ನಗಿಸುವವನ ಹಿಂದಿರುವ ನೋವು ಬದುಕನ್ನು ಬದಲಿಸುವುದಕ್ಕೆ ಪ್ರೇರಣೆ ನೀಡುತ್ತದೆ. ಅವರ ಬದುಕನ್ನು ಅರ್ಥೈಸಿಕೊಂಡರೆ ನಮಗೂ ಬದಲಾಗುವುದಕ್ಕೆ ನೆರವಾಗುತ್ತದೆ...!

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಂದಂತಹ ಹಾಸ್ಯ ನಟರುಗಳು ತಮ್ಮ ನಟನೆಯಿಂದಲೇ ನಮ್ಮೆಲ್ಲರ ಮನವನ್ನು ರಂಜಿಸುತ್ತಿದ್ದರು. ಒಬ್ಬರು ಸಂಭಾಷಣೆಯ ಮೂಲಕ ಮನಸೆಳೆದರೆ ಮತ್ತೊಬ್ಬರು ಮನೋಜ್ಞ ಅಭಿನಯದ ಮೂಲಕ ಮನ ತಣಿಸುತ್ತಿದ್ದರು. ಒಬ್ಬರು ವಿಭಿನ್ನವಾದ ಧ್ವನಿಯ ಮೂಲಕ ನಮ್ಮನ್ನು ಕಾಡಿದರೆ ಮತ್ತೊಬ್ಬರು ತಮ್ಮ ವಿಚಿತ್ರ ಶೈಲಿಯಿಂದಲೇ ನಮ್ಮನ್ನು ತಮ್ಮೆಡೆಗೆ ಸೆಳೆಯುತ್ತಿದ್ದರು. ಒಬ್ಬರು ಮಾತಿನಲ್ಲಿ ಮನೆ ಕಟ್ಟಿದರೆ ಮತ್ತೊಬ್ಬರು ಹಾಸ್ಯದಲ್ಲಿಯೆ ಕನಸು ಕಟ್ಟಿಕೊಡುತ್ತಿದ್ದರು. ಎಷ್ಟೋ ಜ್ವಲಂತ ಸಮಸ್ಯೆಗಳನ್ನು ವಿಡಂಬನೆಯ ಮೂಲಕವಾಗಿ ತೋರಿಸುತ್ತ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ನರಸಿಂಹರಾಜು, ಬಾಲಕೃಷ್ಣ, ದಿನೇಶ, ಎನ್ಎಸ್ ರಾವ್, ದ್ವಾರಕೀಶ, ವಾದಿರಾಜ್ ಸೇರಿದಂತೆ ಆಗಿನ ಹಲವಾರು ಜನ ಹಾಸ್ಯ ನಟರು ಕನ್ನಡ ಚಿತ್ರ ರಂಗಕ್ಕೆ ಒಂದು ಹಾಸ್ಯದ ಹೊಸ ಇಮೇಜ್ನ್ನೆ ಸೃಷ್ಠಿ ಮಾಡಿಕೊಟ್ಟಿದ್ದರು. ಆದರೆ ಇತ್ತೀಚೆಗೇಕೋ ಹಾಸ್ಯ ಎನ್ನುವ ಪದವೇ ಅಪಹಾಸ್ಯಕ್ಕೆ ಒಳಗಾಗುತ್ತಿದೆ ಎನಿಸುವ ಮಟ್ಟದಲ್ಲಿ ಅಶ್ಲೀಲತೆ ಅಥವಾ ದ್ವಂದ್ವಾರ್ಥದ ಹಾಸ್ಯ ತನ್ನ ಕಬಂದ ಬಾಹುವನ್ನು ಚಾಚುತ್ತಲಿದೆ. ಪ್ರೇಕ್ಷಕರನ್ನು ನಗಿಸಬೇಕೆಂದರೆ ಇಂದು ದೈಹಿಕ ಭಾಷೆ ಅಥವಾ ಅವರ ನಟನೆ ಮುಖ್ಯವಾಗುತ್ತಿಲ್ಲ. ಬದಲಿಗೆ ಕೇವಲ ಹೇಳುವ ಡೈಲಾಗ್ಗಳು ಮಾತ್ರ ಮುಖ್ಯವಾಗುತ್ತಿವೆ. ಅದೆಷ್ಟರ ಮಟ್ಟಿಗೆ ಎಂದರೆ ಹಿಂದೆ ಒಂದು ಹಾಸ್ಯ ಚಿತ್ರವನ್ನು ಇಡೀ ಕುಟುಂಬವರ್ಗದವರು ಕುಳಿತುಕೊಂಡು ನೋಡುತ್ತಿದ್ದರು. ಆದರೆ ಇಂದು ಬರುತ್ತಿರುವ ಚಿತ್ರಗಳನ್ನು ಕುಟುಂಬ ಸಮೇತವಾಗಿ ನೋಡುತ್ತ ಕುಳಿತರೆ ಅದರಲ್ಲಿ ಬರುವ ದ್ವಂದ್ವಾರ್ಥದ ಸಂಭಾಷಣೆಯನ್ನು ಕೇಳಿ ಒಬ್ಬರ ಮುಖ ಒಬ್ಬರು ನೋಡಿಕೊಳ್ಳಬೇಕಾಗುತ್ತದೆ. ಇಲ್ಲ ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ. ಇದಕ್ಕೆ ಕಾರಣವಾಗಿದ್ದಾದರೂ ಏನು? ಪ್ರೇಕ್ಷಕರು ಅಪೇಕ್ಷೆ ಪಡುತ್ತಿರುವುದು ಇದನ್ನೇನಾ? ಅಥವಾ ಕಲಾವಿಧರಿಗೆ ನಗಿಸುವುದಕ್ಕೆ ಇರುವ ಮಾರ್ಗ ಕೇವಲ ಇದೇನಾ? ಈ ಪ್ರಶ್ನೆಗೆ ಉತ್ತರ ಬಹಳಷ್ಟು ಬಾರಿ ಹುಡುಕಿದರೂ ಉತ್ತರ ದೊರೆಯುತ್ತಿಲ್ಲ. ಇದು ಕೇವಲ ಚಿತ್ರ ರಂಗಕ್ಕೆ ಮಾತ್ರ ಸೀಮಿತವಲ್ಲ. ಸ್ಟ್ಯಾಂಡಪ್ ಕಾಮಿಡಿ, ಸ್ಟೇಜ್ ಕಾಮಿಡಿ, ರಿಯಾಲಿಟಿ ಶೋಗಳು, ಸಾಮಾಜಿಕ ನಾಟಕಗಳು ಎಲ್ಲ ಕಡೆಯು ಈ ದ್ವಂದ್ವಾರ್ಥದ ಹಾಸ್ಯ ಸಿಗುತ್ತಿದೆಯೇ ಹೊರತು ಮನ ತಣಿಸುವ ಅಪ್ಪಟ ಹಾಸ್ಯ ಮರೆಯಾಗಿ ಹೋಗುತ್ತಿದೆ. ಒಂದು ಕಾಲದಲ್ಲಿ ಮಾಸ್ಟರ್ ಹಿರಣ್ಣಯ್ಯನವರು ನಾಟಕವಾಡಿದರೆ ಇಡೀ ವ್ಯವಸ್ಥೆಯೇ ಅವರ ವಿರುದ್ಧ ಮುಗಿ ಬೀಳುತ್ತಿತ್ತು. ಅದರಲ್ಲೂ ಅವರ ಲಂಚಾವತಾರ ನಾಟಕವಂತೂ ಕನರ್ಾಟಕದಲ್ಲಿ ಒಂದು ಸಂಚಲನವನ್ನೇ ಸೃಷ್ಠಿ ಮಾಡಿ ಬಿಟ್ಟಿತ್ತು. ಅವರು ನಮ್ಮನ್ನಗಲಿ ಹೋದರೂ ಸಹ ಅವರಾಡಿದ ಆ ನಾಟಕ ನೋಡಿದರೆ ಅಬ್ಭಾ ಎನ್ನುವ ಉದ್ಘಾರ ನಮ್ಮಿಂದ ಬರದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಹೀಗೇ ಹಾಸ್ಯಕ್ಕೆ ಹೊಸ ಭಾಷ್ಯಃ ಬರೆದವರನ್ನು ನೆನಸಿಕೊಂಡು ಖುಷಿ ಪಡಬೇಕೋ ಅಥವಾ ಹಾಸ್ಯ ಲೋಕವನ್ನು ಬೇರೊಂದು ದಿಕ್ಕಿನೆಡೆಗೆ ತೆದುಕೊಂಡು ಹೋಗಿದ್ದನ್ನು ನೋಡಿ ಬೇಸರ ಪಡಬೇಕೋ ತಿಳಿಯದೇ ಹೋದಂತ ಸಂದರ್ಭದಲ್ಲಿ ಹಾಲಿವುಡ್ನ ಆ ನಟ ನನಗೆ ನೆನಪಾದ. ತನ್ನ ಬದುಕಿನುದ್ದಕ್ಕೂ ಜನಗಳನ್ನು ನಕ್ಕು ನಗಿಸಿ ನಗೆಗಡಲಲ್ಲಿ ತೇಲಿಸಿದ ಆ ಕಲಾವಿದ ತನ್ನ ಯಾವ ಚಿತ್ರದಲ್ಲಿಯೂ ಮಾತನಾಡಲಿಲ್ಲ. ಹಿನ್ನೆಲೆ ಸಂಗೀತವನ್ನಿಟ್ಟುಕೊಂಡು ತನ್ನ ವಿಶಿಷ್ಠ ನಟನೆಯಿಂದ ಹೊಟ್ಟೆ ಹುಣ್ಣಾಗಿಸುತ್ತಿದ್ದ ಈ ವ್ಯಕ್ತಿ ಸಾಮಾಜಿಕ, ರಾಷ್ಟ್ರೀಯ ಅಂತರಾಷ್ಟ್ರೀಯ ಸಮಸ್ಯೆಗಳನ್ನು ಹಾಸ್ಯದ ಮೂಲಕವೇ ತಿಳಿಸಿಕೊಡುತ್ತಿದ್ದ. ಈವತ್ತೀಗೂ ಕೂಡ ಆ ಕಲಾವಿದನ ಚಿತ್ರ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಮುಪ್ಪಾನ ಮುದುಕನ ವರೆಗೂ ಖುಷಿಪಟ್ಟು ನೋಡುತ್ತಾರೆ. ಇದಕ್ಕೆಲ್ಲ ಕಾರಣವೇನು? ಹಾಸ್ಯಕ್ಕೆ ದ್ವಂದ್ವಾರ್ಥದ ಬಣ್ಣ ಬಳಿಯುವ ಕಲಾವಿದರುಗಳ ಮಧ್ಯದಲ್ಲಿ ಒಂದೇ ಒಂದು ಮಾತನ್ನೂ ಆಡದೇ ಇಡೀ ಪ್ರೇಕ್ಷಕ ಸಮೂಹವನ್ನು ನಕ್ಕು ನಗಿಸಿದ ಆ ಧೀಮಂತನ ಕುರಿತು ನಾವಿಂದು ಒಂದಷ್ಟು ತಿಳಿದುಕೊಳ್ಳುವುದು ಒಳ್ಳೆಯದು ಎನ್ನುವುದು ನನ್ನ ಅಭಿಮತ.

ನಾನು ಪಾಠ ಮಾಡುವ ಸಂದರ್ಭದಲ್ಲಿ ನನಗೆ ಪ್ರಶ್ನೆ ಮಾಡಿದ ಓರ್ವ ವಿದ್ಯಾಥರ್ಿ ಸರ್ ಇಂದು ನಾಟಕ ನೋಡುವಾಗ, ಚಲನಚಿತ್ರ ನೋಡುವಾಗ, ಕಾಮಿಡಿ ಕಾರ್ಯಕ್ರಮಗಳನ್ನು ನೋಡುವಾಗ ಒಂದಲ್ಲಾ ಒಂದು ಹಂತದಲ್ಲಿ ಡಬಲ್ ಮೀನಿಂಗ್ ಡೈಲಾಗ್ಗಳು ನುಗ್ಗಿ ಬರುತ್ತವೆ. ಆಗ ನನಗನಿಸಿದ್ದು ಹಾಸ್ಯ ಮಾಡಬೇಕೆಂದರೆ ದ್ವಂದ್ವಾತ್ಮಕ ಡೈಲಾಗ್ಗ ಅವಶ್ಯಕತೆ ಇದೆಯಾ ಅಥವಾ ಅನಾವಶ್ಯಕವಾಗಿ ಇದು ಸೃಷ್ಠಿಯಾಗಿದೆಯಾ? ನೀವು ನೋಡಿದರೆ ಚಾಲರ್ಿ ಚಾಪ್ಲೀನ್ ಎನ್ನುವ ಕಲಾವಿದ ಮಾತನಾಡದೇ ನಟನೆ ಮಾಡಿ ಜಗತ್ತನ್ನು ಗೆದ್ದು ಎಂದು ಹೇಳುತ್ತಿರಲ್ಲ. ಅವನಿಂದ ಸಾಧ್ಯವಾಗಿದ್ದು ಇವರಿಂದೇಕಾಗುತ್ತಿಲ್ಲ? ಇವರಿಂದ ಆಗದೇ ಇದ್ದರೂ ಬಿಡಲಿ ಸರ್ ಚಾಲರ್ಿ ಚಾಪ್ಲಿನ್ ಬದುಕು ಹಾಗೂ ನಟನೆಯ ಕುರಿತು ಒಂದಷ್ಟು ತಿಳಿಸಿ ಎಂದು ನೇರವಾಗಿ ಕೇಳಿದಾಗ ನನಗೂ ಆತನ ಬದುಕಿನ ಕುರಿತು ಆಸಕ್ತಿ ಮೂಡಿತು. ಒಂದು ಕಾಲದಲ್ಲಿ ಭಿಕ್ಷೆ ಬೇಡುತ್ತಿದ್ದ ಆ ವ್ಯಕ್ತಿ ಮುಂದೊಂದು ದಿನ ಹಾಸ್ಯ ಚಕ್ರವತರ್ಿಯಾಗಿ ಗುರುತಿಸಿಕೊಳ್ಳುವುದು ಮಾತ್ರವಲ್ಲದೇ, ಜಗತ್ತಿಗೆ ಕಂಟಕವಾಗಿ ಕಾಡಿದ ಹಿಟ್ಲರ್ ಎನ್ನುವ ಸರ್ವಾ ಧಿಕಾರಿಯ ಕೇಂಗಣ್ಣಿಗೆ ಗುರಿಯಾಗುತ್ತಾನೆ. ಸಾಯೊವರೆಗೂ ಸರಿ ಸುಮಾರ 70 ವರ್ಷಗಳ ಕಾಲ ನಗಿಸುತ್ತ ಬದುಕಿನ ವ್ಯಕ್ತಿ ಸತ್ತ ನಂತರವೂ ಇಂದಿಗೂ ಜನಪ್ರೀಯ ಹಾಸ್ಯ ನಟನಾಗಿಯೇ ಉಳಿಯುತ್ತಾನೆಂದರೆ ಅದರ ಹಿಂದಿರುವ ರಹಸ್ಯವಾದರೂ ಎನಿರಬೇಕು ಎಂದು ಚಾಲರ್ಿ ಚಾಪ್ಲಿನ್ ಕುರಿತು ತಿಳಿದುಕೊಳ್ಳಲು ಮುಂದಾದ ಪರಿಣಾಮವೇ ಇಂದು ನಿಮಗೆ ಓದುವುದಕ್ಕೆ ಈ ಅಂಕಣ ಬರಹ ದೊರೆಯುತ್ತಿದೆ.

