧಿತ ರಿಜಿಸ್ಟ್ರರ್ ನಲ್ಲಿ ದಾಖಲಿಸಿ ಸಂಬಂದಿಸಿದ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡುತ್ತಿದ್ದಾರೆ.  

ಮೀಡಿಯಾ ಸ್ಕೃಟಿನಿ ತಂಡ : ಜಿಲ್ಲೆಯ ಎಲ್ಲಾ ದಿನಪತ್ರಿಕೆಗಳಲ್ಲಿ ಪ್ರಸಾರವಾಗುವ ಚುನಾವಣಾ ಸಂಬಂದಿತ ಸುದ್ದಿಗಳು, ಜಾಹಿರಾತುಗಳ ಬಗ್ಗೆ ನಿಗಾವಹಿಸಿರುವ  ಈ ತಂಡ, ಎಲ್ಲಾ ಪತ್ರಿಕಾ ವರದಿಗಳನ್ನು ಸಂಗ್ರಹಿಸಿ ಸಂಬಂದಪಟ್ಟ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. 

ಸಿಂಗಲ್ ವಿಂಡೋ ಅನುಮತಿ ತಂಡ: ಚುನಾವಣೆಗೆ ಸಂಬಂದಿಸಿದಂತೆ ವಿವಿಧ ರೀತಿಯ ಅನುಮತಿಗಳಿಗಾಗಿ ಅರ್ಜಿ ಸಲ್ಲಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಅಗತ್ಯವಿರುವ ಅನುಮತಿಯನ್ನು ನೀಡುವ ಉದ್ದೇಶದಿಂದ ರಚನೆಯಾಗಿರುವ ಈ ತಂಡದ ಮೂಲಕ , ವಿವಿಧ ಅನುಮತಿಗಳನ್ನು ಒಂದೇ ಸ್ಥಳದಲ್ಲಿ ಒದಗಿಸಲಾಗುತ್ತಿದೆ. 

ಎಂಸಿಎಂಸಿ ತಂಡ : ದೈನಂದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಚುನಾವಣಾ ಸಂಬಂದಿತ ಜಾಹೀರಾತುಗಳು ಮತ್ತು ಪೇಯ್ಡ್‌ ನ್ಯೂಸ್ ಗಳ ಕುರಿತು ಪರೀಶೀಲನೆ ನಡೆಸುವ ಈ ತಂಡ, ಜಾಹೀರಾತುಗಳು ಮತ್ತು ಪೇಯ್ಡ್‌ ನ್ಯೂಸ್ ಕುರಿತ ವೆಚ್ಚವನ್ನು ಅಂದಾಜಿಸಿ ಸಂಬಂದಪಟ್ಟ ಅಭ್ಯರ್ಥಿಯ ವೆಚ್ಚದ ಖಾತೆಗೆ ಸೇರಿಸಲು ವರದಿ ನೀಡುವ ಜೊತೆಗೆ, ಸಾಮಾಜಿಕ ಜಾಲತಾಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಪ್ರಕಟವಾಗುವ ಕುರಿತು ಸಲ್ಲಿಕೆಯಾಗುದ ದೂರುಗಳ ಬಗ್ಗೆ ಪರೀಶೀಲನೆ ನಡೆಸುತ್ತಿದೆ. ಅಲ್ಲದೇ ಪತ್ರಿಕೆ,  ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಲು ಅಗತ್ಯ ಅನುಮತಿಯನ್ನು ಹಾಗೂ ಪ್ರಕಟಪಡಿಸುವ ಜಾಹೀರಾತುಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಅಂಶಗಳು ಇಲ್ಲದ ಹಾಗೆ ಕೂಲಂಕುಷ ಪರೀಶೀಲನೆಯನ್ನು ಕೂಡಾ ನಡೆಸುತ್ತಿದೆ. 

ಜಿಲ್ಲೆಯಲ್ಲಿ ಚುನಾವಣಾ ಕಾರ್ಯಗಳು ಸರಳವಾಗಿ ಮತ್ತು ಸುಗಮವಾಗಿ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಕಂಟ್ರೋಲ್ ರೂಂ ನಲ್ಲಿ ವಿವಿಧ  ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಹಲವು ತಂಡಗಳನ್ನು ನಿಯೋಜಿಸಲಾಗಿದೆ. ಈ ಎಲ್ಲಾ ತಂಡಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ಸುಗಮ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಅಗತ್ಯ ನೆರವು ನೀಡುತ್ತಿವೆ: ಗಂಗೂಬಾಯಿ ಮಾನಕರ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು.