ಸಾಧನೆಯ ಶಿಖರವೇರಿದ ಹಿರಿಯ ಸಂಗೀತ ಕಲಾವಿದೆ ಮಂಜುಳಾ ಜೋಶಿ

ಭಾರತವು ಸಂಗೀತದ ತವರೂರಾಗಿದ್ದು, ಭಾರತೀಯ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೆ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತಪಡಿಸುವ ವಿಚಾರದಲ್ಲಿ ಹಿಂದುಸ್ಥಾನಿ ಮತ್ತು ಕರ್ನಾಟಕಿ ಸಂಗೀತ ಈ ಎರಡು ಪ್ರಕಾರಗಳು ಭಿನ್ನವಾಗಿ ಕವಲೊಡೆದಿವೆ. ಸಂಗೀತವು ಹಲವಾರು ಶೈಲಿಗಳನ್ನು ಹೊಂದಿದ್ದು, ಭಾಂಗ್ರಾ, ಭಜನೆ, ಭಕ್ತಿಗೀತೆ, ಗಝಲ್, ಕವ್ವಾಲಿ, ಇಂಡಿ-ಪಾಪ್, ಜನಪದ, ಸಿನಿಮಾ ಹಾಡುಗಳು,  ಸುಗಮ ಸಂಗೀತ, ರಿಮಿಕ್ಸ್, ಪ್ಯೂಶನ್ ಹೀಗೆ ಮುಂತಾದ ವೈವಿಧ್ಯಮಯ ಶೈಲಿಗಳನ್ನು ಒಳಗೊಂಡಿವೆ.

  ಸಂಗೀತದಲ್ಲಿ ಎರಡು ಸ್ವರೂಪದ ಸಂಗೀತಗಳಿವೆ ಮೊದಲನೆಯದು ನಮ್ಮ ಧ್ವನಿಯಿಂದ ಹೊರಡುವ ಸಂಗೀತ. ಇನ್ನೊಂದು ಶಬ್ದಾತೀತವಾದದ್ದು, ಅದು ಪ್ರಕೃತಿಯಲ್ಲಿ ಅಂತರ್ಗತವಾಗಿರುವ ಸಂಗೀತವಾಗಿದ್ದು, ಹಕ್ಕಿಗಳ ಇಂಚರದಲ್ಲಿ ಹರಿಯುವ ನೀರಲ್ಲಿ, ಭ್ರಮರದ ಝೇಂಕಾರದಲ್ಲಿ, ಮುನಿಗಳ ಓಂಕಾರದಲ್ಲಿ ಸಂಗೀತವಿದೆ. ಹೀಗಾಗಿ ಸಂಗೀತಕ್ಕೆ ಪ್ರಕೃತಿಯೇ ತಾಯಿ ಎಂದರೆ ತಪ್ಪಾಗಲಾರದು. 

    ಸಂಗೀತ ಲೋಕ ಬಹಳ ವಿಶಾಲವಾಗಿದ್ದು, ಸಾಗರದಷ್ಟು ಆಳ-ಅಗಲ ಹಾಗೂ ಆಗಸದಷ್ಟು ವಿಸ್ತಾರವಾಗಿದೆ. ಸಂಗೀತ ಕಲಿಯುವ, ಕಲಿಸುವ ವ್ಯವಸ್ಥೆ ಪರಂಪರಾಗತವಾಗಿ ನಮ್ಮಲ್ಲಿದ್ದು ಈ ನಿಟ್ಟಿನಲ್ಲಿ ಅನೇಕ ದಿಗ್ಗಜರು ಪ್ರಾತ:ಸ್ಮರಣೀಯರಾಗಿದ್ದು, ಅಂತವರ ಸಾಲಿನಲ್ಲಿ ಪಂ.ಶೇಷಗಿರಿ ದಂಡಾಪೂರ, ಪಂ.ನಾರಾಯಣರಾವ್ ಮುಜುಂದಾರ, ಪಂ.ವಿನಾಯಕ ತೊರವಿ ಮುಂತಾದವರಿದ್ದು ಇವರ ಸಂಗೀತ ಪರಂಪರೆಯಲ್ಲಿ ಮೂಡಿಬಂದ ಸ್ವರವೆ ಕಲಾವಿದೆ ಶ್ರೀಮತಿ ಮಂಜುಳಾ ಜೋಶಿ.

   ಬಹುಮುಖ ವ್ಯಕ್ತಿತ್ವದ ಸಂಗೀತಗಾರರಾದ ಮಂಜುಳಾ ಜೋಶಿ 1961 ನವೆಂಬರ್ 22 ರಂದು ಧಾರವಾಡದಲ್ಲಿ ಮಧ್ಯಮವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ತಂದೆ ಕೃಷ್ಣಾಜಿ ಜೋಶಿ ತಾಯಿ ಇಂದಿರಾಬಾಯಿ.

     ಮಂಜುಳಾ ಅವರ ತಂದೆ ಕೃಷ್ಣಾಜಿ ಜೋಶಿ ಹಾಮರ್ೋನಿಯಂ ನುಡಿಸುತ್ತಿದ್ದರು. ಸಂಗೀತವೆಂದರೆ ಇವರಿಗೆ ಅಪಾರ ಪ್ರೀತಿ. ಹೀಗಾಗಿ ಸಂಗೀತವು ಮಂಜುಳಾ ಅವರಿಗೆ ತಂದೆಯಿಂದ ಬಳುವಳಿಯಾಗಿ ಬಂದ ಕೊಡುಗೆಯಾಗಿದೆ.

      ಬಾಲ್ಯದಿಂದಲೇ ಸಂಗೀತವನ್ನು ಆಸಕ್ತಿಯಿಂದ ಆಲಿಸುತ್ತಿದ್ದ ಮಂಜುಳಾ ಅವರಿಗೆ ತಂದೆಯೆ ಸಂಗೀತದ ಮೊದಲ ಗುರುಗಳಾಗಿದ್ದರು. ಹೀಗಾಗಿ ಹಿಂದುಸ್ಥಾನಿ ರಾಗಗಳ ಕುರಿತು ಪ್ರಾಥಮಿಕ ಅಭ್ಯಾಸ ಮನೆಯಲ್ಲಿಯೇ ಪ್ರಾರಂಭವಾಯಿತು. ಅದರಂತೆ ಮಂಜುಳಾ ಜೋಶಿ ಓರ್ವ ಉತ್ತಮ ಗಾಯಕಿಯಾಗಿ ರೂಪಗೊಳ್ಳಲು ಕಾರಣವಾಯಿತು. 

     ಶಾಲಾದಿನಗಳಲ್ಲಿ ತನ್ನ ಓದಿನ ಜೊತೆಯಲ್ಲಿ ಸಂಗೀತದಲ್ಲೂ ಅಪಾರ ಆಸಕ್ತಿಯನ್ನು ಹೊಂದಿದ್ದ ಮಂಜುಳಾ ಇವರು ಆಟಗಳಲ್ಲೂ ಮುಂದಿದ್ದರು. ಓದಿನಲ್ಲೂ ಪರಿಣಿತರಾದ ಇವರು ಕನರ್ಾಟಕ ವಿಶ್ವವಿಧ್ಯಾಲಯದಿಂದ ಸಂಗೀತ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

   ಸಂಗೀತ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಮೂಡಿಸಿರುವ  ಇವರ ಕ್ರಿಯಾಶೀಲತೆ ಛಾಪು ಹಿರಿದಾಗಿದ್ದು, ಇವರು ಸಾಧನೆ ಮಾಡುವಲ್ಲಿ ಹಿಂದಿರುವ ಪರಿಶ್ರಮಗಳು ಕಾಣದ ಬೆಟ್ಟದಂತೆ. ಈ ನಿಟ್ಟಿನಲ್ಲಿ ಅವರ ಬದುಕು ಸಾಧನೆ ಕುರಿತಾಗಿ ಒಂದು ಕಿರು ಪಕ್ಷಿನೋಟ ಲೇಖನಿ ಮೂಲಕ ನೀಡುವ ಪ್ರಯತ್ನ ನನ್ನದು. 

     ಕಡುಬಡತನದಲ್ಲಿ ಬೆಳೆದುಬಂದ ಮಂಜುಳಾ ಅವರ ಬಾಲ್ಯದ ಜೀವನ ಅಷ್ಟೇನು ಸುಖಕರವಾಗಿರಲಿಲ್ಲ. ತಂದೆ ಶಿಕ್ಷಕರಾಗಿದ್ದರು. ತುಂಬು ಕುಟುಂಬ,  ಬರುವ ಸಂಬಳದಲ್ಲಿ ಮನೆಯನ್ನು ತೂಗಿಸುವುದು ಅವರಿಗೆ ಕಷ್ಟಸಾಧ್ಯವಾಗಿತ್ತು.

        ಬಾಲ್ಯದಲ್ಲಿ ಯಾವುದೇ ವಿಶೇಷ ಸವಲತ್ತುಗಳಿರಲಿಲ್ಲ. ಆದರೆ ಸಾಂಸ್ಕೃತಿಕವಾಗಿ ಶ್ರೀಮಂತ ವಾತಾವರಣವಿತ್ತು. ನಿರರ್ಗಳವಾಗಿ ಶ್ರುತಿ-ಸ್ವರ-ಲಯಬದ್ಧವಾಗಿ ತಂದೆ ಹಾಮರ್ೋನಿಯಂ ನುಡಿಸುತ್ತಿದ್ದರು. ತಾಯಿ ದೇವರನಾಮಗಳನ್ನು ಹಾಡುತ್ತಿದ್ದರು.

     ಪ್ರಾಥಮಿಕ ಸಂಗೀತ ಅಭ್ಯಾಸವನ್ನು ತಂದೆಯಿಂದ ಕಲಿತಾಗಿತ್ತು. ಉನ್ನತ ಶ್ರೇಣಿಯ ಸಂಗೀತ ಶಿಕ್ಷಣವನ್ನು ಕಲಿಯಬೇಕೆಂಬ ಹಂಬಲ ಅವರಲ್ಲಿತ್ತು. ತೀರದ ಬಡತನದಿಂದ ಅದು ಕೈಗೂಡದಿದ್ದಾಗ ಪಂ.ಶೇಷಗಿರಿ ದಂಡಾಪೂರ ಅವರು ನಡೆಸುತ್ತಿದ್ದ ಧರ್ಮಾರ್ಥ ಸಂಗೀತ ಶಾಲೆಗೆ ಸೇರಿದರು.

    ಸಂಗೀತ ಜ್ಞಾನ ಸಂಪ್ರದಾಯಗಳಲ್ಲಿ ಬೋಧನೆ-ಕಲಿಕೆ ಪ್ರಕ್ರಿಯೆಯು ಮೌಖಿಕವಾಗಿದೆ. ಅತ್ಯಂತ ಗೌರವಾನ್ವಿತ ರೀತಿಯಲ್ಲಿ ಇದನ್ನು ಗುರುಮುಖಿ ವಿದ್ಯಾ ಎಂದು ಕರೆಯುತ್ತೇವೆ. ಇಲ್ಲಿ ಜ್ಞಾನವು ಪಟ್ಯಪುಸ್ತಕಗಳಿಂದಲ್ಲ, ಗುರುಗಳ ಬಾಯಿಯಿಂದ ನೇರವಾಗಿ ಸ್ವೀಕರಿಸಲ್ಪಡುತ್ತದೆ.

     ಪಂ.ಶೇಷಗಿರಿ ದಂಡಾಪೂರ ಅವರಿಂದ ಸಂಗೀತದ ಹೊಸ ಹೊಸ ಆಯಾಮಗಳನ್ನು ಕಲಿತು ಕರಗತ ಮಾಡಿಕೊಂಡ ಮಂಜುಳಾ ಅವರು ಅನಿವಾರ್ಯ ಕಾರಣಗಳಿಂದ ಬೇರೆ ಗುರುಗಳನ್ನು ಹುಡುಕಹೊರಟರು. ಆಗ ಗುರುವಾಗಿ ದೊರೆತವರು ಖ್ಯಾತ ಹಿಂದುಸ್ಥಾನಿ ಗಾಯಕರಾದ ಪಂ.ನಾರಾಯಣರಾವ್ ಮುಜುಂದಾರರು.

    ಕಿರಾಣಾ ಘರಾಣೆಯ ಸಂಗೀತವನ್ನು ಮೈಗೂಡಿಸಿಕೊಂಡಿದ್ದ ಪಂ.ನಾರಾಯಣರಾವ್ ಮುಜುಂದಾರ ಉತ್ತಮ ಸಂಗೀತಗಾರರೊಲ್ಲಬ್ಬರಾಗಿದ್ದರು. ತಮ್ಮ ಪಾಂಡಿತ್ಯ ಪೂರ್ಣ ಹಾಡುಗಾರಿಕೆಯಿಂದ ಸಂಗೀತ ಲೋಕದಲ್ಲಿ ಹೆಸರಾಗಿದ್ದ ಅಂಥವರಲ್ಲಿ ಸಂಗೀತ ಕಲೆಯುವ ಭಾಗ್ಯ ಒದಗಿಬಂದದ್ದು ಮರಭೂಮಿಯಲ್ಲಿ ಓಯಾಸಿಸ್ ಸಿಕ್ಕಂತೆ ಆಗಿತ್ತು ಎಂಬುದನ್ನ ಮಂಜುಳಾ ಅವರು ನೆನಪಿಸಿಕೊಳ್ಳುತ್ತಾರೆ.

   ಗುರುಗಳಾದ ಪಂ.ನಾರಾಯಣರಾವ್ ಮುಜುಂದಾರ ಮಂಜುಳಾ ಅವರಿಗೆ ಸಂಗೀತ ಕಲಿಸಲು ಒಪ್ಪಿದರು. ಮದಿಹಾಳದಲ್ಲಿ ವಾಸವಾಗಿದ್ದ ಮಂಜುಳಾ ಜೋಶಿ ಅವರು ಧಾರವಾಡದ ಟೋಲ್ ನಾಕಾ ಬಳಿಯಿರುವ ರಜತಗೇರಿ ಗುಡ್ಡದ ಮೇಲಿದ್ದ ಗುರುಗಳ ಮನೆಗೆ 7 ಕೀಮಿ ನಡೆದುಕೊಂಡೆ ಹೋಗಿ ಬರುತ್ತಿದ್ದರು. ಕಷ್ಟದ ದಿನಗಳು ತೀರದ ಬಡತನ ಹಣಕಾಸಿನ ತೊಂದರೆಯಿಂದ ಬಸ್ಸಿಗೆ ಹೋಗುವುದು ಸಾಧ್ಯವಿರಲಿಲ್ಲ. 

   ಹೀಗೆ 12 ವರ್ಷಗಳ ಕಾಲ ನಡೆದುಕೊಂಡೆ ಹೋಗಿ ಸಂಗೀತ ಅಧ್ಯಯನ ಮಾಡುತ್ತಿದ್ದ ಮಂಜುಳಾ ಅವರಿಗೆ ಸಕರ್ಾರದಿಂದ ಸ್ಕಾಲರಶಿಪ್ ಬರುತ್ತಿತ್ತು. ಆ ಸ್ಕಾಲರ್ಶಿಪ್ನ ಹಣವನ್ನೆ ಗುರುಗಳಿಗೆ ದಕ್ಷಿಣೆ ರೂಪದಲ್ಲಿ ಭಕ್ತಿಯಿಂದ ಸಮಪರ್ಿಸುತ್ತಿದ್ದರು.

     ಗುರು-ಶಿಷ್ಯ ಪರಂಪರೆಯಿಂದ ಬಂದ ಹೆಸರಾಂತ ಸಂಗೀತಗಾರರಾದ ಪಂ.ನಾರಾಯಣರಾವ್ ಮುಜುಂದಾರ ಅವರು ಈಗಿನ ಸಂಗೀತಗಾರರಂತೆ  ಹಣಕ್ಕಾಗಿ ಸಂಗೀತ ಕಲಿಸುವ ಜಯಮಾನದವರಾಗಿರಲಿಲ್ಲ. ಸಂಗೀತಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಉದಾತ್ತ ಮನೋಭಾವದಿಂದ ತಮಗೆ ತಿಳಿದಿರುವುದನ್ನ ನಿರ್ವಂಚನೆಯಿಂದ ಶಿಷ್ಯರಿಗೆ ಧಾರೆಯರೆಯುತ್ತಿದ್ದರು. 

    ಹನ್ನೆರಡು ವರ್ಷ ಇವರ ಗರಡಿಯಲ್ಲಿ ಪಳಗಿದ ಮಂಜುಳಾ ಅವರು ಕಿರಾಣಾ ಘರಾಣೆಯ ಗಾಯನ ಶೈಲಿಯನ್ನು ಮೈಗೂಡಿಸಿಕೊಂಡು ಪ್ರಸ್ತುತಪಡಿಸುವಲ್ಲಿ ಪಾವಿಣ್ಯತೆ ಸಾಧಿಸಿದರು. ಮುಂದೆ ಕಟಗೇರಿ ಅನಂತಾಚಾರ್ಯ ಅವರಲ್ಲಿ ದಾಸರ ಪದಗಳನ್ನು ಕಲಿತರು. ಹೀಗಾಗಿ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತಗಳೆರಡರಲ್ಲೂ ಮಂಜುಳಾ ಜೋಶಿ ಏಕಕಾಲಕ್ಕೆ ಸಾಧನೆ ಗೈಯುವಂತಾಯಿತು. 

     ಶಾಸ್ತ್ರೀಯ ಸಂಗೀತದ ಜೊತೆ ಜೊತೆಗೆ ದಾಸವಾಣಿ ಸಂಗೀತ ಪರಂಪರೆಗೆ ಅದ್ಭುತ ಕೊಡುಗೆ ನೀಡಿರುವ ಮಂಜುಳಾ ಜೋಶಿ ಅವರ ಗಾಯನಕ್ಕೆ ಮನಸೋಲದವರಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. 

    ಅವರ ಸಂಗೀತ ಕಲಿಕೆಯ ದಾಹ ಮುಂದುವರೆದಂತೆ ಹೆಚ್ಚಿನದನ್ನು ಕಲಿಯಬೇಕೆಂಬ ತವಕ ಅವರಲಿದ್ದುದರಿಂದ ಪಂ.ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರಲ್ಲಿ ವಚನ ಗಾಯನ ಅಧ್ಯಯನ ಅಭ್ಯಾಸ ಮಾಡಿ ವಚನ ಗಾಯನದಲ್ಲೂ ಪ್ರಾವಿಣ್ಯತೆ ಪಡೆದರು.

     ಸುಗಮ ಸಂಗೀತ ಪ್ರಕಾರಗಳಲ್ಲಿ ವಚನಗಾಯನವು ಮಹತ್ವದ ಪ್ರಕಾರವಾಗಿದ್ದು, ಪ್ರಸಿದ್ಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವಾಗ ಪ್ರೇಕ್ಷಕರಿಂದ ವಚನಗಳನ್ನು ಹಾಡುವಂತೆ ಬೇಡಿಕೆಗಳು ಬರತೊಡಗಿದವು. 

ಹೀಗಾಗಿ ಮತ್ತಷ್ಟು ವಚನಗಳಿಗೆ ಸ್ವತ: ರಾಗ ಸಂಯೋಜಿಸಿ ಹಾಡತೊಡಗಿದರು. ಹೀಗಾಗಿ ಹಿಂದುಸ್ಥಾನಿ ಸಂಗೀತದ ಜೊತೆಗೆ ಬಜನೆ, ವಚನ ಸುಶ್ರಾವ್ಯವಾಗಿ ಹಾಡಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಮಂಜುಳಾ ಜೋಶಿ ಕಿರಿಯರಿಂದ ಹಿರಿಯರವರೆಗೂ ಪ್ರೀತಿಪಾತ್ರರಾಗಿದ್ದಾರೆ.

     ಮಂಜುಳಾ ಜೋಶಿ ಅವರ ಸಂಗೀತ ಪಯಣ ಮುಂದುವರೆದಂತೆ 1987ರಲ್ಲಿ ಬಾಸಿಂಗಬಲ ಕೂಡಿಬಂದು ಶ್ರೀ ಶಿರೀಷ ಜೋಶಿ ಅವರನ್ನು ಮದುವೆಯಾಗುತ್ತಾರೆ. ರಂಗಭೂಮಿ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹಿರಿಯ ಸಾಹಿತಿ ಶ್ರೀ.ಶಿರೀಷ ಜೋಶಿ ನಮ್ಮ ನಾಡಿನ  ಖ್ಯಾತ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ.

    ಸಂಗೀತಗಾರನಲ್ಲಿ ಕಲಿಕೆಯ ಬುನಾದಿ ಭದ್ರವಾಗಿರಬೇಕು. ಒಬ್ಬ ಮಹಾನ್ ಗುರುವಿನ ಮಾರ್ಗದರ್ಶನ ಹಾಗೂ ವಿಧ್ಯಾಥರ್ಿಯ ಸತತ ಪರಿಶ್ರಮ, ಚಿಂತನ, ಮಂಥನ, ಸಮಕಾಲಿನ ಆಗುಹೋಗುಗಳಿಗೆ ಸ್ಪಂಧಿಸುವ ಮನ:ಸ್ಥಿತಿ- ಈ ಎಲ್ಲ ಅಂಶಗಳನ್ನೊಳಗೊಂಡ ನಿರಂತರ ಸುದೀರ್ಘ ಪಯಣವೇ ಸಾಧನೆಯ ಗುರಿಯಡೆಗೆ ಕರೆದುಕೊಂಡು ಹೋಗುತ್ತದೆ.

      ಈ ನಿಟ್ಟಿನಲ್ಲಿ ಸಂಗೀತದ ಮೇರು ಕಲಾವಿದೆ ಮಂಜುಳಾ ಜೋಶಿ ಅವರಿಗೆ 1988ರಲ್ಲಿ ಬೆಳಗಾವಿಯ ಸರಸ್ವತಿ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕಿ ಎಂದು ನೌಕರಿ ದೊರೆಯುತ್ತದೆ. ಇದು ಅವರ ಸಂಗೀತ ಸಾಧನೆಗೆ ಸಿಕ್ಕ ತಕ್ಕಫಲವೆ ಸರಿ. 

 ತಮ್ಮ ಗಾಯನದಲ್ಲಿ ಕ್ರಿಯಾಶೀಲತೆಯನ್ನು ಉಳಿಸಿಕೊಂಡು ಸ್ವಂತಿಕೆಯ ಛಾಪು ಮೂಡಿಸಿರುವ ಕಲಾವಿದೆ ಮಂಜುಳಾ ಜೋಶಿ ತಮ್ಮ ಶಾಲಾ ಕಾರ್ಯಗಳ ಜೊತೆಗೆ ಬಿಡುವು ಮಾಡಿಕೊಂಡು ಖ್ಯಾತ ಹಾಮರ್ೋನಿಯಂ ವಾದಕರಾದ ಪಂ.ರಾಮಭಾವು ವಿಜಾಪುರೆ ಅವರಲ್ಲಿ ಸಂಗೀತ ಕಲಿಕೆ ಮುಂದುವರೆಸುತ್ತಾರೆ. 

ಈ ಕ್ಲಾಸುಗಳು ನಿಯಮಿತವಾಗಿರದ ಕಾರಣ ನೌಕರಿಯ ಜೊತೆಗೆ ಮನೆತನದ ಜವಾಬ್ದಾರಿಯನ್ನು ಸಂಗೀತವನ್ನು ಏಕಕಾಲಕ್ಕೆ ನಿಭಾಯಿಸುವುದು ಕಷ್ಟವಾದ್ದರಿಂದ ಅವಕಾಶ ಸಿಕ್ಕಾಗಲೆಲ್ಲ ಪಂ.ವಿಜಾಪುರೆಯವರಲ್ಲಿ ಸಂಗೀತಾಭ್ಯಾಸ ಮುಂದುವರೆಸುತ್ತಾರೆ.