ದೊಗಲೇ ಪ್ಯಾಂಟು, ಅಗತ್ಯಕ್ಕಿಂತಲೂ ದೊಡ್ಡದಾದ ಬೂಟುಗಳು, ವಕ್ರವಾಗಿ ಹೊರ ಚಾಚಿದ ಪಾದಗಳು, ಬೌಲರ್ ಹ್ಯಾಟು, ಸಡಿಲವಾದ ಜಾಕೇಟ್, ವಿಚಿತ್ರ ಎನ್ನಿಸುವ ನೊಣದಂತ ಚಿಕ್ಕ ಮೀಸೆ, ಕೈಯಲ್ಲಿ ಒಂದು ಊರುಗೋಲು, ಚಿತ್ರ ವಿಚಿತ್ರವಾದ ನಡುಗೆ ಎಂತವರನ್ನು ನಗಿಸಬಲ್ಲ ಮುಖದ ಮೇಲಿನ ವಿಚಿತ್ರ ನಗು ಇದನ್ನು ತೋರಿಸಿದರೆ ಸಾಕು ಯಾರೂ ಬೇಕಾದರೂ ಗುರುತು ಹಿಡಿಯುತ್ತಾರೆ. ಯೆಸ್...! ಇದೆಲ್ಲ ಚಾಲರ್ಿ ಚಾಪ್ಲಿನ್ ಬ್ರ್ಯಾಂಡ್ ಎಂದು. ತನ್ನ ಪೋಷಾಕನ್ನೇ ಒಂದು ರೀತಿಯ ಬ್ರ್ಯಾಂಡ್ಆಗಿ ನಿಮರ್ಾಣ ಮಾಡಿದ ಆ ವ್ಯಕ್ತಿ ಅದೆಷ್ಟು ಪ್ರಸಿದ್ಧನೆಂದರೆ ಯಾರಾದರೂ ಅತಿಯಾಗಿ ನಗಿಸುತ್ತಿದ್ದರೆ ಅವನೇನೋ ಚಾಲರ್ಿ ಚಾಪ್ಲಿನ್ ಆಗಿದಾನಲ್ಲ ಏನು ಮಸ್ತ ನಗಸ್ತಾನೋ ಮಾರಾಯ ಎನ್ನುವ ಮಟ್ಟದಲ್ಲಿ ಜನಪ್ರೀಯತೆಯನ್ನು ಪಡೆದುಕೊಂಡಿದ್ದಾನೆ. ಹೇಗೆ ನೀರಿನಲ್ಲಿ ಅಳುವ ಮೀನಿನ ದುಃಖ ಯಾರಿಗೂ ಕಾಣಿಸುವುದಿಲ್ಲವೋ ಹಾಗೇ ನಗಿಸುವವನ ಹಿಂದೆ ಇರುವ ನೋವುಗಳು ಸಹ ಯಾರಿಗೂ ಕಾಣಿಸುವುದಿಲ್ಲ ಎನ್ನುವುದಕ್ಕೆ ಈತನ ಬದುಕೇ ಒಂದು ಉದಾಹರಣೆಯಾಗಿದೆ. ಬದುಕಿನುದ್ದಕ್ಕೂ ನೋವನ್ನು ಉಂಡರೂ ಸಹ ಪ್ರೇಕ್ಷಕರಿಗಾಗಿ ನಗುವಿನ ಮೃಷ್ಟಾನ್ನವನ್ನೇ ಹಂಚಿದಂತ ಶ್ರೇಷ್ಠ ಕಲಾವಿದನಾಗಿದ್ದಾನೆ. ಕಲಾವಿದನನ್ನು ಶಾಪಗ್ರಸ್ಥ ಗಂದರ್ವ ಎಂದು ಕರೆಯುತ್ತಾರೆ. ಹಾಗೆ ಎಲ್ಲರನ್ನು ನಗಿಸುವ ಈ ವ್ಯಕ್ತಿಗೆ ದುಃಖ, ನೋವು, ಹತಾಸೆ ಎನ್ನುವುದು ದೇವರು ಕೊಟ್ಟ ವರವಾಗಿದ್ದವು. ಆದರೂ ಅದನ್ನು ಮೀರಿ ಆತ ಬೆಳದ ಪರಿ ಮಾತ್ರ ರೋಚಕವಾಗಿದೆ ಎನ್ನುವುದು ಮಾತ್ರ ನಾವು ಒಪ್ಪಿಕೊಳ್ಳಲೇ ಬೇಕು.

ಇಂಗ್ಲಂಡ ದೇಶದಲ್ಲಿ ಜನಿಸಿದ ಚಾಲರ್ಿ ಚಾಪ್ಲಿನ್ನನ್ನು ಇಂದು ಗಡಿ ಮೀರಿದ ಕಲಾರಾಧಕರು ಸ್ವೀಕರಿಸುತ್ತಾರೆ. ಇಡೀ ಜಗತ್ತನ್ನೆ ನಕ್ಕು ನಗಿಸಿದ ಚಾಪ್ಲಿನ್ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಬೇರ್ಪಟ್ಟು ತಾಯಿಯೊಂದಿಗೆ ವಾಸ ಮಾಡಬೇಕಾಯಿತು. ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಹಾಡು ಹಾಡುತ್ತ ಬದುಕು ಸಾಗಿಸುತ್ತಲಿದ್ದ ತಾಯಿಗೆ ಬರುತ್ತಿದ್ದ ಆದಾಯದಲ್ಲಿ ಹೊಟ್ಟೆ ಹೊರೆಯುವುದೇ ಕಷ್ಟವಾಗಿರುವಾಗ ಆಡಂಬರದ ಬದುಕನ್ನು ಮಾಡುತ್ತೇನೆ ಎಂದರೆ ಅದು ಹೇಗೆ ಸಾಧ್ಯವಾಗುತ್ತದೆ ಹೇಳಿ? ಕೆಸರಿನಲ್ಲಿ ಕಮಲ ಅರಳುವಂತೆ ಬಡತನದಲ್ಲಿ ಮಾತ್ರ ಪ್ರತಿಭೆಗಳು ಅರಳುತ್ತವೆ ಎನ್ನುವ ಮಾತನ್ನು ನಾವು ಒಪ್ಪಿಕೊಳ್ಳಲೇ ಬೇಕು. ಅದೊಂದು ದಿನ ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದ ತಾಯಿಗೆ ಇದ್ದಕ್ಕಿದ್ದಂತೆ ಧ್ವನಿ ನಿಂತು ಹೋಯಿತು. ದುಡ್ಡು ಕೊಟ್ಟು ವೀಕ್ಷಣೆಗೆ ಬಂದ ಜನಗಳು ಗದ್ದಲ ಎಬ್ಬಿಸಿದಾಗ ತಾಯಿಯ ಸ್ಥಾನವನ್ನು ಅಲಂಕರಿಸಿದ ಚಾಪ್ಲೀನ್ ತನ್ನ ವಿಶಿಷ್ಟ ಮ್ಯಾನರೀಸಂ ಹಾಗೂ ಅದ್ಭುತವಾದ ನಟನೆಯಿಂದ ಅವರ ಹೊಟ್ಟೆ ಹುಣ್ಣಾಗುವ ಹಾಗೆ ನಗಿಸಿದನು. ಇದರಿಂದ ಸಂತುಷ್ಟರಾದ ವೀಕ್ಷಕರು ಮುಂದೆ ಈ ಹುಡುಗನ ಶೋ ಇದ್ದರೆ ಹೇಳಿ ಎಂದು ಹೇಳಿ ಹೋದರು. ಇತ್ತ ತಾಯಿಗೆ ಹೋದ ಧ್ವನಿ ಮರಳಿ ಬರಲೇ ಇಲ್ಲ. ಆಗ ಮನೆ ನಡೆಸುವ ಜವಾಬ್ದಾರಿ ಹೊತ್ತುಕೊಂಡು ಬದುಕಿನ ನೊಗಕ್ಕೆ ಹೆಗಲು ಕೊಟ್ಟ ಚಾಪ್ಲಿನ್ ತನ್ನ ನಟನೆಯ ಮೂಲಕವೇ ಅನ್ನವನ್ನು ದುಡಿಯವುದಕ್ಕೆ ಮುಂದಾದ. ಆಗ ಆತನಿಗೆ ಕೇವಲ ಹದಿನಾಲ್ಕು ವರ್ಷ. ವಿಧಿಗೆ ಇದ್ಯಾವುದು ಲೆಕ್ಕಕ್ಕೆ ಬರುವುದೇ ಇಲ್ಲ. ತನಗೆ ವಹಿಸಿಕೊಟ್ಟ ಕಾರ್ಯವನ್ನು ತಾನು ಮಾಡುತ್ತ ಸಾಗುವುದು ಮಾತ್ರ ಅದಕ್ಕೆ ಗೊತ್ತು. ಹಾಗೆ ಬದುಕಿನ ಬಂಡಿ ಎಳೆಯುವುದಕ್ಕೆ ಶಾಲೆಯನ್ನು ತೊರೆದು ನಟನೆಗೆ ಇಳಿದ ಚಾಪ್ಲಿನ್ ಬದುಕು ಬದಲಾಗಿದ್ದು ಅಮೇರಿಕಾದ ಕ್ಯಾಲಿಪೋನರ್ಿಯಾದಲ್ಲಿ. ತಾಯಿಯ ಸಾವಿನ ನಂತರದಲ್ಲಿ ಚಿತ್ರಗಳಲ್ಲಿ ನಟಿಸುವ ಕಾರ್ಯ ಮಾಡುತ್ತಲಿದ್ದ ಚಾಪ್ಲಿನ್ಗೆ ಬಂದಂತ ಒಂದು ಅವಕಾಶ ಇಂಗ್ಲಂಡನಿಂದ ಅಮೇರಿಕಾಗೆ ವಲಸೆ ಹೋಗುವಂತೆ ಮಾಡಿತು. ಹಾಗೆ ಅಮೇರಿಕಾಗೆ ತೆರಳಿದ ಚಾಪ್ಲೀನ್ ತನ್ನ ನಟನೆಯ ಜೊತೆಗೆ ನಿದರ್ೇಶನ ಹಾಗೂ ನಿಮರ್ಾಣದಲ್ಲಿ ತೊಡಗಿಕೊಂಡು ದೊಡ್ಡ ಹೆಸರನ್ನು ಮಾಡಿದ. ಅದೆಷ್ಟರ ಮಟ್ಟಿಗೆ ಹೆಸರು ಹಾಗೂ ಖ್ಯಾತಿ ಗಳಿಸುತ್ತಾನೆ ಎಂದರೆ ಚಾಪ್ಲಿನ್ ಮಾಡಿದ ಚಿತ್ರ ಸಿಟಿಲೈಟ್ನ್ನು ನೋಡಿ ಖ್ಯಾತ ವಿಜ್ಞಾನಿ ಅಲ್ಬರ್ಟ ಐನ್ಸ್ಟಿನ್ ಕಣ್ಣೀರು ಹಾಕುತ್ತ ಥೀಯಟರ್ನಿಂದ ಹೊರ ಬರುತ್ತಾರೆ. ನಂತರ ಚಾಪ್ಲಿನ್ ಜೊತೆ ಒಡನಾಟ ಇಟ್ಟುಕೊಂಡು ಸಾಗುತ್ತಾರೆ. ಅವರಿಬ್ಬರ ಮಧ್ಯದಲ್ಲಿ ಅದೆಷ್ಟು ಒಡನಾಟ ಇತ್ತು ಮತ್ತು ಚಾಪ್ಲಿನ್ರನ್ನು ಐನ್ಸ್ಟಿನ್ ಎಷ್ಟು ಗೌರವಿಸುತ್ತಿದ್ದರೆಂದರೆ ಒಂದು ಬಾರಿ ಚಾಪ್ಲಿನ್ ನಿಮ್ಮ ನಟನೆಯಲ್ಲಿ ನಾನು ಮೆಚ್ಚುವುದು ಏನೆಂದರೆ ಅದು ನಿಮ್ಮ ಸಾರ್ವತ್ರಿಕತೆ. ನೀವು ಒಂದೂ ಪದವನ್ನಾಡದೇ ಜಗತ್ತಿಗೆ ಅರ್ಥವಾಗಬಲ್ಲಿರಿ ಎಂದರು. ಅದಕ್ಕೆ ಪ್ರತಿಯಾಗಿ ಉತ್ತರ ನೀಡಿದ ಚಾಪ್ಲಿನ್ ಅದೇನೋ ನಿಜವೇ! ಆದರೆ ನಿಮ್ಮ ಯಾವ ಮಾತನ್ನು ಅರ್ಥ ಮಾಡಿಕೊಳ್ಳದೆಯೂ ಜಗತ್ತು ನಿಮ್ಮನ್ನು ಮೆಚ್ಚಿರುವ ಜನಪ್ರೀಯತೆ ಇನ್ನೂ ದೊಡ್ಡದು ಎಂದರು. ಇದು ವಿಚಿತ್ರ ಆದರೂ ಸತ್ಯ. ಚಾಪ್ಲಿನ್ ಮಾತನಾಡದೇ ನಟನೆಯಲ್ಲಿಯೇ ಎಲ್ಲರಿಗೂ ಅರ್ಥವಾದರೆ ಐನ್ಸ್ಟಿನ್ ನೀಡಿದ ಸಿದ್ಧಾಂತಗಳು ಸಾಮಾನ್ಯರಿಗೆ ಅರ್ಥವಾಗುವುದೇ ಇಲ್ಲ. ಆದರೂ ಅವರನ್ನು ಜನ ಒಪ್ಪುತ್ತಾರೆ. ಇದೆಲ್ಲದಕ್ಕೂ ಮಿಗಿಲಾಗಿ ಇಂಥ ಅಪರೂಪದ ವ್ಯಕ್ತಿತ್ವವುಳ್ಳ ಇಂಥ ಜನಗಳ ನಡುವಿನ ಒಡನಾಟ ಮನಸ್ಸಿಗೆ ಮುದ ನೀಡುತ್ತದೆ. 