ಮಂಜುಳಾ ಜೋಶಿ ಇವರ ಸಂಗೀತದಲ್ಲಿ ಶ್ರುತಿಶುದ್ಧಿ, ಲಯಸಿದ್ಧಿ, ಭಾವಸಮೃದ್ಧಿಗಳ ಜೊತೆಗೆ ಕಲ್ಪನಾ ಶ್ರೀಮಂತಿಕೆ ಇದೆ. ಹೆಚ್ಚಾಗಿ ಎಲ್ಲ ಕಲಾವಿದರಲ್ಲೂ ಈ ಗುಣಗಳನ್ನು ಸಮ ಪ್ರಮಾಣದಲ್ಲಿ ಕಾಣುವುದು ಕಷ್ಟ.

   ಕಲೆಯ ಸಾಧನೆ ಪ್ರಾಮಾಣಿಕತೆಯನ್ನು ಕಲಿಸುತ್ತದೆ. ಸಂಗೀತ ಕ್ಷೇತ್ರದಲ್ಲಿ  ಪರಿಪೂರ್ಣತೆ, ಶ್ರೇಷ್ಟತೆಯನ್ನು ಸಾದಿಸಿ, ತಮ್ಮ ಮುಂದಿನ ಪೀಳಿಗೆಗೆ ಸ್ಪೂತರ್ಿಯಾಗಿ, ಮಾರ್ಗರೂಪಕರಾಗಿ ಸಂಗೀತವನ್ನು ಹೇಳಿಕೊಡುವ ಇವರು ಶಾಲೆಯಲ್ಲಿ ವಿಧ್ಯಾಥರ್ಿಗಳ ಅಚ್ಚು-ಮೆಚ್ಚಿನ ಸಂಗೀತ ಟೀಚರ್ ಆಗಿದ್ದರು.

      ಮಕ್ಕಳಲ್ಲಿ ಸಂಗೀತದ ಸಾಕ್ಷರತೆ ಆಂಕುರಿಸುವುದು ಮೆದುಳಿನ ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳು ಚಿಕ್ಕವರಿರುವಾಗಲೇ ಸಂಗೀತ ಅಭ್ಯಾಸ ಮಾಡಿಸುವುದು ಒಳ್ಳೆಯದು ಎನ್ನುವ ಹಿರೀಯ ಸಂಗೀತ ಕಲಾವಿದೆ ಮಂಜುಳಾ ಜೋಶಿ ಸಾಕಷ್ಟು ಸ್ಮರಣೀಯ ಕಾರ್ಯಗಳನ್ನು ಮಾಡಿದ್ದಾರೆ

    ವೃತ್ತಿ ರಂಗಭೂಮಿಯಲ್ಲಿ ರಂಗಗೀತೆಗಳೆ ನಾಟಕದ ಆತ್ಮವಿದ್ದಂತೆ. ಅವು ನಶಿಸುತ್ತಿರುವ ಸನ್ನಿವೇಶವನ್ನು ಮನಗಂಡ ನಾಟ್ಯಭೂಷಣ ಏಣಗಿ ಬಾಳಪ್ಪನವರು ಅವು ಮುಂದಿನ ಪೀಳಿಗೆಗೆ ಮಾಹಿತಿ ಉಳಿಯಲಿ ಎಂಬ ಮುಂದಾಲೋಚನೆಯಿಂದ ಗರೂಡ ಸದಾಶಿವರಾಯರ 'ಪಾದುಕಾ ಪಟ್ಟಾಭಿಷೇಕ' ನಾಟಕದ ರಂಗಗೀತೆಗಳನ್ನು ಸಂಗೀತ ಕಲಾವಿದರನ್ನು ಸೇರಿಸಿ ಕಲಿಸುತ್ತಾರೆ.

       ಅದರಂತೆ ಸಂಗೀತ ಕಲಾವಿದೆ ಮಂಜುಳಾ ಜೋಶಿಯವರಿಗೂ ನಾಟ್ಯಭೂಷಣ ಏಣಗಿ ಬಾಳಪ್ಪ ಅವರಿಂದ ಕರೆ ಬರುತ್ತದೆ. ರಂಗಗೀತೆಗಳ ಕುರಿತಾಗಿ ಅಭ್ಯಾಸ ಮಾಡಿದ ಮಂಜುಳಾ ಜೋಶಿ ಅವುಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಏಣಗಿ ಬಾಳಪ್ಪ ಅವರಿಂದ ಭೇಷ್ ಎನಿಸಿಕೊಳ್ಳುತ್ತಾರೆ. ಮುಂದುವರೆದಂತೆ ನಾಡಿನಾದ್ಯಂತ ರಂಗಗೀತೆಗಳ ಕಾರ್ಯಕ್ರಮಗಳೂ ಜರಗುತ್ತವೆ. 

        ಕನರ್ಾಟಕ ನಾಟಕ ಅಕಾಡೆಮಿ ಕಪ್ಪಣ್ಣನವರ ನೇತೃತ್ವದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ರಂಗಗೀತೆಗಳನ್ನು ಧ್ವನಿಮುದ್ರಿಸಿಕೊಳ್ಳುವ ಯೋಜನೆಯನ್ನು ಹಾಕಿಕೊಳ್ಳುತ್ತದೆ.

        ಈ ಯೋಜನೆಯಲ್ಲೂ ಸಂಗೀತ ಕಲಾವಿದೆ ಮಂಜುಳಾ ಜೋಶಿಯವರಿಗೆ ಅವಕಾಶ ಲಭಿಸಿ ಬರುತ್ತದೆ. ವಿವಿಧ ಸಂಗೀತ ನಾಟಕಗಳ ಒಟ್ಟು ಹತ್ತೊಂಬತ್ತು ರಂಗಗೀತೆಗಳನ್ನು ಈ ಯೋಜನೆಯಲ್ಲಿ ಅವರು ಹಾಡಿದ್ದಾರೆ.  ತದನಂತರ ನಾಡಿನ ಅನೇಕ ಕಡೆಗಳಲ್ಲಿ ರಂಗಗೀತೆಗಳ ಕಾರ್ಯಕ್ರಮಗಳು ಜರುಗಿದುವು. ಗುಜರಾತ್ದ ಅಹಮದಾಬಾದ್ನಲ್ಲಿಯೂ ರಂಗಗೀತೆಗಳನ್ನು ಹಾಡುವ ಅವಕಾಶ ಇವರನ್ನು ಅರಸಿಕೊಂಡು ಬಂದಿದೆ.

   ಜಾನಪದ ಸಮುದಾಯಗಳ ಸಾಯುತ್ತಿರುವ ಸ್ಥಳಿಯ ಕಲೆ, ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಜೊತೆಗೆ ಪ್ರೋತ್ಸಾಹಿಸಬೇಕಿರುವ ಪ್ರಸ್ತುತ ಸನ್ನಿವೇಶದಲ್ಲಿ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕಿದೆ. ಇದು ಸಂಗೀತದ ಅರಿವಿನ ಉತ್ತುಂಗತೆಯಲ್ಲಿ ಇರುವ ಕಲಾವಿದೆ ಮಂಜುಳಾ ಜೋಶಿ ಅವರ ಮನದಾಳದ ಮಾತು.

      ಸಾಧನೆ ಪರಿಶ್ರಮದಿಂದ    ಸಂಗೀತವನ್ನು    ಮೈಗೂಡಿಸಿಕೊಂಡ ಕಲಾವಿದೆ ಮಂಜುಳಾ ಜೋಶಿ ಕೇವಲ ಹಾಡುಗಾರಿಕೆಗೆ ಮಾತ್ರ ಇವರ ಚಟುವಟಿಕೆಗಳು ಸೀಮಿತ ಮಾಡಿಕೊಳ್ಳದೆ, ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಅನೇಕ ನಾಟಕಗಳಿಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. 

ಮುಖ್ಯವಾಗಿ ಆಧ್ವಾನಪುರ, ಅಜ್ಜಿಕತೆ(ಮಕ್ಕಳ ನಾಟಕ) ಎಲ್ಲಾರು ಮಾಡುವುದು ಹೊಟ್ಟೆಗಾಗಿ, ವೇಷಾಂತರ ಪ್ರಸಂಗ, ರಿಹರ್ಸಲ್ ಪ್ರಸಂಗ ಇದಲ್ಲದೆ ಜಯತೀರ್ಥ ಜೋಶಿಯವರ ನಿದರ್ೆಶನದ 'ವಾಸಾಂಸಿ ಜೀಣರ್ಾನಿ' ನಾಟಕಕ್ಕೆ ಹಿನ್ನೆಲೆಯ ಹಾಡುಗಾರಿಕೆಯನ್ನು ಒದಗಿಸಿದ್ದಾರೆ. ಪುರಂದರ ನಮನ, ಗಾನ ಚಿದಂಬರ, ಶಿವದರ್ಶನ ನಾದರೂಪಕಗಳಿಗೆ ಸಂಗೀತ ನಿದರ್ೆಶನ ಹಾಗೂ ರಾಗಸಂಯೋಜನೆಯನ್ನು ಕೂಡ ಮಾಡಿದ್ದಾರೆ. ಈ ಎಲ್ಲ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡು ಶ್ರೇಷ್ಟ ಸಂಗೀತ ಸಂಯೋಜಕಿಯಾಗಿ ಪ್ರೇಕ್ಷಕರ ಗಮನಸೆಳೆದಿದ್ದಾರೆ.


       ಕಲಾವಿದೆ ಮಂಜುಳಾ ಜೋಶಿ ಗ್ವಾಲಿಯರ್ ಹಾಗೂ ಕಿರಾಣಾ ಘರಾಣೆಗಳ ಸಮ್ಮಿಶ್ರಿತ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸುವಲ್ಲಿ ಪ್ರಾವಿಣ್ಯತೆ ಹೊಂದಿರುವುದು ವಿಶೇಷವಾಗಿದೆ. ಅದರಂತೆ ದಾಸವಾಣಿ, ವಚನ ಗಾಯನ, ರಂಗಗೀತೆ ಗಾಯನಗಳಲ್ಲಿ ವಿಶೇಷ ಸಾಧನೆ ಮಾಡುವ ಜೊತೆಗೆ ಶಾಸ್ತ್ರೀಯ ಸಂಗೀತದ ಜೊತೆಗೆ ದಾಸವಾಣಿ ಭಕ್ತಿ ಸಂಗೀತದ ಪರಂಪರೆಗೆ ಅದ್ಭುತ ಕೊಡುಗೆ ನೀಡಿದ್ದಾರೆ.

    ಸಭಿಕರನ್ನು ಭಾವಲೋಕದಲ್ಲಿ ತೇಲಾಢುವಂತೆ ಸಂಗೀತದ ಸುಧೆ ಹರಿಸುವ ಇವರ ಶೈಲಿ ರಾಗವಿಸ್ತಾರದಲ್ಲಿಯ ಅಲೌಕಿಕ ಅನುಭವ, ಅವರ ಸಂಗೀತದಲ್ಲಿಯ ಪರಿಪಕ್ವತೆಗೆ ಹಿಡಿದ ಕನ್ನಡಿಯಾಗಿದೆ.

       ಇವರ ಪ್ರತಿಭೆಯನ್ನು ಗುರುತಿಸಿದ ಶಿಕ್ಷಣ ಇಲಾಖೆಯು 2003ರಲ್ಲಿ    'ಜನ ಮೆಚ್ಚಿದ ಶಿಕ್ಷಕಿ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕಳಸದ ಪ್ರತಿಷ್ಠಾನವು 2009ರಲ್ಲಿ ಪುರಸ್ಕಾರವನ್ನು ನೀಡಿ ಗೌರವಿಸಿದೆ.