ಬರೀ ನಟನೆಯಿಂದ ಮಾತ್ರ ಗುರುತಿಸಿಕೊಳ್ಳದ ಚಾಪ್ಲಿನ್ ಸಮನಸ್ಯೆಗಳನ್ನು ತೆರೆಯ ಮೇಲೆ ತಂದು ತೋರಿಸಿ ವಿಡಂಬನೆಯ ಮೂಲಕ ವ್ಯವಸ್ಥೆಯನ್ನು ತಿವಿಯುತ್ತಿದ್ದರು. ಯುದ್ಧವನ್ನು ವಿರೋಧಿಸಿ ಶಾಂತಿಯನ್ನು ಬಯಸುತ್ತಿದ್ದ ಚಾಪ್ಲಿನ್ಗೆ ಅಮೇರಿಕಾದ ಕೆಲವು ನಾಯಕರು ಕಮ್ಯೂನಿಸ್ಟ್ ಎನ್ನುವ ಹಣೆ ಪಟ್ಟಿಯನ್ನು ಸಹ ಕಟ್ಟಿದ್ದರು ಎನ್ನುವುದು ಆಶ್ಚರ್ಯ ಎನಿಸುತ್ತದೆ. ಸಿಟಿಲೈಟ್ ಯಶಸ್ಸಿನ ನಂತರದಲ್ಲಿ ವಿಶ್ವದ ಹಲವು ದೇಶಗಳಿಗೆ ತೆರಳಿದ ಚಾಪ್ಲಿನ್ ಹಲವು ಜನರ ಜೊತೆ ಒಡನಾಟ ಹೊಂದಿದರು. ಅದರಲ್ಲೂ ಭಾರತದ ಮಹಾತ್ಮಾ ಗಾಂಧೀ ಹಾಗೂ ಚಾಪ್ಲಿನ್ ಉತ್ತಮ ಸ್ನೇಹಿತರಾಗಿದ್ದರು. ಇವರ ಸ್ನೇಹಕ್ಕೆ ಕಾರಣವೇನು ಎಂದು ಹುಡಕಲು ಹೊರಟರೆ ಇಬ್ಬರು ಯುದ್ಧವನ್ನು ವಿರೋಧಿಸಿ ಶಾಂತಿಯನ್ನು ಬಯಸುತ್ತಿದ್ದರು ಎನ್ನುವುದು ನಮಗೆ ತಿಳಿದು ಬರುತ್ತದೆ. ಇಷ್ಟೇ ಅಲ್ಲದೇ ಚಿತ್ರಕಾರ ಪಿಕಾಸೋ, ಸಾಹಿತಿಯಾದ ಬ್ರೆಕ್ಟ್, ವೇಲ್ ಹಾಗೂ ವಿನ್ಸಂಟ್ ಚಚರ್ಿಲರ ಸ್ನೇಹಿತನಾಗುವ ಮಟ್ಟದಲ್ಲಿ ಚಾಪ್ಲಿನ್ ಬೆಳೆದಿದ್ದರೆಂದರೆ ಅರ್ಥ ಮಾಡಿಕೊಳ್ಳಬೇಕು ಅವರ ನಟನೆಯಲ್ಲಿ ಅದೆಷ್ಟು ಶಕ್ತಿ ಅಡಗಿತ್ತು ಎಂದು. ನಮ್ಮ ಕನ್ನಡ ರಂಗಕಮರ್ಿ ಹಾಗೂ ಚಿತ್ರನಟ ಮಾಸ್ಟರ್ ಹಿರಣ್ಣಯ್ಯನವರು ಲಂಚಾವತಾರ ನಾಟಕವನ್ನು ಮಂತ್ರಿಗಳನ್ನು ಕರೆಸಿ, ಮುಂದೆ ಕೂರಿಸಿಕೊಂಡು ಆಡುತ್ತಿದ್ದರು. ಹಾಗೆ ಚಾಪ್ಲಿನ್ ಕೂಡ ಆ ದಶಕದಲ್ಲಿ ಜಾಗತಿಕ ಸಮಸ್ಯೆಗಳನ್ನು ಇದೇ ರೀತಿ ಚಿತ್ರ ನಿಮರ್ಾಣ ಮಾಡಿ ವಿಡಂಬನೆಯ ಮೂಲಕ ಚಾವಟಿ ಏಟು ನೀಡುತ್ತಿದ್ದ. ಇದೇ ಕಾರಣಕ್ಕಾಗಿ ಹಿಟ್ಲರ್ನ ಹಿಟ್ ಲಿಸ್ಟ್ನಲ್ಲಿ ಚಾಪ್ಲಿನ್ ಹೆಸರು ಸಹ ಇತ್ತು ಎನ್ನುವುದು ರೋಚಕ ಎನಿಸುತ್ತದೆ. ಹೀಗೆ ನಟೆನೆಯ ಮೂಲಕ ಬದುಕಿನ ಘಟನೆಗಳಿಗೆ ಕನ್ನಡಿ ಹಿಡಿಯವು ಕಾರ್ಯ ಮಾಡುತ್ತಿದ್ದ ಚಾಪ್ಲಿನ್ ನಟನೆಯನ್ನು ನೆನಸಿಸಕೊಂಡಾಗ ಇಂದೇಕೆ ಈ ಹಾಸ್ಯ ಲೋಕ ಇಷ್ಟು ನೀರಸವಾಗಿದೆ ಎಂದೆನಿಸುತ್ತದೆ. ಮಾತಿಲ್ಲದೆ ಚಿತ್ರ ಮಾಡಿ ಗೆದ್ದ ಆ ವ್ಯಕ್ತಿ ಇಂದಿಗೂ ಪ್ರಸ್ತುತ ಎನಿಸಿದರೆ ದ್ವಂದ್ವಾರ್ಥ ಮಾತಾಡಿ ಚಿತ್ರ ಮುಗಿದ ಮರುಕ್ಷಣವೇ ಮರೆತು ಹೋಗುವ ಈಗಿನ ನಾಯಕರು ವಿಚಿತ್ರ ಎನಿಸುತ್ತಾರೆ. ಅದೇ ಕಾರಕ್ಕಾಗಿಯೇ ಇಂದು ಚಾಪ್ಲಿನ್ ನಮ್ಮನ್ನು ತಮ್ಮ ನಟನೆಯಿಂದ ಕಾಡುತ್ತಾರೆ.

ನಿಜಕ್ಕೂ ಚಾಪ್ಲಿನ್ ಮೇಲೆ ಅದೆಷ್ಟು ಪ್ರೀತಿ ಇದೆ ಜಾಗತಿಕ ವೀಕ್ಷಕರಿಗೆ ಅಂದರೆ ಗುಜರಾತಿನ ಸಮುದ್ರ ತೀರವಾದ ಕಚ್ ಜಿಲ್ಲೆಯ ಆದಿಪುರವೆಂಬ ಪುಟ್ಟದಾದ ಹಳ್ಳಿಯಲ್ಲಿ ಇಂದಿಗೂ ಕೂಡ ಪ್ರತಿವರ್ಷ ಚಾಪ್ಲಿನ್ ಉತ್ಸವವನ್ನು ಆಚರಿಸಲಾಗುತ್ತದೆ ಎಂದರೆ ನೀವು ನಂಬಲೇ ಬೇಕು. ಚಾಪ್ಲಿನ್ ಹುಟ್ಟಿದ ದಿನವಾದ ಏಪ್ರೀಲ್ 16 ರಂದು ಇಡೀ ಊರಿಗೆ ಊರೆ ಚಾಪ್ಲಿನ್ ವೇಷವನ್ನು ತೊಟ್ಟು ಕುಣಿದು ಕುಪ್ಪಳಿಸುತ್ತಾರೆ. ಆ ಮೂಲಕವಾಗಿ ಚಾಪ್ಲಿನ್ ಜನ್ಮದಿನವನ್ನು ಆಚರಣೆ ಮಾಡುತ್ತಾರೆ ಮಾತ್ರವಲ್ಲ ತನ್ನ ನೆಚ್ಚಿನ ನಟನಿಗೆ ಅಭಿಮಾನ ತೋರಿಸುತ್ತಾರೆ. ಈ ರೀತಿಯ ಅಭಿಮಾನ ಪಡೆದ ನಟ ಬಹುಶಃ ಚಾಪ್ಲಿನ್ ಮಾತ್ರ ಇರಬೇಕು ಎನಿಸುತ್ತದೆ. ಅದಕ್ಕೆಲ್ಲ ಕಾರಣವಾಗಿದ್ದೇನು? ಚಾಪ್ಲಿನ್ ಪಟ್ಟ ಕಷ್ಟ. ಅದಕ್ಕೆ ಪ್ರತಿಯಾಗಿ ಆತ ಮಾಡಿದ ಕಲಾ ತಪಸ್ಸು. ಎಲ್ಲಕ್ಕಿಂತ ಮಿಗಿಲಾಗಿ ಸಂಕಟದ ಬದುಕಿನಲ್ಲಿ ಸಂತಸದ ನಗೆಯನ್ನು ಬೀರುವ ಕಾಯಕ. ವಿಚಿತ್ರ ಹೇಗಿದೆ ಎಂದರೆ ಇಡೀ ಜಗತ್ತು ಕ್ರಿಸ್ಮಸ್ ಆಚರಣೆಯ ಸಂಭ್ರಮದಲ್ಲಿದ್ದಾಗ ಚಾಪ್ಲಿನ್ ಬದುಕಿನ ನಟನೆಗೆ ವಿಧಾಯ ಹೇಳಿದ್ದ. ಅಂದರೆ ಡಿಸೆಂಬರ್ 25 ರಂದು ಆತ ಈ ಜಗತ್ತನ್ನು ತ್ಯಜಿಸಿದ್ದ. ನಾಲ್ಕು ಮದುವೆಯಾಗಿ ಹನ್ನೊಂದು ಮಕ್ಕಳನ್ನು ಪಡೆದರೂ ಕೂಡ ನೆಮ್ಮದಿ ಆತನ ಪಾಲಿಗೆ ಮರಿಚಿಕೆಯಾಗಿತ್ತು. ಅಷ್ಟೇ ಅಲ್ಲ ಸತ್ತ ನಂತರ ಚಾಪ್ಲೀನ್ ಶವವನ್ನು ಸಹ ಎತ್ತಿಕೊಂಡು ಹೋಗಿ ಹಣಕ್ಕಾಗಿ ಬೇಡಿಕೆ ಇಟ್ಟ ಸಮಾಜ ಬದುಕಿರುವಾಗಲೂ ನೋವು ನೀಡಿತು. ಸತ್ತ ಮೇಲೆಯೂ ನೋವು ನೀಡಿತು. ಆತ ಮಾತ್ರ ನಗೆಯನ್ನೇ ನೀಡಿದ. ಕೇವಲ ನಗೆಯನ್ನು ಮಾತ್ರ ನೀಡಿ ಆತ ತೆರಳಿಲ್ಲ. ಬದಲಿಗೆ ಸೋಲು ನೋವು ಹತಾಶೆ ಬಂದಾಗ ಬದುಕನ್ನು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ತಿಳಿಸಿ ಹೋಗಿದ್ದಾನೆ. ತಾನು ಸ್ವತಃ ನೋವು ಅನುಭವಿಸದರು ಅದನ್ನು ಮೀರಿ ಬೆಳೆದಿದ್ದಾನೆ. ಇಂದಿಗೂ ತನ್ನ ಶಕ್ತಿಯ ಮೂಲಕವಾಗಿ ನಮ್ಮ ಮನದಲ್ಲಿಯೇ ಉಳಿದಿದ್ದಾನೆ. ತನ್ನ ಬದುಕಿನುದ್ದಕ್ಕೂ ಕಂಡ ಅನುಭವಗಳನ್ನಿಟ್ಟುಕೊಂಡು ಅವರು ಹೇಳಿದ ಮಾತುಗಳು ನಮಗೆಲ್ಲ ಬದುಕಿನಲ್ಲಿ ಭರವಸೆ ಮೂಡಿಸುತ್ತವೆ. ನೀವು ಕೆಳಗೆ ನೋಡುತ್ತಿದ್ದರೆ ಎಂದಿಗೂ ಮಳೆಬಿಲ್ಲನ್ನು ಕಾಣುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ನೋವಿನಿಂದ ಕಸಿಯದೇ ನಗುವಿನೊಂದಿಗೆ ಮೇಲೆಳಬೇಕು ಎಂದು ತಿಳಿಸುತ್ತಾರೆ. ನಗುವಿಲ್ಲದ ದಿನ ನಿಮ್ಮ ಬದುಕಿನಲ್ಲಿ ವ್ಯರ್ಥವಾದ ದಿನ ಎಂದು ಹೇಳುವ ಮೂಲಕ ನಗೆಯ ಮಹತ್ವದ ಜೊತೆಗೆ ನಕ್ಕರದೇ ಸ್ವರ್ಗ ಎನ್ನುವುದನ್ನು ಮನದಟ್ಟು ಮಾಡಿದ್ದಾರೆ. ನೀವು ಮನಬಿಚ್ಚಿ ನಿಜವಾಗಲು ನಕ್ಕರೆ ನೋವನ್ನು ಸ್ವೀಕರಿಸಲು ಹಾಗೂ ಅದರೊಂದಿಗೆ ಆಟವಾಡಲು ಶಕ್ತರಾಗುತ್ತೀರಿ ಎನ್ನುವ ಮಾತನ್ನು ಹೇಳುವ ಮೂಲಕ ನೋವಿನೊಂದಿಗೆ ಆಟವಾಡುವ ತಾಕತ್ತೂ ಕೇವಲ ನಗುವಿಗೆ ಮಾತ್ರ ಇದೆ ಎನ್ನುವುದನ್ನು ತಿಳಿಸಿಕೊಡುತ್ತಾರೆ. 

ಹೀಗೆ ಬದುಕಿನನುದ್ದಕ್ಕೂ ನೋವಿನ ದಾರಿಯಲ್ಲಿ ನಡೆದರೂ ಸಹ ಅದನ್ನು ಜಗತ್ತಿಗೆ ತೋರಗೊಡದೇ ನಗುತ್ತ, ನಗಿಸುತ್ತ ಬದುಕಿನ ಆಟ ಮುಗಿಸಿದ ಚಾಪ್ಲಿನ್ ನಮಗೆ ಒಂದು ರೀತಿಯಲ್ಲಿ ಮಾದರಿಯಾದರೆ ಮಾತಿಲ್ಲದೇ ನಟಿಸಿ ಎದುರಿರುವವರ ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುತ್ತಿದ್ದ ಅವರು ಈಗಿನ ದ್ವಂದ್ವಾರ್ಥದ ಹಾಸ್ಯ ಕಲಾವಿದರಿಗೆ ಮಾದರಿಯಾಗುತ್ತಾರೆ. ಕಲಾವಿದರು ಅವರ ನಟೆನೆಯಿಂದ ಬದಲಾವಣೆ ಕಂಡರೆ ನಾವು ಅವರ ಬದುಕಿನಿಂದ ಬದಲಾಗುವುದಕ್ಕೆ ಸಾಧ್ಯವಿದೆ. ಒಟ್ಟಿನಲ್ಲಿ ಚಾಪ್ಲಿನ್ ಹಾಸ್ಯದ ಜೊತೆಗೆ ಬದುಕು ಎಂದರೇನು ಎನ್ನುವುದನ್ನು ತೋರಿಸಿಕೊಟ್ಟಿದ್ದಕ್ಕೆ ನಾವು ಚಿರಋಣಿ. ನಾವು ಯಾವ ರೀತಿಯಾಗಿ ಅವರನ್ನು ನೋಡುತ್ತೇವೆ ಎನ್ನುವುದರ ಮೇಲೆ ಚಾಪ್ಲಿನ್ ನಮಗೆ ಅರ್ಥವಾಗುತ್ತಾರೆ. 


-ಮಂಜುನಾಥ ಮ. ಜುನಗೊಂಡ

ವಿಜಯಪುರ