     ಒಬ್ಬ ಕಲಾವಿದ ಶ್ರೇಷ್ಟತೆ, ಪರಿಪಕ್ವತೆ, ಮಾಗಿದ ಸಂಗೀತ ನೀಡಬೆಕಾದರೆ ಒಂದಷ್ಟು ಕಾಲ ಅಭ್ಯಾಸ, ದುಡುಮೆ, ಚಿಂತನೆ, ಮಂಥನ, ಸಾಧನೆಯನ್ನು ಪ್ರಸ್ತುತಪಡಿಸಲು ಸಾಕಷ್ಟು ಅವಕಾಶಗಳು ಬೇಕು; ಸಮಾಜದ, ಕುಟುಂಬದ, ಪರಿಸರದ ಪ್ರೀತಿಯ ಸಹಕಾರವು ಬೇಕು.

ಹಿರೀಯ ಸಂಗೀತ  ಕಲಾವಿದೆ ಮಂಜುಳಾ  ಜೋಶಿ  ಗೃಹಿಣಿಯಾಗಿ, ಸಂಗೀತ  ಶಿಕ್ಷಕಿಯಾಗಿ ಮತ್ತು    ಸಂಗೀತ ಸಾಧಕಿಯಾಗಿ   ತ್ರಿಪಾತ್ರಗಳನ್ನು ಏಕಕಾಲಕ್ಕೆ ನಿರ್ವಹಿಸಿದ್ದು, ಸರಕಾರಿ ಕೆಲಸದ ಮತ್ತು ಮನೆ ನಿರ್ವಹಣೆಯ ಒತ್ತಡಗಳಲ್ಲಿ ಅವರಲ್ಲಿನ ಸಂಗೀತ ಸಾಧಕಿಗೆ ಸಮಯಾವಕಾಶದ ಕೊರತೆ ಇದ್ದಿರುವುದು ಎದ್ದು ಕಾಣುತ್ತದೆ. 

    ಸಿಕ್ಕ ಅವಕಾಶವನ್ನು ಸದುಪಯೋಗಿಪಡಿಸಿಕೊಂಡು ಸತತ ಪರಿಶ್ರಮದಿಂದ ಸಾಧನೆಯ ಶಿಖರವೇರಿದ ಎಲೆಯ ಮರೆಯ ಕಾಯಿಯಂತಿರುವ ಹಿರೀಯ ಸಂಗೀತ ಕಲಾವಿದೆ ಮಂಜುಳಾ ಜೋಶಿ ಅವರಿಗೆ 1998ರಲ್ಲಿ ಈಶ್ವರಪ್ಪ ಮಿಣಚಿಯವರ ಸನ್ಮಾನ, 2007 ಕನರ್ಾಟಕ ಸರಕಾರದ ಶಿಕ್ಷಣ ಇಲಾಖೆಯ ಅತ್ಯತ್ತಮ ಶಿಕ್ಷಕಿ ಪ್ರಶಸ್ತಿ, 2015ರಲ್ಲಿ ಭಾರತ ವಿಕಾಸ ಪರಿಷತ್ತಿನಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ಅರಿಸಿಬಂದಿವೆ. 

    ಸಂಗೀತಕ್ಕೆ ತಮ್ಮನ್ನು ತಾವು ಅಪರ್ಿಸಿಕೊಂಡು ಉದಾತ್ತ ಮನೋಭಾವದಿಂದ ಘನತೆಯ ಬದುಕು ಬಾಳುತ್ತಿರುವ ಹಿರಿಯ ಕಲಾವಿದೆ ಮಂಜುಳಾ ಜೋಶಿ ಅವರು ಸಕರ್ಾರಿ ಕೆಲಸವನ್ನು ಪ್ರಾಮಾಣಿಕ ಹಾಗೂ ಸಮರ್ಥವಾಗಿ ನಿರ್ವಹಿಸಿ 2023 ರಲ್ಲಿ ಸಂಗೀತ ಶಿಕ್ಷಕಿ ಸೇವೆಯಿಂದ ಸ್ವಯಂ ನೀವೃತ್ತಿ ಹೊಂದಿದ್ದಾರೆ.

      ಇವರ ಪ್ರತಿಭೆಗೆ ಅನೇಕ ಮಹತ್ವದ ಅವಕಾಶಗಳು ಲಭಿಸಿದ್ದು, ಅವುಗಳಲ್ಲಿ ಮುಖ್ಯವಾಗಿ ಬೆಳಗಾವಿಯಲ್ಲಿ ಮೊಟ್ಟಮೊದಲ ಜಂಟಿ ಅಧಿವೇಶನ ನಡೆದಾಗ ಸನ್ಮಾನ್ಯ ರಾಜ್ಯಪಾಲರ ಸಮ್ಮುಖದಲ್ಲಿ ನಾಡಗೀತೆಯನ್ನು ಪ್ರಸ್ತುತ ಪಡಿಸುವ ಅವಕಾಶ ಲಭಿಸಿತ್ತು. 70ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮತ್ತು ಬೆಳಗಾವಿ ಜಿಲ್ಲೆಯ 6ನೆಯ ಸಾಹಿತ್ಯ ಸಮ್ಮೇಳನದಲ್ಲಿ ರಂಗಗೀತೆಗಳನ್ನು ಹಾಡುವ ಅವಕಾಶ ಪ್ರಾಪ್ತವಾಗಿದೆ.     ವಿಶ್ವಕನ್ನಡ ಸಮ್ಮೇಳನದಲ್ಲಿ ವಚನ ಗಾಯನದ ಅವಕಾಶ ಒದಗಿತ್ತು. ಮಹಾಲಿಂಗಪುರದಲ್ಲಿ ರಾಜ್ಯ ಮಟ್ಟದ ಸಂಗೀತ ಸಮ್ಮೇಳನ, ಕುಂದಗೋಳ ಸಂಗೀತ ಸಮ್ಮೇಳನ, ಬೆಂಗಳೂರಿನ ನಾದಶ್ರೀ ಸಂಸ್ಥೆಯ ಕಾರ್ಯಕ್ರಮ, ಬೆಂಗಳೂರಿನ ಶ್ರುತಿ ಸಂಗೀತ ಸಂಸ್ಥೆ, ಬೆಳಗಾವಿಯ ಸಂಗೀತ ಪ್ರತಿಷ್ಠಾನ ಸಂಸ್ಥೆಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿದ್ದಾರೆ. ಚಿತ್ರದುರ್ಗದ ಗಣೇಶೋತ್ಸವ, ಕಿತ್ತೂರು ಉತ್ಸವ, ತಿರುಪತಿಯ ದೇವಸ್ಥಾನ, ಮಂತ್ರಾಲಯದ ಶ್ರೀಮಠ, ಗಡಿನಾಡು ಉತ್ಸವ-2006 ಇತ್ಯಾದಿ ಮಹತ್ವದ ವೇದಿಕೆಗಳಲ್ಲಿ ದಾಸರ ಪದಗಳು, ವಚನಗಾಯನ ಹಾಗೂ ರಂಗಗೀತೆಗಳನ್ನು ಪ್ರಸ್ತುತ ಪಡಿಸಿ ಗಮನಸೆಳೆದಿದ್ದಾರೆ.

        ಇದಲ್ಲದೆ ಪಣಜಿ, ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ನಿಪ್ಪಾಣಿ, ರಾಮದುರ್ಗ, ಬೈಲಹೊಂಗಲ, ಹಾರುಗೇರಿ, ಬ್ಯಾಡಗಿ, ಕುಂದಗೋಳ, ಮೋಟೆಬೆನ್ನೂರು, ಯಲ್ಲಮ್ಮನಗುಡ್ಡ, ಇತ್ಯಾದಿ. ಕಡೆಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳನ್ನು ಹಿರೀಯ ಸಂಗೀತ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

      ಈಗ ನೀವೃತ್ತಿ ಜೀವನ ನಡೆಸುತ್ತಿರುವ ಹಿರೀಯ ಸಂಗೀತ ಕಲಾವಿದೆ ಮಂಜುಳಾ ಜೋಶಿ ಅವರಿಗೆ ಪತಿ ಶ್ರೀ. ಶಿರೀಷ ಜೋಷಿ ಹಾಗೂ ಮೊದಲನೆವಳು ಮಗಳು ಶ್ರದ್ಧಾ ಮದುವೆಯಾಗಿದೆ ಬೆಳಗಾವಿಯಲ್ಲಿ ವಾಸವಾಗಿದ್ದಾರೆ. 

ಎರಡನೆಯವರು ಶ್ರೀನಾಥ ಜೋಶಿ, ಮದುವೆಯಾಗಿದ್ದು ಅವರು ಬೆಳಗಾವಿಯಲ್ಲಿ ವಾಸವಾಗಿದ್ದಾರೆ. 

       ಇಂದಿನ ಶೈಕ್ಷಣಿಕ ಪದ್ಧತಿಯಲ್ಲಿ ತುಸು ಬದಲಾವಣೆ ಬೇಕು  ಎನ್ನುವ ಇವರು ಶಾಲಾ ಪಟ್ಯಗಳಲ್ಲಿ  ಈಗಾಗಲೇ ಕಂಪ್ಯೂಟರ್ ಬಳಕೆ ತಿಳಿವಳಿಕೆ ನೀಡುವಂತೆ ಸಂಗೀತವನ್ನೂ ಒಂದು ಐಚ್ಛಿಕ ವಿಷಯವಾಗಿಡಬೇಕು. 

] ಇಲ್ಲ ಕೇವಲ ಒಂದೆರಡು ದೇಶಭಕ್ತಿಗೀತೆ, ಭಾವಗೀತೆ, ಭಜನೆ ಅಷ್ಟೆ ಅಲ್ಲದೆ ಕೆಲವೊಂದು ಸರಳ, ಸುಂದರ ರಾಗಗಳು, ರಚನೆಗಳನ್ನು ಕಲಿಸಬೇಕು. ಪ್ರತಿಯೊಂದು ಮಗುವೂ ಕಲಿಯದಿದ್ದರೂ, ಈ ತರಹ ಒಂದು ಸಂಗೀತ ಹಾಡು, ರಚನೆ ಇದೆಯನ್ನುವ ಕಲ್ಪನೆಯಾದರೂ ಅದರ ಮನದಲ್ಲಿ ಮೂಡುತ್ತದೆ. ಅಲ್ಲದೆ ಕಾಲೇಜು ವಿಶ್ವವಿದ್ಯಾನಿಲಯಗಳಲ್ಲೂ ಭೋದಕರನ್ನು ನೇಮಿಸುವಾಗ ಯು.ಜಿ.ಸಿ ಕೆಲವು ನಿಯಮಗಳನ್ನು ಮಾಪರ್ಾಡು ಮಾಡಿ ನುರಿತ ಕಲಾವಿದರ ಆಯ್ಕೆಯಾಗಬೇಕು ಎಂಬುದು ಮಂಜುಳಾ ಅವರ ಆಗ್ರಹವಾಗಿದೆ.

      ಕಲೆ ಸಂಗೀತ ಎನ್ನುವುದು ದೇವರ ಕೊಡುಗೆ ಅದು ಎಲ್ಲರಿಗೂ ವಲಿಯುವಂಥದಲ್ಲ. ಕಲಾವಿದನ ಶ್ರೀಮಂತಿಕೆಯನ್ನು ಆನಂದಿಸಿ- ಅನುಭವಿಸಿ-ಅನುರಣಿಸಲು ಶ್ರೋತೃವಿಗೂ ಒಂದುಮಟ್ಟದ ಸಂಸ್ಕಾರ, ಭಾವಾಸ್ವಾದನಯಶ್ರೀಮಂತಿಕೆ ಇರಬೇಕಾದುದು ಅತ್ಯಗತ್ಯ.

-ಅನಂತ ಪಪ್ಪು